ಮಣಿಪುರ ಹಿಂಸಾಚಾರಕ್ಕೆ ಎರಡು ವರ್ಷ: ಮನೆಗೆ ವಾಪಾಸಾಗುವ ಕನಸಿನಲ್ಲಿ ದಿನಗಳೆಯುತ್ತಿರುವ ಸಹಸ್ರಾರು ಸಂತ್ರಸ್ತರು
ಸಾಂದರ್ಭಿಕ ಚಿತ್ರ | PC : PTI
ಹೊಸದಿಲ್ಲಿ: ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ಭುಗಿಲೆದ್ದು ಎರಡು ವರ್ಷಗಳಾದ ಬಳಿಕವೂ 70 ಸಾವಿರಕ್ಕೂ ಅಧಿಕ ಮಂದಿ ಸ್ಥಳಾಂತರಗೊಂಡ ಸಂತ್ರಸ್ತರು, ಜನನಿಬಿಡ ಶಿಬಿರಗಳಲ್ಲಿ ದುರ್ಭರವಾದ ಬದುಕನ್ನು ಸಾಗಿಸುತ್ತಿದ್ದಾರೆ. 2023ರ ಮೇ 3ರಂದು ಮೈತೈ ಹಾಗೂ ಕುಕಿ-ಜೋ ಪಂಗಡಗಳ ನಡುವೆ ಹಿಂಸಾಚಾರ ಭುಗಿಲೆದ್ದಾಗಿನಿಂದ ಈವರೆಗೆ 260 ಮಂದಿ ಸಾವನ್ನಪ್ಪಿದ್ದಾರೆ ಮತ್ತು 1500ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ಮುಖ್ಯಮಂತ್ರಿ ಎನ್.ಬಿರೇನ್‌ಸಿಂಗ್ ಅವರು ಪದಚ್ಯುತಿಯ ಆನಂತರ 2024ರ ಫೆಬ್ರವರಿಯಲ್ಲಿ ರಾಷ್ಟ್ರಪತಿಯವರ ಆಳ್ವಿಕೆಯನ್ನು ಹೇರಿದ ಹೊರತಾಗಿಯೂ ಆ ರಾಜ್ಯದಲ್ಲಿ ಶಾಂತಿಸ್ಥಾಪನೆ ಮರೀಚಿಕೆಯಾಗಿಯೇ ಉಳಿದಿದೆ. ಸಾವಿರಾರು ಸಂತ್ರಸ್ತರು ಮನೆ, ವ್ಯಾಪಾರ, ಉದ್ಯಮಗಳನ್ನು ಕಳೆದುಕೊಂಡು ಅತಂತ್ರ ಪರಿಸ್ಥಿತಿಯಲ್ಲಿದ್ದಾರೆ.
‘‘ನಾನು ಇಂಫಾಲದಲ್ಲಿ ಯಶಸ್ವಿಯಾಗಿ ಕೋಚಿಂಗ್ ಸಂಸ್ಥೆಯೊಂದನ್ನು ನಡೆಸುತ್ತಿದ್ದೆ. ಈಗ ಎಲ್ಲಾ ಹೋಗಿದೆ. ಯಾವುದೇ ಆದಾಯ ಮೂಲವಿಲ್ಲದೆ, ಮೂವರು ಮಕ್ಕಳೊಂದಿಗೆ ನಾನು ಬದುಕುತ್ತಿದ್ದೇನೆ. ಅವರ ಭವಿಷ್ಯದ ಬಗ್ಗೆ ಕಳವಳ ಹೊಂದಿದ್ದೇನೆ’’ ಎಂದು ಸಂತ್ರಸ್ತರಲ್ಲೊಬ್ಬರಾದ ಜಿ.ಕಿಪ್‌ಜೆನ್ ತಿಳಿಸಿದ್ದಾರೆ.
ಇಂಫಾಲವೊಂದರಲ್ಲಿ ಜೋಪಡಿ ಮನೆಯೊಂದರಲ್ಲಿ ವಾಸಿಸುತ್ತಿರುವ ಅಬೆನಾವೊ ದೇವಿ ಅವರು ತಾವೀಗ ಮೂಲಭೂತ ಅವಶ್ಯಕತೆಗಳಿಗಾಗಿ ಇತರರ ಕೃಪೆಯಡಿ ಬದುಕಬೇಕಾದ ತಮ್ಮ ದಯನೀಯ ಪರಿಸ್ಥಿತಿಯನ್ನು ವಿವರಿಸುತ್ತಾರೆ. ಹಿಂಸಾಚಾರ ಭುಗಿಲೆದ್ದ ಮೊದಲ ಕೆಲವು ತಿಂಗಳುಗಳಲ್ಲಿ ಸಮುದಾಯದಿಂದ ಗಣನೀಯ ಬೆಂಬಲ ದೊರೆತಿತ್ತು. ದಿನಸಿ ಸಾಮಾಗ್ರಿಗಳು ಸಮಯಕ್ಕೆ ಸರಿಯಾಗಿ ಬರುತ್ತಿತ್ತು. ಆದರೆ ಕ್ರಮೇಣ ನಾವು ಮರೆತುಹೋದೆವು. ಇದೀಗ ಇತರರ ಕೃಪೆಯಡಿ ಬದುಕಬೇಕಾದ ಪರಿಸ್ಥಿತಿ ಬಂದೊದಗಿದೆ. ಇದು ನಿಜಕ್ಕೂ ಅವಮಾನಕಾರಿ’’ ಎಂದವರು ಹೇಳುತ್ತಾರೆ.
ಮೈತೈ ಹಾಗೂ ಕುಕಿ ಜೊ ಸಮುದಾಯಗಳ ಮೇಲೆ ಸಶಸ್ತ್ರ ಸಂಘಟನೆಗಳ ನಿಯಂತ್ರಣ ಮುಂದುವರಿದಿರುವುದು ಪರಿಸ್ಥಿತಿಯನ್ನು ಸಂಕೀರ್ಣಗೊಳಿಸಿದೆಯೆಂದು ಕೇಂದ್ರದ ಭದ್ರತಾ ಅಧಿಕಾರಿಯೊಬ್ಬರು ಹೇಳುತ್ತಾರೆ.
ಈ ಸಂಘಟನೆಗಳು ಜನಸಾಮಾನ್ಯರ ಬವಣೆಗಳನ್ನು ಕಡೆಗಣಿಸಿ ತಮ್ಮ ಅಜೆಂಡಾವನ್ನು ಸಾಧಿಸಲು ಯತ್ನಿಸುತ್ತವೆ ಎಂದವರು ಹೇಳಿದ್ದಾರೆ.
ಇಂಫಾಲ ಕಣಿವೆಯಲ್ಲಿ ಸಶಸ್ತ್ರ ಸಂಘಟನೆಗಳಿಂದ ಜನರ ಸುಲಿಗೆ ಪ್ರಕರಣದಲ್ಲಿ ಭಾರೀ ಏರಿಕೆಯಾಗಿದೆ. ಕುಕಿಗಳು ಬಹುಸಂಖ್ಯಾತರಾಗಿರುವ ಪ್ರದೇಶಗಳಲ್ಲಿ ಅವರು ಅಕ್ರಮವಾಗಿ ತೆರಿಗೆಯನ್ನು ವಸೂಲಿ ಮಾಡುತ್ತಾರೆ. ಈ ಮೊದಲು ನಿಷ್ಕ್ರಿಯವಾಗಿದ್ದ ಭಯೋತ್ಪಾದಕ ಗುಂಪುಗಳು ಈಗ ಮರಳಿಶಕ್ತಿಯನ್ನು ಪಡೆದುಕೊಂಡಿವೆ. ಅವು ಬಹುತೇಕವಾಗಿ ನಿರುದ್ಯೋಗಿ, ಕಡಿಮೆ ಶಿಕ್ಷಣ ಪಡೆದಿರುವ ಯವಜನರನ್ನು ಸೇರಿಸಿಕೊಳ್ಳುತ್ತಿವೆ ’’ ಎಂದು ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ.
ಹಲವಾರು ಮಂದಿ ನಿರ್ವಸಿತರು ಬದುಕುಳಿಯಲು ಸಣ್ಣಪುಟ್ಟ ಕೆಲಸಗಳನ್ನು ಮಾಡಿಕೊಂಡು ದಿನದೂಡುತ್ತಿದ್ದಾರೆ. ಸಂಘರ್ಷ ಆರಂಭವಾಗಿ ಎರಡು ವರ್ಷಗಳೇ ಕಳೆದರೂ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಸಾಮಾನ್ಯ ಪರಿಸ್ಥಿತಿ ಸ್ಥಾಪನೆಗೆ ಹೆಣಗಾಡುತ್ತಿವೆ. ಇತ್ತ ಸಾವಿರಾರು ಸಂತ್ರಸ್ತರು ತಮ್ಮ ಮನೆಗೆ ಮರಳಿ, ಬದುಕನ್ನು ಮತ್ತೆ ಕಟ್ಟಿಕೊಳ್ಳುವ ಕನಸಿನಲ್ಲಿಯೇ ದಿನದೂಡುತ್ತಿದ್ದಾರೆ.