ಉತ್ತರಪ್ರದೇಶ | ಬಿಜೆಪಿ ನಾಯಕನ ಆಕ್ಷೇಪಾರ್ಹ ವೀಡಿಯೊ ವೈರಲ್; ಪಕ್ಷದಿಂದ ಉಚ್ಛಾಟನೆ
ಬಿಜೆಪಿ ನಾಯಕ ಗೌರಿಶಂಕರ್ ಅಗ್ರಹಾರಿ (Photo:X/@Benarasiyaa)
ಲಕ್ನೋ : ಬಿಜೆಪಿ ಮಾಜಿ ಜಿಲ್ಲಾ ಉಪಾಧ್ಯಕ್ಷನ ಆಕ್ಷೇಪಾರ್ಹ ವೀಡಿಯೊ ವೈರಲ್ ಬೆನ್ನಲ್ಲೇ ಆತನನ್ನು ಪಕ್ಷದಿಂದ ಉಚ್ಛಾಟಿಸಲಾಗಿದೆ ಎಂದು ವರದಿಯಾಗಿದೆ.
ಬಿಜೆಪಿ ನಾಯಕ ಗೌರಿಶಂಕರ್ ಅಗ್ರಹಾರಿ ʼಬಾಲಕಿಯೊಂದಿಗೆʼ ಆಕ್ಷೇಪಾರ್ಹ ಸ್ಥಿತಿಯಲ್ಲಿರುವುದು ವೈರಲ್ ವೀಡಿಯೊದಲ್ಲಿ ಕಂಡು ಬಂದಿತ್ತು.
ಬನ್ಸಿಯ ವೃತ್ತ ಅಧಿಕಾರಿ ಮಾಯಾಂಕ್ ತ್ರಿಪಾಠಿ ಈ ಕುರಿತು ಪ್ರತಿಕ್ರಿಯಿಸಿದ್ದು, ವಿಡಿಯೋ ನಮ್ಮ ಗಮನಕ್ಕೆ ಬಂದಿದೆ. ಈ ಕುರಿತು ತನಿಖೆ ನಡೆಸಲಾಗುತ್ತಿದೆ. ಸಂತ್ರಸ್ತೆ ಅಪ್ರಾಪ್ತ ವಯಸ್ಕಳೆಂದು ಕಂಡುಬಂದರೆ ಸಂಬಂಧಿತ ಕಾನೂನಿನ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಗೋವಿಂದ ನಾರಾಯಣ್ ಶುಕ್ಲಾ ಅವರು ಉಚ್ಚಾಟನೆ ಆದೇಶ ಹೊರಡಿಸಿದ್ದಾರೆ. ಜಿಲ್ಲಾಧ್ಯಕ್ಷರ ದೂರು ಮತ್ತು ಸ್ಥಳೀಯ ನಾಯಕರೊಂದಿಗಿನ ಚರ್ಚೆಯ ನಂತರ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
"ಈ ವೀಡಿಯೊ ತಿರುಚಲ್ಪಟ್ಟಿದೆ ಮತ್ತು ರಾಜಕೀಯ ಪ್ರೇರಿತವಾಗಿದೆ. ನಾನು ಪಕ್ಷದಲ್ಲಿ ಸಮರ್ಪಣಾಭಾವದಿಂದ ಸೇವೆ ಸಲ್ಲಿಸಿದ್ದೇನೆ. ನನ್ನ ವರ್ಚಸ್ಸಿಗೆ ಕಳಂಕ ತರಲು ಈ ಪಿತೂರಿ ರೂಪಿಸಲಾಗಿದೆ" ಎಂದು ಅಗ್ರಹಾರಿ ತನ್ನ ಮೇಲಿನ ಆರೋಪಗಳನ್ನು ನಿರಾಕರಿಸಿದ್ದಾರೆ.