ಕೇಂದ್ರ ಸಚಿವ ಸುರೇಶ್ ಗೋಪಿಯಿಂದ 2 ಕಡೆ ಮತ ಚಲಾವಣೆ: ಸಿಪಿಐ ನಾಯಕ ಆರೋಪ
ಸುರೇಶ್ ಗೋಪಿ | Photo Credit : PTI
ತಿರುವನಂತಪುರ, ಡಿ. 10: ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕೇಂದ್ರ ಸಚಿವ ಸುರೇಶ್ ಗೋಪಿ ಅವರಿಗೆ ತಿರುವನಂತಪುರದಲ್ಲಿ ಮತ ಚಲಾಯಿಸಲು ಹೇಗೆ ಅವಕಾಶ ನೀಡಲಾಯಿತು ಎಂದು ಸಿಪಿಐ ನಾಯಕ ವಿ.ಎಸ್. ಕುಮಾರ್ ಬುಧವಾರ ಚುನಾವಣಾ ಆಯೋಗವನ್ನು ಪ್ರಶ್ನಿಸಿದ್ದಾರೆ.
2024ರ ಲೋಕಸಭಾ ಚುನಾವಣೆಯಲ್ಲಿ ತ್ರಿಶೂರ್ ಕ್ಷೇತ್ರದಲ್ಲಿ ಸುರೇಶ್ ಗೋಪಿ ವಿರುದ್ಧ ಸ್ಪರ್ಧಿಸಿದ್ದ ಸುನಿಲ್ ಕುಮಾರ್ ತನ್ನ ಫೇಸ್‌ಬುಕ್ ಪೋಸ್ಟ್ ನಲ್ಲಿ, ಸುರೇಶ್ ಗೋಪಿ ಹಾಗೂ ಅವರ ಕುಟುಂಬ ಕಳೆದ ಲೋಕಸಭಾ ಚುನಾವಣೆಯಲ್ಲಿ ತ್ರಿಶೂರ್‌ನ ನೆಟ್ಟಿಶ್ಶೇರಿಯಲ್ಲಿ ಮತದಾನ ಮಾಡಿದ್ದಾರೆ. ಅವರು ಅಲ್ಲಿನ ಖಾಯಂ ನಿವಾಸಿಗಳಾಗಿದ್ದಾರೆ ಎಂದು ಪ್ರತಿಪಾದಿಸಿದ್ದಾರೆ.
ಕೇರಳದ ಸ್ಥಳೀಯ ಸಂಸ್ಥೆಗಳಿಗೆ ಮಂಗಳವಾರ ನಡೆದ ಪ್ರಥಮ ಹಂತದ ಮತದಾನದಲ್ಲಿ ಸುರೇಶ್ ಗೋಪಿ ಹಾಗೂ ಅವರ ಕುಟುಂಬದ ಸದಸ್ಯರು ತಿರುವನಂತಪುರ ಮಹಾನಗರ ಪಾಲಿಕೆಯ ಸಸ್ತಮಂಗಳಂ ವಾರ್ಡ್‌ನಲ್ಲಿ ಮತ ಚಲಾಯಿಸಿದ್ದಾರೆ.
‘‘ಇದು ಹೇಗೆ ಸಾಧ್ಯ? ಚುನಾವಣಾ ಆಯೋಗ ಹಾಗೂ ಕೇಂದ್ರ ಸಚಿವ ಸುರೇಶ್ ಗೋಪಿ ಅವರು ಪ್ರತಿಕ್ರಿಯಿ ನೀಡಬೇಕು’’ ಎಂದು ಅವರು ಪೋಸ್ಟ್‌ನಲ್ಲಿ ಬರೆದಿದ್ದಾರೆ.
2024ರ ಲೋಕಸಭಾ ಚುನಾವಣೆಯಲ್ಲಿ ತ್ರಿಶೂರ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸುನೀಲ್ ಕುಮಾರ್ ಸುರೇಶ್ ಗೋಪಿ ವಿರುದ್ಧ 75 ಸಾವಿರ ಮತಗಳ ಅಂತರದಿಂದ ಸೋತಿದ್ದರು.