ಉತ್ತರಪ್ರದೇಶ | ಉಪ ವಿಭಾಗಾಧಿಕಾರಿ ಸಹಿತ ಇನ್ನಿಬ್ಬರಿಂದ ಕಿರುಕುಳದ ಆರೋಪ: ಕ್ಯಾಮೆರಾ ಎದುರು ವಿಷ ಸೇವಿಸಿದ ಪತ್ರಕರ್ತ ದಂಪತಿ
ಸಾಂದರ್ಭಿಕ ಚಿತ್ರ | PC : freepik.com
ಫಿಲಿಭೀತ್ (ಉತ್ತರ ಪ್ರದೇಶ): ಉಪ ವಿಭಾಗಾಧಿಕಾರಿ, ನಗರ ಪಂಚಾಯತಿಯೊಂದರ ಅಧ್ಯಕ್ಷ ಹಾಗೂ ಓರ್ವ ಗುತ್ತಿಗೆದಾರ ನಮಗೆ ಕಿರುಕುಳ ನೀಡುತ್ತಿದ್ದಾನೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಒಂದನ್ನು ಮಾಡಿರುವ ಸ್ಥಳೀಯ ಪತ್ರಕರ್ತ ಹಾಗೂ ಅವರ ಪತ್ನಿ, ಕ್ಯಾಮೆರಾ ಎದುರೇ ವಿಷ ಸೇವಿಸಿರುವ ಘಟನೆ ಗುರುವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬರ್ಖೇಡಾ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಯೊಬ್ಬರ ಪ್ರಕಾರ, ಬಿಸಲ್ಪುರ್ ಉಪ ವಿಭಾಗಾಧಿಕಾರಿ ನಾಗೇಂದ್ರ ಪಾಂಡೆ, ಬರ್ಖೇಡಾ ನಗರ ಪಂಚಾಯತಿಯ ಅಧ್ಯಕ್ಷ ಶ್ಯಾಮ್ ಬಿಹಾರಿ ಭೋಜ್ವಾಲ್ ಹಾಗೂ ಗುತ್ತಿಗೆದಾರ ಮೊಯಿನ್ ಹುಸೈನ್ ನೀಡುತ್ತಿರುವ ಕಿರುಕುಳದಿಂದಾಗಿ ನಾವು ಈ ಅತಿರೇಕದ ಕ್ರಮಕ್ಕೆ ಮುಂದಾಗಿದ್ದೇವೆ ಎಂದು ಪತ್ರಕರ್ತ ಇಸ್ರಾರ್ ತಮ್ಮ ವಿಡಿಯೊದಲ್ಲಿ ಆರೋಪಿಸಿದ್ದಾರೆ ಎಂದು ಹೇಳಿದ್ದಾರೆ.
ಈ ಘಟನೆಯ ಬೆನ್ನಿಗೇ ದಂಪತಿಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಇಸ್ರಾರ್ ಅಪಾಯದಿಂದ ಪಾರಾಗಿದ್ದರೆ, ಅವರ ಪತ್ನಿಯ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಈ ವಿಡಿಯೊದಲ್ಲಿ, “ನಾನು ಇತ್ತೀಚೆಗೆ ಬರ್ಖೇಡಾ ನಗರ ಪಂಚಾಯತಿಯಲ್ಲಿನ ಭ್ರಷ್ಟಾಚಾರದ ಕುರಿತು ವರದಿ ಮಾಡಿದ್ದೆ. ಈ ವರದಿಯು ಮುಖ್ಯಮಂತ್ರಿಗಳ ಕಚೇರಿಯ ಗಮನ ಸೆಳೆದಿತ್ತು” ಎಂದು ಇಸ್ರಾರ್ ಆರೋಪಿಸಿದ್ದಾರೆ.
ಇದರ ಬೆನ್ನಿಗೇ, ನನಗೆ ಕಿರುಕುಳ ಪ್ರಾರಂಭಗೊಂಡಿತು. ಹುಸೈನ್, ಭೋಜ್ವಾಲ್ ಹಾಗೂ ಪಾಂಡೆ ನಿರಂತರವಾಗಿ ನನ್ನ ಕುಟುಂಬಕ್ಕೆ ಬೆದರಿಕೆ ಒಡ್ಡಿದ್ದು, ನಮ್ಮನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಿದ್ದಾರೆ ಎಂದೂ ಇಸ್ರಾರ್ ಆರೋಪಿಸಿದ್ದಾರೆ.
“ಇದರಿಂದ ಬೇಸತ್ತಿರುವ ನಾವು ವಿಷ ಸೇವಿಸುತ್ತಿದ್ದು, ನಮ್ಮ ಜೀವನವನ್ನು ಅಂತ್ಯಗೊಳಿಸಿಕೊಳ್ಳುತ್ತಿದ್ದೇವೆ. ಯೋಗೀಜೀ ನಮಗೆ ನ್ಯಾಯ ಬೇಕಿದೆ” ಎಂದು ಇಸ್ರಾರ್ ತಮ್ಮ ವಿಡಿಯೊದಲ್ಲಿ ಮನವಿ ಮಾಡಿದ್ದಾರೆ.
ಆದರೆ, ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಉಪ ವಿಭಾಗಾಧಿಕಾರಿ ನಾಗೇಂದ್ರ ಪಾಂಡೆ, ತಮ್ಮ ವಿರುದ್ಧದ ಆರೋಪಗಳು ನಿರಾಧಾರ ಎಂದು ಅಲ್ಲಗಳೆದಿದ್ದು, ಅಂತಹ ಯಾವುದೇ ಘಟನೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಈ ವಿಷಯದ ಕುರಿತು ತನಿಖೆ ನಡೆಸುವಂತೆ ನಾನು ಬರ್ಖೇಡಾ ಠಾಣಾಧಿಕಾರಿಗೆ ಸೂಚಿಸಿದ್ದೇನೆ ಎಂದೂ ಅವರು ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಬರ್ಖೇಡಾ ನಗರ ಪಂಚಾಯಿತಿಯ ಅಧ್ಯಕ್ಷ ಶ್ಯಾಮ್ ಬಿಹಾರಿ ಭೋಜ್ವಾಲ್, ಈ ಘಟನೆಯಲ್ಲಿ ನನ್ನ ಯಾವುದೇ ಪಾತ್ರವಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಈ ಘಟನೆಯ ಮತ್ತೊಬ್ಬ ಆರೋಪಿ ಮೊಯಿನ್ ಹುಸೈನ್ ಕೂಡಾ ತಮ್ಮನ್ನು ಸಮರ್ಥಿಸಿಕೊಂಡಿದ್ದು, ಮೇ 18ರಂದು ನನ್ನ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿದ್ದ ಇಸ್ರಾರ್, ನನಗೆ 15,000 ರೂ. ನೀಡಬೇಕು. ನನ್ನ ಬೇಡಿಕೆಯನ್ನೇನಾದರೂ ಈಡೇರಿಸದಿದ್ದರೆ, ನಿಮ್ಮ ಕುರಿತು ನಕಾರಾತ್ಮಕ ವರದಿಯನ್ನು ಪ್ರಕಟಿಸುತ್ತೇನೆ ಎಂದು ನನಗೆ ಬೆದರಿಸಿದ್ದರು ಎಂದು ಪ್ರತ್ಯಾರೋಪ ಮಾಡಿದ್ದಾರೆ.
ಆದರೆ, ಇಸ್ರಾರ್ ಹಾಗೂ ಅವರ ಪತ್ನಿ ನಿರಂತರವಾಗಿ ಕಿರುಕುಳ ಎದುರಿಸುತ್ತಿದ್ದರು. ಅವರಿಗೆ ಪಾಂಡೆ, ಭೋಜ್ವಾಲ್ ಹಾಗೂ ಹುಸೈನ್ ಬೆದರಿಕೆಗಳನ್ನು ಒಡ್ಡುತ್ತಿದ್ದರು ಹಾಗೂ ಅವರನ್ನು ಸುಳ್ಳುಳ ಪ್ರಕರಣಗಳಲ್ಲಿ ಸಿಲುಕಿಸಿದ್ದರು. ಇದರಲ್ಲಿ ಪೊಲೀಸರೂ ಸಹ ಭಾಗಿಯಾಗಿದ್ದರು ಎಂದು ಇಸ್ರಾರ್ ಕುಟುಂಬದ ಸದಸ್ಯರು ಆಪಾದಿಸಿದ್ದಾರೆ. ವಿಡಿಯೊದಲ್ಲಿ ಹೆಸರಿಸಲಾಗಿರುವ ಮೂವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಬೇಕು ಎಂದೂ ಅವರು ಆಗ್ರಹಿಸಿದ್ದಾರೆ.