×
Ad

ಅನೈತಿಕ ಪೊಲೀಸ್ ಗಿರಿ ಪ್ರಕರಣ: ಯುವಕ-ಯವತಿಗೆ ಸಂಘಪರಿವಾರದ ಕಾರ್ಯಕರ್ತರಿಂದ ಥಳಿತ; ವಿಡಿಯೋ ವೈರಲ್

Update: 2023-08-16 21:07 IST

Photo : Twitter \ @meerfaisal01

ಮುಂಬೈ: ಹಿಂದೂ ಯುವತಿಯ ಜೊತೆಗಿದ್ದ ಮುಸ್ಲಿಂ ಯುವಕನೋರ್ವನಿಗೆ ಸಂಘ ಪರಿವಾರದ ಗುಂಪೊಂದು ಥಳಿಸಿದ ಘಟನೆ ಮಂಬೈಯ ಬಾಂದ್ರಾ ಟರ್ಮಿನಸ್ ರೈಲ್ವೆ ಸ್ಟೇಷನ್ ನಲ್ಲಿ ನಡೆದಿದೆ. ಈ ಘಟನೆ ಜುಲೈಯಲ್ಲಿ ನಡೆದಿದ್ದು, ಇದರ ವೀಡಿಯೊ ಮಂಗಳವಾರ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ.

ವೀಡಿಯೊದಲ್ಲಿ ಸಂಘಪರಿವಾರದ ಗುಂಪು ಯುವಕನನ್ನು ರೈಲ್ವೆ ನಿಲ್ದಾಣದಿಂದ ಹೊರಗೆ ಎಳೆದುಕೊಂಡು ಬರುತ್ತಿರುವುದು, ಥಳಿಸುತ್ತಿರುವುದು ಹಾಗೂ ‘‘ಜೈ ಶ್ರೀರಾಮ್’’, ‘‘ಲವ್ ಜಿಹಾದ್ ನಿಷೇಧಿಸಿ’’ ಎಂದು ಘೋಷಣೆಗಳನ್ನು ಕೂಗುತ್ತಿರುವುದು ಕಂಡು ಬಂದಿದೆ. ವೀಡಿಯೊದಲ್ಲಿ ತಮಗೆ ಥಳಿಸದಂತೆ ಯುವತಿ ಹಲ್ಲೆಕೋರರಲ್ಲಿ ವಿನಂತಿಸುತ್ತಿರುವುದು ಕೂಡ ದಾಖಲಾಗಿದೆ. ಗುಂಪು ಯುವಕನಿಗೆ ಥಳಿಸಿದ ಬಳಿಕ ಬಾಂದ್ರಾದಲ್ಲಿರುವ ನಿರ್ಮಲ ನಗರ್ ಪೊಲೀಸ್ ಠಾಣೆಗೆ ಕರೆದೊಯ್ದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಘಟನೆ ಬಗ್ಗೆ ಬುಧವಾರ ಪ್ರತಿಕ್ರಿಯಿಸಿರುವ ಪೊಲೀಸ್ ಉಪ ಆಯುಕ್ತ ದೀಕ್ಷಿತ್ ಗೇಡಂ, ಘಟನೆ ಜುಲೈ 21ರಂದು ನಡೆದಿದೆ. ನಾವು ನಿನ್ನೆ ಆ ವೀಡಿಯೋ ನೋಡಿದೆವು. ರೈಲ್ವೆ ನಿಲ್ದಾಣದಲ್ಲಿ ಘಟನೆ ನಡೆದಾಗ ನಾವು ಈ ಬಗ್ಗೆ ಪರಿಶೀಲಿಸುವಂತೆ ರೈಲ್ವೆ ಪೊಲೀಸರಿಗೆ ಸೂಚನೆ ನೀಡಿದೆವು. ಈ ಪ್ರಕರಣ ರೈಲ್ವೆ ಪೊಲೀಸ್ ವ್ಯಾಪ್ತಿಗೆ ಬರುವುದರಿಂದ ನಾವು ದೂರು ದಾಖಲಿಸಿಕೊಂಡಿಲ್ಲ ಎಂದಿದ್ದಾರೆ. ನಮ್ಮ ತಂಡ ಈ ವೈರಲ್ ವೀಡಿಯೊವನ್ನು ಮಂಗಳವಾರ ಗಮನಿಸಿದೆ. ನಾವು ಪ್ರಕರಣ ದಾಖಲಿಸುವ ಪ್ರಕ್ರಿಯೆ ಆರಂಭಿಸಿದ್ದೇವೆ. ಇದುವರೆ ಪ್ರಥಮ ಮಾಹಿತಿ ವರದಿ ದಾಖಲಿಸಿಲ್ಲ ಎಂದು ರೈಲ್ವೆ ಪೊಲೀಸ್ನ ಉಪ ಆಯುಕ್ತ ಸಂದೀಪ್ ಭಜಿಭಕ್ರೆ ತಿಳಿಸಿದ್ದಾರೆ.

ಘಟನೆಗೆ ಎರಡು ದಿನ ಮುನ್ನ ಈ ಯುವಕ ಹಾಗೂ ಯುವತಿ ಥಾಣೆ ಜಿಲ್ಲೆಯ ಅಂಬರನಾಥ್ನಲ್ಲಿರುವ ತಮ್ಮ ಮನೆಯಿಂದ ಓಡಿ ಹೋಗಿದ್ದಾರೆ. ಈ ಹಿನ್ನೆಲೆಯಲ್ಲಿ ಯುವಕನ ವಿರುದ್ಧ ಅಪಹರಣ ಪ್ರಕರಣ ದಾಖಲಿಸಲಾಗಿದೆ ಎಂದು ನಿರ್ಮಲ ನಗರ್ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಈ ಘಟನೆ ಕುರಿತಂತೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಸಮಾಜವಾದಿ ಪಕ್ಷದ ಶಾಸಕ ರಾಯಿಸ್ ಖಾನ್ ಹಾಗೂ ಎಐಎಂಐಎಂನ ರಾಷ್ಟ್ರೀಯ ವಕ್ತಾರ ವಾರಿಸ್ ಪಠಾಣ್ ಆರೋಪಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News