ಉತ್ತರ ಪ್ರದೇಶ | ಕಳ್ಳತನದ ಶಂಕೆ; ಮಹಿಳೆಯ ಥಳಿಸಿ ಹತ್ಯೆ
ಸಾಂದರ್ಭಿಕ ಚಿತ್ರ
ಲಕ್ನೋ, ಆ. 26: ಕಳ್ಳತನದಲ್ಲಿ ಭಾಗಿಯಾದ ತಂಡದ ಸದಸ್ಯೆ ಎಂಬ ಶಂಕೆಯಲ್ಲಿ ಚತ್ತೀಸ್‌ಗಡದ ಮಹಿಳೆಯೋರ್ವರನ್ನು ಗ್ರಾಮಸ್ಥರು ಥಳಿಸಿ ಹತ್ಯೆಗೈದ ಆಘಾತಕಾರಿ ಘಟನೆ ಉತ್ತರಪ್ರದೇಶದ ಬುಂದೇಲಖಂಡ ವಲಯದಲ್ಲಿರುವ ಚಿತ್ರಕೂಟ ಜಿಲ್ಲೆಯ ಭಭಾಯಿ ಗ್ರಾಮದಲ್ಲಿ ನಡೆದಿದೆ.
ಹತ್ಯೆಯಾದ ಮಹಿಳೆಯನ್ನು ಬುಡಕಟ್ಟು ರಾಜ್ಯವಾದ ಚತ್ತೀಸ್‌ಡದ ರಾಜನಂದಗಾಂವ್ ಜಿಲ್ಲೆಯ ದೇವಂಟಿ (53) ಎಂದು ಗುರುತಿಸಲಾಗಿದೆ. ಅವರು ಕಣ್ಣಿನ ಚಿಕಿತ್ಸೆಗಾಗಿ ಮಧ್ಯಪ್ರದೇಶದ ಸತನಾದಲ್ಲಿರುವ ಜಾನಕಿ ಕುಂಡ್ ಕಣ್ಣಿನ ಆಸ್ಪತ್ರೆಗೆ ಏಕಾಂಗಿಯಾಗಿ ಪ್ರಯಾಣಿಸುತ್ತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಅವರು ಮಧ್ಯಪ್ರದೇಶ-ಉತ್ತರಪ್ರದೇಶ ಗಡಿಯಲ್ಲಿರುವ ಕರ್ವಿ ಪೊಲೀಸ್ ಠಾಣಾ ವ್ಯಾಪ್ತಿಯ ಹಳ್ಳಿಯ ಮೂಲಕ ಶನಿವಾರ ಹಾದು ಹೋಗುತ್ತಿದ್ದಾಗ ಗ್ರಾಮಸ್ಥರು ಸೆರೆ ಹಿಡಿದ್ದಾರೆ. ಈ ಪ್ರದೇಶದಲ್ಲಿ ಇತ್ತೀಚೆಗೆ ನಡೆದ ಕಳವು ಪ್ರಕರಣದಲ್ಲಿ ಭಾಗಿಯಾಗಿದ್ದ ತಂಡದೊಂದಿಗೆ ಸಂಬಂಧ ಹೊಂದಿರುವ ಶಂಕೆಯಲ್ಲಿ ಅವರನ್ನು ಥಳಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈ ಘಟನೆಯ ಕುರಿತು ಮಾಹಿತಿ ಸ್ವೀಕರಿಸಿದ ಬಳಿಕ ಅಧಿಕಾರಿಗಳ ತಂಡ ಸ್ಥಳಕ್ಕೆ ಧಾವಿಸಿತು ಹಾಗೂ ಮಹಿಳೆಯನ್ನು ರಕ್ಷಿಸಿತು. ಮಹಿಳೆಯನ್ನು ಮೊದಲು ಸ್ಥಳೀಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಲಾಯಿತು. ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ವೈದ್ಯರು ಚಿತ್ರಕೂಟದ ಜಿಲ್ಲಾಸ್ಪತ್ರೆಗೆ ಶಿಫಾರಸು ಮಾಡಿದರು. ಆದರೆ, ಮಹಿಳೆ ಮಾರ್ಗ ಮಧ್ಯೆ ಮೃತಪಟ್ಟರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸರು ಅನಂತರ ಅವರಿಗೆ ಸೇರಿದ ವಸ್ತುಗಳಲ್ಲಿ ಜಾನಕಿ ಕುಂಡ್ ಕಣ್ಣಿನ ಆಸ್ಪತ್ರೆಯ ದಾಖಲಾತಿ ಚೀಟಿಯೊಂದಿಗೆ ಆಧಾರ್ ಕಾರ್ಡ್ ಅನ್ನು ಪತ್ತೆ ಹಚ್ಚಿದರು. ಅವರು ಚಿಕಿತ್ಸೆ ಪಡೆದುಕೊಳ್ಳಲು ಆಗಮಿಸಿದ ಕಣ್ಣಿನ ಆಸ್ಪತ್ರೆ ಘಟನೆ ನಡೆದ ಭಭಾಯಿ ಗ್ರಾಮದಿಂದ ಕೇವಲ 3 ಕಿ.ಮೀ. ದೂರದಲ್ಲಿದೆ.
ಸಂತ್ರಸ್ತೆಯ ಕುಟುಂಬ ಸಲ್ಲಿಸಿದ ದೂರಿನ ಆಧಾರದಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಚಿತ್ರಕೂಟದ ಪೊಲೀಸ್ ಅಧೀಕ್ಷಕ ಅರುಣ್ ಕುಮಾರ್ ಸಿಂಗ್ ತಿಳಿಸಿದ್ದಾರೆ.