ಉತ್ತರ ಪ್ರದೇಶ | ವರದಕ್ಷಿಣೆ ಕಿರುಕುಳ ನೀಡಿ ಗರ್ಭಿಣಿಯನ್ನು ಥಳಿಸಿ ಹತ್ಯೆ
ಸಾಂದರ್ಭಿಕ ಚಿತ್ರ | Photo : AI
ಮೈನ್‌ಪುರಿ, ಅ. 5: ವರದಕ್ಷಿಣೆ ಬೇಡಿಕೆ ಈಡೇರಿಸದೇ ಇರುವುದಕ್ಕೆ 21 ವರ್ಷದ ಗರ್ಭಿಣಿಯನ್ನು ಆಕೆಯ ಪತಿ, ಆತನ ಸಹೋದರರು, ಸಂಬಂಧಿಕರು ಸೇರಿ ಥಳಿಸಿ ಹತ್ಯೆಗೈದ ಘಟನೆ ಉತ್ತರಪ್ರದೇಶದ ಮೈನ್‌ಪುರಿ ಜಿಲ್ಲೆಯ ಗೋಪಾಲಪುರದಲ್ಲಿ ನಡೆದಿದೆ ಎಂದು ಪೊಲೀಸರು ರವಿವಾರ ತಿಳಿಸಿದ್ದಾರೆ.
ರಂಗಪುರ ಗ್ರಾಮದ ನಿವಾಸಿಯಾಗಿರುವ ಸಂತ್ರಸ್ತೆ ರಜನಿ ಕುಮಾರಿ ಅವರು ಸಚಿನ್ ಎಂಬಾತನನ್ನು ಈ ವರ್ಷ ಎಪ್ರಿಲ್‌ನಲ್ಲಿ ವಿವಾಹವಾಗಿದ್ದರು. ಹೆಚ್ಚುವರಿ ಪೊಲೀಸ್ ವರಿಷ್ಠ (ಗ್ರಾಮೀಣ) ರಾಹುಲ್ ಮಿತಾಸ್ ಪ್ರಕಾರ, ರಜನಿ ಪತಿ ಆತನ ಸಹೋದರರಾದ ಪ್ರಾಂಶು, ಸಹ‘ಗ್ ಹಾಗೂ ಸಂಬಂಧಿಕರಾದ ರಾಮನಾಥ್, ದಿವ್ಯಾ, ಟೀನಾ ಮೊದಲಾದವರು ಟೆಂಟ್ ಹೌಸ್ ಆರಂಭಿಸಲು 5 ಲಕ್ಷ ರೂ. ಹೆಚ್ಚುವರಿ ವರದಕ್ಷಿಣೆಗೆ ಬೇಡಿಕೆ ಇರಿಸಿದ್ದರು.
ಆದರೆ, ಈ ಬೇಡಿಕೆಯನ್ನು ರಜನಿಗೆ ಈಡೇರಿಸಲು ಸಾಧ್ಯವಾಗದೇ ಇದ್ದಾಗ, ಆರೋಪಿಗಳು ಶುಕ್ರವಾರ ಆಕೆಗೆ ಬರ್ಬರವಾಗಿ ಥಳಿಸಿ ಹತ್ಯೆಗೈದಿದ್ದಾರೆ. ಅನಂತರ ಸಾಕ್ಷಿ ನಾಶಪಡಿಸುವ ಪ್ರಯತ್ನವಾಗಿ ಆಕೆಯ ಮೃತದೇಹವನ್ನು ಹೊಲದಲ್ಲಿ ಸುಟ್ಟು ಹಾಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಬಗ್ಗೆ ತಿಳಿದ ಬಳಿಕ ರಜನಿ ಅವರ ತಾಯಿ ಸುನಿತಾ ದೇವಿ ಒಂಚಾ ಪೊಲೀಸ್ ಠಾಣೆಯಲ್ಲಿ ಶನಿವಾರ ದೂರು ದಾಖಲಿಸಿದ್ದಾರೆ.
‘‘ರಜನಿಯ ಪತಿ ಹಾಗೂ ಅವರ ಕುಟುಂಬದ ಸದಸ್ಯರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಆರೋಪಿಗಳಿಗಾಗಿ ಹುಡುಕಾಟ ನಡೆಯುತ್ತಿದೆ’’ ಎಂದು ಎಎಸ್‌ಪಿ ಮಿತಾಸ್ ತಿಳಿಸಿದ್ದಾರೆ.