ಉತ್ತರ ಪ್ರದೇಶ | ಉದ್ಯೋಗವನ್ನರಸಿ ಪತಿ ಮುಂಬೈಗೆ ತೆರಳಿದ ಬಳಿಕ, ತನ್ನ ಮೈದುನನ್ನೇ ವಿವಾಹವಾದ ಮಹಿಳೆ!
ಸಾಂದರ್ಭಿಕ ಚಿತ್ರ | PC : freepik.com
ಗೋರಖ್ಪು: ತನ್ನ ಪತಿಯು ಉದ್ಯೋಗವನ್ನರಸಿ ಮುಂಬೈಗೆ ತೆರಳಿದ ಬಳಿಕ, ಮಹಿಳೆಯೊಬ್ಬಳು ಪರಸ್ಪರರ ಕುಟುಂಬದ ಸಮ್ಮತಿ ಪಡೆದು, ತನ್ನ ಮೈದುನನ್ನೇ ವರಿಸಿರುವ ಅಸಹಜ ಘಟನೆಯೊಂದು ಉತ್ತರ ಪ್ರದೇಶದ ಸಂತ ಕಬೀರ್ ನಗರ ಜಿಲ್ಲೆಯಲ್ಲಿ ನಡೆದಿದೆ ಎಂದು ಶುಕ್ರವಾರ ಅಧಿಕಾರಿಗಳು ತಿಳಿಸಿದ್ದಾರೆ.
ಹರಿಹರ್ ಪುರ್ ನ ನಗರ ಪಂಚಾಯತಿ ಅಧ್ಯಕ್ಷ ರವೀಂದ್ರ ಪ್ರತಾಪ್ ಶಾಹಿಯವರ ಶಿಬಿರ ಕಚೇರಿಯಲ್ಲಿ ಗುರುವಾರ ಈ ವಿವಾಹ ನೆರವೇರಿತು ಎಂದು ವರದಿಯಾಗಿದೆ.
ಆರು ತಿಂಗಳ ಹಿಂದೆ ಹರಿಹರ್ ಪುರ್ ನ ಕಲ್ಲು ಎಂಬಾತನನ್ನು ಖುಷ್ಬೂ ವಿವಾಹವಾಗಿದ್ದಳು. ಆದರೆ, ವಿವಾಹವಾದ ಆರು ತಿಂಗಳ ನಂತರ, ಉದ್ಯೋಗವನ್ನರಸಿ ಕಲ್ಲು ಮುಂಬೈಗೆ ತೆರಳಿದ್ದ. ಈ ನಡುವೆ, ಆಕೆ ಹಾಗೂ ಆಕೆಯ ಮೈದುನ ಅಮಿತ್ ನ ನಡುವೆ ನಿಕಟ ಬಾಂಧವ್ಯ ಬೆಳೆದಿತ್ತು ಎಂದು ರವೀಂದ್ರ ಪ್ರತಾಪ್ ಶಾಹಿ ತಿಳಿಸಿದ್ದಾರೆ.
ಅವರಿಬ್ಬರ ಸಂಬಂಧದ ಕುರಿತು ಆಕೆಯ ಪತಿಯ ಕುಟುಂಬಕ್ಕೆ ತಿಳಿದ ನಂತರ, ಅವರಿಬ್ಬರೂ ಗ್ರಾಮದಿಂದ ಪರಾರಿಯಾಗಿದ್ದರು. ನಂತರ, ಅವರಿಬ್ಬರನ್ನೂ ಸಂಬಂಧಿಕರು ಮನೆಗೆ ಕರೆ ತಂದರೂ, ನಾವಿಬ್ಬರೂ ಒಟ್ಟಾಗಿ ಜೀವಿಸುತ್ತೇವೆ ಎಂದು ಅವರು ಪಟ್ಟು ಹಿಡಿದರು. ಅವರ ನಡುವೆ ಮಧ್ಯ ಸ್ಥಿಕೆ ವಹಿಸಲು ಅವರಿಬ್ಬರ ಆತ್ಮೀಯರ ಮೂಲಕ ಪ್ರಯತ್ನಿಸಲಾಗಿತ್ತು. ಈ ಪ್ರಯತ್ನದಲ್ಲಿ ಶಾಹಿ ಕೂಡಾ ಭಾಗಿಯಾಗಿದ್ದರು ಎನ್ನಲಾಗಿದೆ.
ಆದರೆ, ಅವರಿಬ್ಬರೂ ಬೇರ್ಪಡಲು ಒಪ್ಪದೆ ಇದ್ದುದರಿಂದ, ಅವರಿಬ್ಬರ ಕುಟುಂಬದ ಸದಸ್ಯರು ಹಾಗೂ ಸ್ಥಳೀಯ ನಾಯಕರ ಸಮ್ಮುಖದಲ್ಲಿ ಅವರಿಬ್ಬರ ವಿವಾಹವನ್ನು ಶಾಹಿ ನೆರವೇರಿಸಿದ್ದಾರೆ.
ಖುಷ್ಬೂ ಹಣೆಗೆ ತಿಲಕವನ್ನಿಡುವ ಮೂಲಕ, ಅಮಿತ್ ಈ ವಿವಾಹವನ್ನು ಮಾನ್ಯಗೊಳಿಸಿದನು. ಆದರೆ, ಈ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸದಿರಲು ನಿರ್ಧರಿಸಿದ ಖುಷ್ಬೂ ಪತಿ, ಅಂತರ ಕಾಯ್ದುಕೊಂಡರು. ಈ ವಿವಾಹ ಕಾರ್ಯಕ್ರಮಕ್ಕೆ ಸ್ಥಳೀಯ ಜನ ಪ್ರತಿನಿಧಿಗಳು ಹಾಗೂ ಕೌನ್ಸಿಲರ್ ಗಳು ಸಾಕ್ಷಿಯಾದರು ಎಂದು ಶಾಹಿ ತಿಳಿಸಿದ್ದಾರೆ.