×
Ad

ಎಂಎನ್ಎಸ್ ಜೊತೆ ಉದ್ಧವ್ ನೇತೃತ್ವದ ಶಿವಸೇನೆ ಮೈತ್ರಿ?: ಸಂಜಯ್ ರಾವತ್ ಪ್ರತಿಕ್ರಿಯಿಸಿದ್ದು ಹೀಗೆ...

Update: 2025-05-24 17:56 IST

ಉದ್ಧವ್ ಠಾಕ್ರೆ , ರಾಜ್ ಠಾಕ್ರೆ | PC : PTI 

ಮುಂಬೈ: ಮರಾಠಿ ಜನರ ಹಿತದೃಷ್ಟಿಯಿಂದ ರಾಜ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್ಎಸ್) ಜೊತೆ ಮೈತ್ರಿ ಮಾಡಿಕೊಳ್ಳುದಕ್ಕೆ ಪಕ್ಷವು ಒಲವು ಹೊಂದಿದೆ ಎಂದು ಶಿವಸೇನಾ ನಾಯಕ ಸಂಜಯ್ ರಾವತ್ ಹೇಳಿದ್ದಾರೆ.   

ಕಳೆದ ತಿಂಗಳು, ಸೋದರಸಂಬಂಧಿಗಳಾದ ರಾಜ್ ಮತ್ತು ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ, ʼಅಸಮಾಧಾನವನ್ನು ಬದಿಗೊತ್ತಿ ಮರಾಠಿ ಮಾತನಾಡುವ ಜನರ ಹಿತದೃಷ್ಟಿಯಿಂದ ಕೈಜೋಡಿಸಬಹುದುʼ ಎಂಬ ಹೇಳಿಕೆಗಳೊಂದಿಗೆ ಸಂಭಾವ್ಯ ಮೈತ್ರಿ ಬಗ್ಗೆ ಊಹಾಪೋಹಗಳನ್ನು ಹುಟ್ಟುಹಾಕಿದ್ದರು.

ಎಂಎನ್ಎಸ್ ಜೊತೆಗಿನ ಮೈತ್ರಿ ಬಗ್ಗೆ ಪ್ರತಿಕ್ರಿಯಿಸಿದ ಶಿವಸೇನಾ(ಯುಬಿಟಿ) ನಾಯಕ ಸಂಜಯ್ ರಾವತ್, ಮರಾಠಿ ಜನರ ಹಿತದೃಷ್ಟಿಯಿಂದ ರಾಜ್ ಠಾಕ್ರೆ ಜೊತೆಗಿನ ಮೈತ್ರಿಗೆ ಸಂಬಂಧಿಸಿದಂತೆ ಉದ್ಧವ್‌ ಅವರ ನಿಲುವು ಮನಸ್ಸು ಮತ್ತು ಹೃದಯದಿಂದ ಕೂಡಿದೆ ಎಂದು ಹೇಳಿದರು.

ಮುಂಬೈ, ಥಾಣೆ, ನಾಸಿಕ್, ನಾಗ್ಪುರ ಮತ್ತು ಪುಣೆಯ ನಾಗರಿಕ ನಿಗಮಗಳು ಸೇರಿದಂತೆ ಮಹಾರಾಷ್ಟ್ರದ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಈ ವರ್ಷದ ಕೊನೆಯಲ್ಲಿ ನಡೆಯಲಿವೆ.

ಇದಕ್ಕೂ ಮೊದಲು ಹಿರಿಯ ಎಂಎನ್ಎಸ್ ನಾಯಕ ಸಂದೀಪ್ ದೇಶಪಾಂಡೆ ಮಾತನಾಡಿ, ರಾಜ್ ಠಾಕ್ರೆ ಅವರು ಶಿವಸೇನೆ (ಯುಬಿಟಿ) ಜೊತೆಗಿನ ಮೈತ್ರಿ ಬಗ್ಗೆ ಸರಿಯಾದ ಪ್ರಸ್ತಾವನೆಯನ್ನು ಮುಂದಿಟ್ಟರೆ ಮಾತ್ರ ಪರಿಗಣಿಸುವುದಾಗಿ ಹೇಳಿದ್ದರು.

ಇಬ್ಬರು ಠಾಕ್ರೆಗಳ ನಡುವಿನ ಹೊಂದಾಣಿಕೆಯ ಬಗ್ಗೆ ರಾಜ್ಯ ರಾಜಕೀಯದಲ್ಲಿ ಗುಸುಗುಸು ಕೇಳಿ ಬರುತ್ತಿದೆ. ಕಳೆದ ತಿಂಗಳು ಚಲನಚಿತ್ರ ನಿರ್ಮಾಪಕ ಮಹೇಶ್ ಮಂಜ್ರೇಕರ್ ಅವರೊಂದಿಗಿನ ಸಂದರ್ಶನದಲ್ಲಿ ರಾಜ್ ಠಾಕ್ರೆ ಈ ಬಗ್ಗೆ ಮಾತನಾಡಿದ್ದರು. ಈ ಹೇಳಿಕೆ ನೀಡಿದ ಕೆಲವೇ ಗಂಟೆಗಳಲ್ಲಿ ಉದ್ಧವ್ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದರು.

2005ರಲ್ಲಿ ರಾಜ್ ಠಾಕ್ರೆ ಶಿವಸೇನೆಯನ್ನು ತೊರೆದು ಹೊಸ ಪಕ್ಷವನ್ನು ಸ್ಥಾಪಿಸಿದ್ದರು. ಈ ಹಿಂದೆ ಅವರು ಶಿವಸೇನೆ(ಯುಬಿಟಿ)ಯ ಎದುರಾಳಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News