×
Ad

ಲಿಂಗ ಸಮಾನತೆ ಗುರಿ ಹಳಿ ತಪ್ಪಿದರೆ 160 ಲಕ್ಷ ಕೋಟಿ ಡಾಲರ್ ಮಾನವ ಬಂಡವಾಳ ನಷ್ಟ:‌ ಯುನಿಸೆಫ್ ಎಚ್ಚರಿಕೆ‌

Update: 2025-05-02 22:36 IST

PC : UNICEF

ಹೊಸದಿಲ್ಲಿ: ಲಿಂಗ ಸಮಾನತೆಯ ಮೇಲೆ ಗಮನವನ್ನು ಕೇಂದ್ರೀಕರಿಸಿರುವ ಸುಸ್ಥಿರ ಅಭಿವೃದ್ಧಿ ಗುರಿ 5ನ್ನು ಸಾಧಿಸುವಲ್ಲಿ ‘ಭಾರತ ಸೇರಿದಂತೆ ಜಗತ್ತು ಹಿಂದುಳಿದಿದ್ದು, ಇದರ ಪರಿಣಾಮಗಳು 160 ಲಕ್ಷ ಕೋಟಿ ಡಾಲರ್ ಗಳ ಮಾನವ ಬಂಡವಾಳ(ಕೆಲಸಗಾರರ ಸಾಮರ್ಥ್ಯಗಳು ಮತ್ತು ಕೌಶಲ್ಯಗಳ ಆರ್ಥಿಕ ಮೌಲ್ಯ) ನಷ್ಟಕ್ಕೆ ಕಾರಣವಾಗಬಹುದು ಎಂದು ಯುನಿಸೆಫ್ ಶುಕ್ರವಾರ ಎಚ್ಚರಿಕೆ ನೀಡಿದೆ.

‘ಭಾರತ ಮತ್ತು ಜಗತ್ತಿನಾದ್ಯಂತ ಪ್ರಾಥಮಿಕ ಶಾಲೆಗಳಲ್ಲಿ ಪ್ರವೇಶಗಳು ದಾಖಲೆಯ ಮಟ್ಟಕ್ಕೇರಿದ್ದರೂ ಉನ್ನತ ತರಗತಿಗಳಲ್ಲಿ ಪ್ರವೇಶಗಳು ತೀವ್ರವಾಗಿ ಕುಸಿಯುತ್ತಿವೆ ಎಂದು ಯುನಿಸೆಫ್ ಭಾರತ ಪ್ರತಿನಿಧಿ ಸಿಂಥಿಯಾ ಮೆಕ್‌ಕ್ರೊ ಹೇಳಿದರು.

ಸಾರಿಗೆ ಅಡೆತಡೆಗಳು,ಶಾಲಾ ಮೂಲಸೌಕರ್ಯ ಕೊರತೆ ಮತ್ತು ಬಡತನದಿಂದಾಗಿ ಶಾಲೆ ತೊರೆಯುವಿಕೆಗಳನ್ನು ಬಗೆಹರಿಸಲು ಪರಿಹಾರಗಳನ್ನು ಮರುರೂಪಿಸುವಂತೆ ಸಂಬಂಧಿತರಿಗೆ ಅವರು ಆಗ್ರಹಿಸಿದರು.

‘ನಾವು ಇನ್ನೂ ಮೈಲುಗಳಷ್ಟು ದೂರ ಸಾಗಬೇಕಿದೆ. ಉದಾಹರಣೆಗೆ ಭಾರತ ಸೇರಿದಂತೆ ವಿಶ್ವಾದ್ಯಂತ ಸುಸ್ಥಿರ ಅಭಿವೃದ್ಧಿಯ ಗುರಿ ಸಂಖ್ಯೆ 5 ಹಳಿ ತಪ್ಪಿದೆ’ ಎಂದ ಅವರು, ‘ಮತ್ತು ಅದು ಹಳಿ ತಪ್ಪಿದೆ ಎಂದರೆ ಅದು 160 ಲಕ್ಷ ಕೋಟಿ ಡಾಲರ್ ಗಳ ಮಾನವ ಬಂಡವಾಳದ ಸಂಭವನೀಯ ನಷ್ಟವಾಗಿದೆ, ಇದು ಜಾಗತಿಕ ಜಿಡಿಪಿಯ ಮೌಲ್ಯದ ಎರಡು ಪಟ್ಟು ಆಗಿದೆ ಎಂದು ಹೇಳಿದರು.

ಮಹಿಳಾ ಸಬಲೀಕರಣದಲ್ಲಿ ಭಾರತವು ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ ಎಂದು ಒತ್ತಿ ಹೇಳಿದ ಮೆಕ್‌ಕ್ರೊ,ಬದಲಾವಣೆಯ ವೇಗವನ್ನು ವೃದ್ಧಿಸುವ ಗುರಿಯನ್ನು ಹೊಂದಿರುವ ಜಾಗತಿಕ ಪಾಲುದಾರಿಕೆಗಳಿಗೆ ಇದು ಸೂಕ್ತ ತಾಣವಾಗಿದೆ ಎಂದರು.

‘ಭಾರತದ ಮುಂಗಡಪತ್ರದಲ್ಲಿ ಮಹಿಳಾ ಕೇಂದ್ರಿತ ಉಪಕ್ರಮಗಳಿಗೆ ನಿಧಿ ಹಂಚಿಕೆಯನ್ನು ಕಳೆದ ವರ್ಷದ ಶೇ.6.8ರಿಂದ 2025-26ರಲ್ಲಿ ಸುಮಾರು ಶೇ.9ಕ್ಕೆ ಹೆಚ್ಚಿಸಿರುವುದನ್ನು ಮತ್ತು ಶಾಸಕಾಂಗಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಸ್ಥಾನಗಳನ್ನು ಮೀಸಲಿರಿಸುವ ಮಹತ್ವದ ಸಾಂವಿಧಾನಿಕ ತಿದ್ದುಪಡಿಯನ್ನು ಸ್ವಾಗತಿಸಿದ ಅವರು,ಇದು ವಿಶ್ವದ ಅತಿದೊಡ್ಡ ರಾಜಕೀಯ ನಾಯಕಿಯರ ಗುಂಪಾಗಿರುವ 15 ಲಕ್ಷ ಮಹಿಳೆಯರನ್ನು ಸಬಲಗೊಳಿಸುತ್ತಿದೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News