×
Ad

26/11 ದಾಳಿಯ ಬಳಿಕ ಪ್ರತಿಕಾರ ಮಾಡದಂತೆ ಅಮೆರಿಕ ತಡೆಯಿತು: ಮಾಜಿ ಗೃಹ ಸಚಿವ ಪಿ. ಚಿದಂಬರಂ

ಮನಮೋಹನ್ ಸಿಂಗ್ ತಡೆದರೆ ಅಥವಾ ಸೋನಿಯಾ ಗಾಂಧಿ ಅಡ್ಡ ಬಂದರೇ ಎಂದು ವ್ಯಂಗ್ಯವಾಡಿದ ಬಿಜೆಪಿ

Update: 2025-09-30 13:57 IST

ಮಾಜಿ ಗೃಹ ಸಚಿವ ಪಿ. ಚಿದಂಬರಂ 

ಹೊಸದಿಲ್ಲಿ: 2008ರಲ್ಲಿ ನಡೆದ ಮುಂಬೈ ಭಯೋತ್ಪಾದಕ ದಾಳಿಯ ಬಳಿಕ ಪಾಕಿಸ್ತಾನದ ವಿರುದ್ಧ ಸೇನಾ ಕ್ರಮ ಕೈಗೊಳ್ಳದ ಯುಪಿಎ ಸರ್ಕಾರದ ನಿರ್ಧಾರದ ಹಿಂದೆ ಅಮೆರಿಕದ ಒತ್ತಡ ಕಾರಣವಾಗಿತ್ತೆಂದು ಮಾಜಿ ಗೃಹ ಸಚಿವ ಪಿ. ಚಿದಂಬರಂ ಬಹಿರಂಗಪಡಿಸಿದ್ದು, ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

“ಪ್ರತೀಕಾರ ಮಾಡಬೇಕೆಂಬುದು ನನ್ನ ಮನಸ್ಸಿನಲ್ಲಿತ್ತು. ಆದರೆ ಪ್ರಧಾನಿ ಸೇರಿದಂತೆ ಇತರ ಪ್ರಮುಖರೊಂದಿಗೆ ಚರ್ಚೆಯ ನಂತರ ಸೇನಾ ಕ್ರಮ ಕೈಗೊಳ್ಳದ ನಿರ್ಧಾರ ಕೈಗೊಳ್ಳಲಾಯಿತು. ದಾಳಿ ನಡೆದ ಕೆಲವೇ ದಿನಗಳಲ್ಲಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಕಾಂಡೋಲೀಜಾ ರೈಸ್ ದಿಲ್ಲಿಗೆ ಬಂದು, ‘ದಯವಿಟ್ಟು ಪ್ರತಿಕ್ರಿಯಿಸಬೇಡಿ’ ಎಂದು ಮನವಿ ಮಾಡಿದರು” ಎಂದು ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಕಾಂಗ್ರೆಸ್‌ ನಾಯಕ ಪಿ. ಚಿದಂಬರಂ ಬಹಿರಂಗಪಡಿಸಿದರು.

2008ರ ನವೆಂಬರ್ 26ರಂದು ಪಾಕಿಸ್ತಾನದ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತಯ್ಯಿಬಾಗೆ ಸೇರಿದ 10 ಭಯೋತ್ಪಾದಕರು ಮುಂಬೈಯ ತಾಜ್ ಮಹಲ್ ಪ್ಯಾಲೇಸ್, ಒಬೆರಾಯ್ ಟ್ರೈಡೆಂಟ್, ಛತ್ರಪತಿ ಶಿವಾಜಿ ಮಹಾರಾಜ್ ರೈಲು ನಿಲ್ದಾಣ, ಲಿಯೋಪೋಲ್ಡ್ ಕಫೆ, ನಾರಿಮನ್ ಹೌಸ್‌ ಮೇಲೆ ದಾಳಿ ನಡೆಸಿ 175 ಜನರನ್ನು ಬಲಿ ಪಡೆದಿದ್ದರು. ಸೆರೆ ಹಿಡಿಯಲ್ಪಟ್ಟ ಅಜ್ಮಲ್ ಕಸಬ್‌ಗೆ 2012ರಲ್ಲಿ ಗಲ್ಲು ಶಿಕ್ಷೆ ಜಾರಿಗೊಂಡಿತ್ತು.

ಚಿದಂಬರಂ ಅವರ ಈ ಹೇಳಿಕೆಗೆ ಬಿಜೆಪಿ ನಾಯಕರಿಂದ ತೀವ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ , “ಮುಂಬೈ ದಾಳಿಗಳನ್ನು ವಿದೇಶಿ ಶಕ್ತಿಗಳ ಒತ್ತಡದಿಂದ ತಪ್ಪಾಗಿ ನಿರ್ವಹಿಸಲ್ಪಟ್ಟಿವೆ ಎಂಬುದನ್ನು ದೇಶ ಈಗಾಗಲೇ ತಿಳಿದಿತ್ತು. ಇದೀಗ ಅದನ್ನು ಮಾಜಿ ಗೃಹ ಸಚಿವರು ಸ್ವತಃ ಅದನ್ನು ಒಪ್ಪಿಕೊಂಡಿದ್ದಾರೆ” ಎಂದು ಟೀಕಿಸಿದರು.

“ಚಿದಂಬರಂ ಸೇನಾ ಕ್ರಮ ಬಯಸಿದ್ದರು. ಆದರೆ ಇತರರು ಅವರನ್ನು ತಡೆದರು. ಆಗ ಯುಪಿಎ ಸರ್ಕಾರ ಅಮೆರಿಕದ ಪ್ರಭಾವದಲ್ಲಿ ಕಾರ್ಯನಿರ್ವಹಿಸುತ್ತಿತ್ತೆ? ಸೋನಿಯಾ ಗಾಂಧಿ ಅಥವಾ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಕ್ರಮ ತಡೆದಿದ್ದರೇ?” ಎಂದು ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲಾ ಪ್ರಶ್ನಿಸಿದ್ದಾರೆ.

ಯುಪಿಎ ಸರ್ಕಾರವು ಪಾಕಿಸ್ತಾನಕ್ಕೆ ಅತ್ಯಂತ ಅನುಕೂಲಕರ ರಾಷ್ಟ್ರ (MFN) ಸ್ಥಾನಮಾನ ನೀಡಿ, ಪದೇಪದೇ ನಡೆದ ಭಯೋತ್ಪಾದಕ ದಾಳಿಗಳ ನಂತರವೂ ಸೇನಾ ಕ್ರಮ ಕೈಗೊಳ್ಳಲು ಹಿಂಜರಿದುದಾಗಿ ಶೆಹಜಾದ್ ಪೂನಾವಾಲಾ ಆರೋಪಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News