ನೆಲಸಮವಾಗಲಿರುವ ಉಜ್ಜಯಿನಿ ಅತ್ಯಾಚಾರ ಆರೋಪಿಯ ನಿವಾಸ
ಸಾಂದರ್ಭಿಕ ಚಿತ್ರ.
ಭೋಪಾಲ್: ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ್ದ ಆರೋಪಿಯ ನಿವಾಸವು ಅಕ್ರಮವಾಗಿ ನಿರ್ಮಾಣಗೊಂಡಿದೆ ಎಂಬ ಆರೋಪವನ್ನು ಆಧರಿಸಿ ನಾಳೆ ಆತನ ನಿವಾಸವನ್ನು ನೆಲಸಮಗೊಳಿಸಲಾಗುತ್ತದೆ ಎಂದು ndtv.com ವರದಿ ಮಾಡಿದೆ.
ಅರೆನಗ್ನಗೊಂಡಿದ್ದ 15 ವರ್ಷ ಬಾಲಕಿಯು ರಕ್ತ ಸುರಿಸುತ್ತಾ, ನೆರವಿಗಾಗಿ ಮನೆ ಮನೆಯ ಬಾಗಿಲು ತಟ್ಟಿರುವ ವೀಡಿಯೊಗಳು ಕಳೆದ ವಾರ ದೇಶಾದ್ಯಂತ ಆಕ್ರೋಶ ಭುಗಿಲೆಬ್ಬಿಸಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ಆಟೋರಿಕ್ಷಾ ಚಾಲಕನಾದ ಆರೋಪಿ ಭರತ್ ಸೋನಿಯನ್ನು ಬಂಧಿಸಲಾಗಿತ್ತು. ಭರತ್ ಸೋನಿ ಸದ್ಯ ಜೈಲಿನಲ್ಲಿದ್ದಾನೆ. ಆತನ ಕುಟುಂಬವು ಹಲವಾರು ವರ್ಷಗಳಿಂದ ಸರ್ಕಾರಿ ಭೂಮಿಯಲ್ಲಿ ಮನೆ ನಿರ್ಮಿಸಿಕೊಂಡು ವಾಸಿಸುತ್ತಿದೆ ಎಂದು ಉಜ್ಜಯಿನಿ ನಗರಸಭೆಯು ತಿಳಿಸಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಉಜ್ಜಯಿನಿ ನಗರಸಭೆಯ ಆಯುಕ್ತ ರೋಶನ್ ಸಿಂಗ್, ಆರೋಪಿ ಭರತ್ ಸೋನಿ ಕುಟುಂಬವು ವಾಸಿಸುತ್ತಿರುವ ಭೂಮಿಯು ಸರ್ಕಾರಕ್ಕೆ ಸೇರಿದ್ದು, ಹೀಗಾಗಿ ಅವರ ನಿವಾಸವನ್ನು ನೆಲಸಮಗೊಳಿಸಲು ಯಾವುದೇ ನೋಟಿಸ್ ಜಾರಿ ಮಾಡಲಾಗಿಲ್ಲ. ಮಧ್ಯಪ್ರದೇಶ ಪೊಲೀಸರ ಸಹಭಾಗಿತ್ವದೊಂದಿಗೆ ನಗರಸಭೆಯು ನಾಳೆ ನೆಲಸಮ ಕಾರ್ಯಾಚರಣೆಯನ್ನು ನಡೆಸಲಿದೆ” ಎಂದು ತಿಳಿಸಿದ್ದಾರೆ.
ಸುಮಾರು 700 ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಿ, ಸುದೀರ್ಘ ತನಿಖೆ ನಡೆಸಿದ ನಂತರ ಭರತ್ ನನ್ನು ಪೊಲೀಸರು ಬಂಧಿಸಿದ್ದರು.
“ತನಿಖೆಯಲ್ಲಿ 30-35 ಪೊಲೀಸರು ಭಾಗಿಯಾಗಿದ್ದರು. ಯಾರೂ ಕೂಡಾ ಮೂರ್ನಾಲ್ಕು ದಿನಗಳಿಂದ ನಿದ್ರಿಸಿಲ್ಲ” ಎಂದು ಹಿರಿಯ ಪೊಲೀಸ್ ಅಧಿಕಾರಿ ಅಜಯ್ ವರ್ಮ ndtv ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಸೆಪ್ಟೆಂಬರ್ 26ರಂದು ಹಗ್ಗ ಕಟ್ಟಿದ, ರಕ್ತ ಸುರಿಸುತ್ತಿದ್ದ ಹಾಗೂ ನೆರವಿಗಾಗಿ ಬೇಡುತ್ತಿದ್ದ ಅಪ್ರಾಪ್ತ ಬಾಲಕಿಯ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಹರಿದಿರುವ ಬಟ್ಟೆ ತೊಟ್ಟಿರುವ ಬಾಲಕಿಯೊಬ್ಬಳು ಮನೆ ಮನೆಯ ಬಾಗಿಲು ಬಡಿದು ನೆರವು ಬೇಡುತ್ತಿರುವ ದೃಶ್ಯವು ಉಜ್ಜಯಿನಿಯಿಂದ ಸುಮಾರು 15 ಕಿಮೀ ದೂರದಲ್ಲಿರುವ ಬದ್ನಾಗರ್ ರಸ್ತೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಈ ಭಯಾನಕ ದೃಶ್ಯ ದೇಶದಲ್ಲಿ ಆಘಾತವುಂಟುಮಾಡಿತ್ತು. ಆ ವೀಡಿಯೊದಲ್ಲಿ ನೆರವಿಗಾಗಿ ಬೇಡುತ್ತಿರುವ ಬಾಲಕಿಯನ್ನು ಜನರು ಅಟ್ಟುತ್ತಿರುವ ದೃಶ್ಯವೂ ಸೆರೆಯಾಗಿತ್ತು.