ಅಮೆರಿಕ ವೀಸಾ ಮಂಜೂರಾದ ಬಳಿಕವೂ ಪರಿಶೀಲನೆ ನಿಲ್ಲದು: ಅಮೆರಿಕನ್ ರಾಯಭಾರಿ ಕಚೇರಿ
ಸಾಂದರ್ಭಿಕ ಚಿತ್ರ | PC : freepik.com
ಹೊಸದಿಲ್ಲಿ: ಅಮೆರಿಕ ವೀಸಾ ಒಂದು ಸವಲತ್ತಾಗಿದೆಯೇ ಹೊರತು ಹಕ್ಕಲ್ಲ. ಒಮ್ಮೆ ವೀಸಾ ನೀಡಿದ ಬಳಿಕವೂ ಅದರ ‘ಪರಿಶೀಲನೆ’ಯು ನಿಲ್ಲುವುದಿಲ್ಲ ಎಂದು ಭಾರತದಲ್ಲಿನ ಅಮೆರಿಕನ್ ರಾಯಭಾರ ಕಚೇರಿ ಗುರುವಾರ ತಿಳಿಸಿದೆ.
ವಿದ್ಯಾರ್ಥಿ ವೀಸಾ ಅಥವಾ ಸಂದರ್ಶನ ವೀಸಾ ಹೊಂದಿರುವ ಯಾವುದೇ ವ್ಯಕ್ತಿಯು ಕಾನೂನುಬಾಹಿರ ಡ್ರಗ್ ಗಳನ್ನು ಬಳಸಿದಲ್ಲಿ ಅಥವಾ ಅಮೆರಿಕದ ಯಾವುದೇ ಕಾನೂನುಗಳನ್ನು ಉಲ್ಲಂಘಿಸಿದಲ್ಲಿ, ಭವಿಷ್ಯದಲ್ಲಿ ಆತ ಅಮೆರಿಕದ ವೀಸಾಕ್ಕೆ ಅನರ್ಹನಾಗಿರುತ್ತಾನೆ ಎಂದು ಅಮೆರಿಕದ ರಾಯಭಾರಿ ಕಚೇರಿಯ ಸಂಕ್ಷಿಪ್ತ ಹೇಳಿಕೆಯೊಂದು ತಿಳಿಸಿದೆ.
ಈ ಹೇಳಿಕೆಯನ್ನು ಅದು ತನ್ನ ಅಧಿಕೃತ ಎಕ್ಸ್ ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಿದೆ.
ಈ ತಿಂಗಳಲ್ಲಿ ಭಾರತದಲ್ಲಿನ ಅಮೆರಿಕ ರಾಯಭಾರಿ ಕಚೇರಿಯು ಬಿಡುಗಡೆಗೊಳಿಸಿದ ಮೂರನೇ ಹೇಳಿಕೆ ಇದಾಗಿದೆ. ಕಾನೂನುಬದ್ಧವಾಗಿ ಅಮೆರಿಕಕ್ಕೆ ಪ್ರಯಾಣಿಸುವ ಜನರಿಗೆ ಸ್ವಾಗತವಿದೆ. ಆದರೆ ಅಕ್ರಮ ಪ್ರವೇಶವನ್ನು ಅಥವಾ ವೀಸಾಗಳನ್ನು ದುರ್ಬಳಕೆ ಮಾಡುವುದನ್ನು ಸಹಿಸಲಾಗದು. ಅಲ್ಲದೆ ಅಮೆರಿಕಕ್ಕೆ ಅಕ್ರಮ ಹಾಗೂ ಸಾಮೂಹಿಕ ವಲಸೆಯನ್ನು ಅವಕಾಶ ಮಾಡಿಕೊಡುವವರನ್ನು ಅಮೆರಿಕವು ಸಹಿಸುವುದಿಲ್ಲವೆಂದು ಅದು ಹೇಳಿದೆ.
ಇದರ ಜೊತೆಗೆ ವಿದೇಶಿ ಸರಕಾರಗಳ ಅಧಿಕಾರಿಗಳು ಮತ್ತಿತರರನ್ನು ದೃಷ್ಟಿಯಲ್ಲಿರಿಸಿಕೊಂಡು ಅಮೆರಿಕವು ನೂತನ ವೀಸಾ ನಿರ್ಬಂಧಗಳನ್ನು ರೂಪಿಸಿರುವುದಾಗಿ ಅಮೆರಿಕ ರಾಯಭಾರಿ ಕಚೇರಿಯ ಹೇಳಿಕೆ ತಿಳಿಸಿದೆ.