ಮಹಾರಾಷ್ಟ್ರದ ಹಿತಕ್ಕಾಗಿ ಒಗ್ಗೂಡುವ ಸುಳಿವು ನೀಡಿದ ಉದ್ಧವ್ - ರಾಜ್ ಠಾಕ್ರೆ
ಹೊಸದಿಲ್ಲಿ:ರಾಜ್ ಠಾಕ್ರೆ ಅವರು 2005ರಲ್ಲಿ ಸ್ವಂತ ಪಕ್ಷವೊಂದನ್ನು ಆರಂಭಿಸುವ ನಿರ್ಧಾರವನ್ನು ಘೋಷಿಸಿದ ಬಳಿಕ ರಾಜಕೀಯವಾಗಿ ವಿಭಜನೆಗೊಂಡ ಠಾಕ್ರೆ ಕುಟುಂಬವು ಮತ್ತೆ ಒಂದಾಗುವ ಸೂಚನೆಗಳು ಲಭ್ಯವಾಗಿವೆ. ಮರಾಠಿ ಸಂಸ್ಕೃತಿ ಹಾಗೂ ಆಸ್ಮಿತೆಗೆ ಎದುರಾಗಿರುವ ಬೆದರಿಕೆಯನ್ನು ಎದುರಿಸಲು, ತಾವಿಬ್ಬರೂ ಒಗ್ಗೂಡುವ ಸುಳಿವನ್ನು ಸೋದರಸಂಬಂಧಿಗಳಾದ ರಾಜ್ ಹಾಗೂ ಉದ್ಧವ್ ಠಾಕ್ರೆ ನೀಡಿದ್ದಾರೆ.
ಮಹಾರಾಷ್ಟ್ರದ ಭಾಷಾವಾರು ಹಾಗೂ ಸಾಂಸ್ಕೃತಿಕ ಹಿತಾಸಕ್ತಿಗಳು, ರಾಜಕೀಯ ಪೈಪೋಟಿಗಿಂತ ಮಿಗಿಲಾದುದೆಂಬ ಸಮಾನ ಸಂದೇಶವನ್ನು ಶಿವಸೇನಾ (ಯುಬಿಟಿ) ನಾಯಕ ಬಾಳಾಠಾಕ್ರೆ ಹಾಗೂ ಮಹಾರಾಷ್ಟ್ರ ನವನಿರ್ಮಾಣ ಸೇನಾ (ಎಂಎನ್ಎಸ್)ದ ನಾಯಕ ರಾಜ್ ಠಾಕ್ರೆ ಇತ್ತೀಚಿನ ದಿನಗಳಲ್ಲಿ ನೀಡುತ್ತಾ ಬಂದಿದ್ದಾರೆ.
ರಾಜ್ ಠಾಕ್ರೆ ಅವರೊಂದಿಗೆ ನಟ-ನಿರ್ದೇಶಕ ಮಹೇಶ್ ಮಂಜ್ರೇಕರ್ ಅವರು ಪಾಡ್ ಕಾಸ್ಟ್ ನಲ್ಲಿ ನಡೆಸಿದ ಸಂದರ್ಶನದಲ್ಲಿ ಸೋದರ ಸಂಬಂಧಿಗಳು ಜೊತೆಗೂಡುವ ಸಾಧ್ಯತೆಯನ್ನು ಪ್ರಶ್ನಿಸಲಾಗಿತ್ತು. ಅದಕ್ಕುತ್ತರಿಸಿದ ರಾಜ್ ಠಾಕ್ರೆ ಅವರು, ತನ್ನ ಹಾಗೂ ಉದ್ಧವ್ ನಡುವಿನ ಭಿನ್ನಾಭಿಪ್ರಾಯಗಳು ಮಹಾರಾಷ್ಟ್ರದ ಹಿತಾಸಕ್ತಿಗಳಿಗೆ ಧಕ್ಕೆಯುಂಟು ಮಾಡಿವೆ ಎಂದು ಹೇಳಿದ್ದರು.
‘‘ ಉದ್ಭವ್ ಹಾಗೂ ನನ್ನ ನಡುವೆ ಸಣ್ಣಪುಟ್ಟ ಜಗಳಗಳು ಹಾಗೂ ವಿವಾದಗಳಾಗಿವೆ. ಆದರೆ ಮಹಾರಾಷ್ಟ್ರವು ಅವೆಲ್ಲವುಗಳಿಗಿಂತಲೂ ಹಿರಿದಾದುದು. ಈ ಭಿನ್ನಾಭಿಪ್ರಾಯಗಳು ಮಹಾರಾಷ್ಟ್ರ ಹಾಗೂ ಮರಾಠಿ ಜನತೆಯ ಅಸ್ತಿತ್ವಕ್ಕೆ ದುಬಾರಿಯಾಗಿ ಪರಿಣಮಿಸಿವೆ. ಇಬ್ಬರೂ ಒಗ್ಗೂಡುವುದೇನೂ ಕಷ್ಟವಿಲ್ಲ. ಆದರೆ ಎಲ್ಲಾ ರಾಜಕೀಯ ಪಕ್ಷಗಳ ಮರಾಠಿ ಜನರು ಒಗ್ಗಟ್ಟಾಗಿ ಒಂದೇ ರಾಜಕೀಯ ಪಕ್ಷವನ್ನು ಸ್ಥಾಪಿಸುವಂತಹ ದೊಡ್ಡ ಚಿತ್ರವೊಂದನ್ನು ನಾವು ನೋಡಬೇಕಿದೆ ಎಂದವರು ಹೇಳಿದರು
ಶಾಸಕರು ಹಾಗೂ ಸಂಸದರು ನನ್ನ ಜೊತೆಗಿದ್ದರೂ ನಾನು ಶಿವಸೇನಾವನ್ನು ತೊರೆದು ಬಂದೆ. ಆನಂತರವೂ ನಾನು ಏಕಾಂಗಿಯಾಗಿ ಸಾಗುವುದನ್ನೇ ಆಯ್ಕೆ ಮಾಡಿಕೊಂಡೆ. ಯಾಕೆಂದರೆ ಬಾಳಾಸಾಹೇಬ್ ಒಬ್ಬರನ್ನು ಹೊರತುಪಡಿಸಿ ಬೇರೆ ಯಾರ ಕೈಕೆಳಗೂ ಕೆಲಸ ಮಾಡಲು ನನಗೆ ಸಾಧ್ಯವಾಗದು. ಉದ್ಧವ್ ಜೊತೆ ಕೆಲಸ ಮಾಡಲು ನನಗೂ ಅಭ್ಯಂತರವಿಲ್ಲ. ಆದರೆ ಇನ್ನೊಂದು ಕಡೆಯವರಿಗೂ ನನ್ನ ಜೊತೆ ಕೆಲಸ ಮಾಡಲು ಮನಸ್ಸಿದೆಯೇ? ಎಂದವರು ಪ್ರಶ್ನಿಸಿದ್ದಾರೆ.
ಒಂದು ವೇಳೆ ನಾವು ಒಗ್ಗೂಡಬೇಕೆಂದು ಮಹಾರಾಷ್ಟ್ರ ಬಯಸಿದ್ದರೆ, ಇಡೀ ಮಹಾರಾಷ್ಟ್ರ ಆ ಬಗ್ಗೆ ಮಾತನಾಡಲಿ. ಇಂತಹ ವಿಷಯಗಳಲ್ಲಿ ನಾನು ಅಹಮಿಕೆಯನ್ನು ತೋರಿಸಲಾರೆ ಎಂದು ರಾಜ್ ಠಾಕ್ರೆ ಹೇಳಿದ್ದಾರೆ.
ಇತ್ತ ಉದ್ಧವ್ಠಾಕ್ರೆ ಅವರು ಕೂಡಾ ಭಾರತೀಯ ಕಾಮಗಾರಿ ಸೇನಾ ಆಯೋಜಿಸಿದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ರಾಜ್ ಠಾಕ್ರೆ ಜೊತೆ ಶರತ್ತುಬದ್ಧವಾಗಿ ರಾಜಿಯಾಗುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ. ‘‘ನಾವು ಒಗ್ಗಟ್ಟಾಗಿರುತ್ತಿದ್ದರೆ ಮಹಾರಾಷ್ಟ್ರಕ್ಕಾಗಿ ಕೆಲಸ ಮಾಡುವಂತಹ ಸರಕಾರವನ್ನು ಸ್ಥಾಪಿಸಲು ಸಾಧ್ಯವಿತ್ತು. ಆದರೆ ಒಂದು ದಿನ ಕೇಂದ್ರ ಸರಕಾರವನ್ನು ಬೆಂಬಲಿಸುವುದು, ಮರುದಿನ ವಿರೋಧಿಸುವುದು ಹಾಗೂ ಇನ್ನೊಂದು ರಾಜಿಯಾಗುವುದು ಹೀಗೆ ನಾವು ಪದೇಪದೇ ಮಗ್ಗುಲುಗಳನ್ನು ಬದಲಾಯಿಸುತ್ತಲೇ ಇರಲು ಸಾಧ್ಯವಿಲ್ಲವೆಂದು ಉದ್ಧವ್ ಅಭಿಪ್ರಾಯಿಸಿದ್ದಾರೆ.
ಮಹಾರಾಷ್ಟ್ರದ ಹಿತಾಸಕ್ತಿಗಳಿಗೆ ಯಾರು ವಿರುದ್ಧವಾಗಿದ್ದಾರೋ ಅವರನ್ನು ನಾನು ಸ್ವಾಗತಿಸುವುದಿಲ್ಲ ಅಥವಾ ಅವರೊಂದಿಗೆ ಕೂರುವುದಿಲ್ಲ. ಈ ವಿಷಯದಲ್ಲಿ ನಾವು ಸ್ಪಷ್ಟತೆಯನ್ನು ಹೊಂದಿರಬೇಕು. ಆನಂತರವಷ್ಟೇ ಮಹಾರಾಷ್ಟ್ರಕ್ಕಾಗಿ ಜೊತೆಯಾಗಿ ಶ್ರಮಿಸೋಣ ಎಂದು ಠಾಕ್ರೆ ಅಭಿಪ್ರಾಯಿಸಿದ್ದಾರೆ.