ಉತ್ತರಪ್ರದೇಶ | ಹುಟ್ಟುಹಬ್ಬ ಆಚರಿಸುತ್ತಿದ್ದ ವೇಳೆ ದಲಿತ ಯುವಕನ ಹತ್ಯೆ
ದಲಿತರನ್ನು ರಕ್ಷಿಸಲು ಮೋದಿ ಸರಕಾರ ವಿಫಲವಾಗಿದೆ : ಕಾಂಗ್ರೆಸ್ ವಾಗ್ದಾಳಿ
Photo : thehindu.com
ಹೊಸದಿಲ್ಲಿ,ಅ. 25: ಉತ್ತರಪ್ರದೇಶದ ಗ್ರೇಟರ್ ನೋಯ್ಡದ ರಬುಪುರ ಎಂಬಲ್ಲಿ ತನ್ನ ಮನೆಯ ಹೊರಗೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದ ವೇಳೆ ದುಷ್ಕರ್ಮಿಗಳಿಂದ ಮಾರಣಾಂತಿಕ ಹಲ್ಲೆಗೆ ಒಳಗಾಗಿದ್ದ 20 ವರ್ಷದ ದಲಿತ ಯುವಕ ದಿಲ್ಲಿಯ ಆಸ್ಪತ್ರೆಯೊಂದರಲ್ಲಿ ಶುಕ್ರವಾರ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಕ್ಟೋಬರ್ 15ರಂದು ರಾತ್ರಿ ಅನಿಕೇತ್ ಜಾಟವ್ ತನ್ನ ಹುಟ್ಟುಹಬ್ಬ ಆಚರಿಸುತ್ತಿದ್ದಾಗ ದುಷ್ಕರ್ಮಿಗಳ ಗುಂಪೊಂದು ಅವರ ಮೇಲೆ ಹಲ್ಲೆ ನಡೆಸಿತ್ತು. ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಯುವರಾಜ್ ಮತ್ತು ಜೀತು ಎಂಬುದಾಗಿ ಗುರುತಿಸಲಾಗಿದೆ. ಉಳಿದ ಆರೋಪಿಗಳನ್ನು ಬಂಧಿಸಲು ಪ್ರಯತ್ನಗಳನ್ನು ನಡೆಸುತ್ತಿರುವುದಾಗಿ ರಬುಪುರ ಪೊಲೀಸ್ ಠಾಣೆಯ ಠಾಣಾಧಿಕಾರಿ ಸಜೀತ್ ಉಪಾಧ್ಯಾಯ ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ.
ಶುಕ್ರವಾರ ಅಪರಾಹ್ನ ಯುವಕನ ಮೃತದೇಹವನ್ನು ಮನೆಗೆ ತಂದಾಗ ಗ್ರೇಟರ್ ನೋಯ್ಡದ ಅಂಬೇಡ್ಕರ್ ಮೊಹಲ್ಲಾದಲ್ಲಿ ದುಃಖ ಮತ್ತು ಉದ್ವಿಗ್ನತೆ ಮಡುಗಟ್ಟಿತ್ತು. ಸ್ಥಳದಲ್ಲಿ ನೂರಾರು ಮಂದಿ ಜಮಾಯಿಸಿದ್ದರು. ಸುಮಾರು ಒಂದು ಗಂಟೆಯ ಮಾತುಕತೆಯ ಬಳಿಕ, ಯುವಕನ ಮೃತದೇಹವನ್ನು ಶವಸಂಸ್ಕಾರಕ್ಕಾಗಿ ಸ್ಮಶಾನಕ್ಕೆ ತೆಗೆದುಕೊಂಡು ಹೋಗಲು ಕುಟುಂಬ ಸದಸ್ಯರು ಒಪ್ಪಿದರು.
ಮೃತ ದಲಿತ ಯುವಕ ಅನಿಕೇತ್ ವಾಹನ ಮೆಕಾನಿಕ್ ಮತ್ತು ಚಾಲಕನಾಗಿ ಕೆಲಸ ಮಾಡುತ್ತಿದ್ದರು. ಅವರು ಅಕ್ಟೋಬರ್ 15ರ ರಾತ್ರಿ ತನ್ನ ಹುಟ್ಟುಹಬ್ಬ ಆಚರಣೆಯಲ್ಲಿ ತೊಡಗಿದ್ದಾಗ ಮೇಲ್ಜಾತಿಯ ಜನರು ಅವರ ಮೇಲೆ ಆಕ್ರಮಣ ನಡೆಸಿದರು ಎನ್ನಲಾಗಿದೆ. ‘‘ಅವರು ಕೇಕ್ ತುಂಡು ಮಾಡಿದ್ದರು ಅಷ್ಟೆ. ಆಗ ದುಷ್ಕರ್ಮಿಗಳು ಅಲ್ಲಿಗೆ ಬಂದರು. ಅವರು ವಾರಗಳಿಂದ ಅನಿಕೇತ್‌ರನ್ನು ಬೆದರಿಸುತ್ತಿದ್ದರು’’ ಎಂದು ಅನಿಕೇತ್‌ರ ಮಾವ ಸುಮಿತ್ ಹೇಳಿರುವುದಾಗಿ ‘ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ.
ದುಷ್ಕರ್ಮಿಗಳು ಸುಮಿತ್‌ರಿಗೂ ಹೊಡೆದಿದ್ದಾರೆ. ಅವರ ಬಲಗಣ್ಣು ಶುಕ್ರವಾರವೂ ಬಾತುಕೊಂಡಿತ್ತು.
ಶುಕ್ರವಾರ ಮೃತದೇಹವನ್ನು ಮನೆಗೆ ತಂದಾಗ ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿತ್ತು. ಶುಕ್ರವಾರ ಹಲವು ಸ್ಥಳೀಯ ರಾಜಕಾರಣಿಗಳು ಮೃತನ ಮನೆಗೆ ಭೇಟಿ ನೀಡಿ ಕುಟುಂಬ ಸದಸ್ಯರನ್ನು ಸಂತೈಸಿದ್ದಾರೆ.
ಆಕ್ರಮಣ ನಡೆದ ಎರಡು ದಿನಗಳ ಬಳಿಕ ಅಕ್ಟೋಬರ್ 17ರಂದು ರಬುಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಎಫ್‌ಐಆರ್‌ನಲ್ಲಿ ಏಳು ಮಂದಿ ಮೇಲ್ಜಾತಿಯ ಜನರನ್ನು ಹೆಸರಿಸಲಾಗಿದೆ. ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಉಳಿದವರು ತಲೆಮರೆಸಿಕೊಂಡಿದ್ದಾರೆ.
ದುಷ್ಕರ್ಮಿಗಳು ಅನಿಕೇತ್‌ರನ್ನು ಒಂದು ತಿಂಗಳ ಹಿಂದಿನಿಂದಲೇ ಬೇಟೆಯಾಡುತ್ತಿದ್ದರು ಎಂದು ಅವರ ಮಾವ ಸುಮಿತ್ ಹೇಳಿದ್ದಾರೆ. ಸ್ಥಳೀಯ ರಾಮಲೀಲಾ ಕಾರ್ಯಕ್ರಮವೊಂದರಲ್ಲಿ ಠಾಕೂರ್ ಯುವಕರ ಗುಂಪೊಂದು ಅನಿಕೇತ್‌ರ ಗೆಳೆಯನನ್ನು ನಿಂದಿಸುತ್ತಿದ್ದಾಗ ಅವರು ಮಧ್ಯಪ್ರವೇಶಿಸಿ ಬಿಡಿಸಿಕೊಂಡು ಬಂದಿದ್ದರು ಎಂದು ಸುಮಿತ್ ತಿಳಿಸಿದ್ದಾರೆ.
ಆ ಬಳಿಕ, ಠಾಕೂರ್ ಜನರು ಅನಿಕೇತ್‌ರನ್ನು ಜಾತಿ ಆಧಾರದಲ್ಲಿ ನಿಂದಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ದುಷ್ಕರ್ಮಿಗಳು ಮತ್ತು ಅನಿಕೇತ್ ನಡುವೆ ಉದ್ವಿಗ್ನತೆ ಉಂಟಾಗಿತ್ತು. ‘‘ಮಾರಕ ದಾಳಿ ನಡೆಯುವ ಎರಡು ದಿನಗಳ ಮುನ್ನವೂ, ದುಷ್ಕರ್ಮಿಗಳ ಗುಂಪು ಅನಿಕೇತ್ ಮೇಲೆ ಅವರ ಮನೆಯ ಹೊರಗೆ ದಾಳಿ ನಡೆಸಿತ್ತು. ಅವರ ಮೇಲೆ ಕಲ್ಲಿನಿಂದ ಹೊಡೆದಿತ್ತು’’ ಎಂದು ಸುಮಿತ್ ಹೇಳಿದ್ದಾರೆ. ‘‘ಅದಕ್ಕೆ ಪ್ರತಿಯಾಗಿ ದುಷ್ಕರ್ಮಿಗಳ ಪೈಕಿ ಒಬ್ಬನ ಕೆನ್ನೆಗೆ ಅನಿಕೇತ್ ಹೊಡೆದಿದ್ದರು. ನೀನು ನಿನ್ನ ಸ್ಥಾನ ಮರೆತಿರುವೆ ಎಂಬುದಾಗಿ ದುಷ್ಕರ್ಮಿಗಳು ಬೆದರಿಸುತ್ತಿದ್ದರು’’ ಎಂದು ಅವರು ತಿಳಿಸಿದ್ದಾರೆ.
ಮಾರಕ ದಾಳಿ ನಡೆದ ರಾತ್ರಿ, ಸಮೀಪದ ಹೊಲವೊಂದರಲ್ಲಿ ಅನಿಕೇತ್ ಹುಟ್ಟುಹಬ್ಬದ ಕೇಕ್ ಕತ್ತರಿಸುತ್ತಿದ್ದಾಗ, ಅದೇ ದುಷ್ಕರ್ಮಿಗಳ ಗುಂಪು ಕಬ್ಬಿಣದ ರಾಡ್‌ಗಳು ಮತ್ತು ಹಾಕಿ ಸ್ಟಿಕ್‌ಗಳೊಂದಿಗೆ ಬಂತು ಎಂದು ಸುಮಿತ್ ಹೇಳಿದರು. ‘‘ಅವರು ನನಗೆ ಹೊಡೆಯಲು ಆರಂಭಿಸಿದರು. ಆಗ, ಅನಿಕೇತ್ ತಪ್ಪಿಸಿಕೊಂಡಿರಬೇಕು ಎಂದು ನಾನು ಭಾವಿಸಿದೆ. ಆದರೆ, ಪೊದೆಗಳ ಹಿಂದೆ ಅನಿಕೇತ್ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದನ್ನು ನಾವು ಮತ್ತೆ ನೋಡಿದೆವು. ಅವರ ದೇಹವಿಡೀ ರಕ್ತದಿಂದ ಆವರಿಸಿತ್ತು’’ ಎಂದು ಅವರು ಹೇಳಿದರು.
ಸುಮಿತ್ ಮತ್ತು ಅನಿಕೇತ್‌ರನ್ನು ಸ್ಥಳೀಯ ಆಸ್ಪತ್ರೆಗೆ ಒಯ್ಯಲಾಯಿತು. ಬಳಿಕ ಅವರನ್ನು ದಿಲ್ಲಿಯ ಆಸ್ಪತ್ರೆಗೆ ಕಳುಹಿಸಲಾಯಿತು. ಸುಮಿತ್ ಎರಡು ದಿನಗಳ ಹಿಂದೆ ಬಿಡುಗಡೆಗೊಂಡರು.
‘‘ನನ್ನ ದೊಡ್ಡ ಮಗ ಅನಿಕೇತ್ ಕುಟುಂಬದ ಏಕೈಕ ದುಡಿಯುವ ಸದಸ್ಯನಾಗಿದ್ದಾನೆ. ಅವನು ದಿನವಿಡೀ ಮೋಟರ್‌ಬೈಕ್‌ಗಳನ್ನು ದುರಸ್ತಿ ಮಾಡಿ ಮನೆಗೆ ಅಗತ್ಯ ವಸ್ತುಗಳನ್ನು ತರುತ್ತಿದ್ದನು. ಅದರಿಂದಲೇ ನಮ್ಮ ಕುಟುಂಬ ನಡೆಯುತ್ತಿತ್ತು’’ ಎಂದು ತಾಯಿ ಹೇಳಿದರು.
‘‘ಅವರು ನನ್ನ ಮಗನನ್ನು ಕೊಂದಿದ್ದಾರೆ. ನಮಗೆ ಹಣ ಬೇಡ, ನಮಗೆ ಉದ್ಯೋಗ ಬೇಡ, ನಮಗೆ ರಕ್ತಕ್ಕೆ ರಕ್ತ ಬೇಕು’’ ಎಂದು ಮಗನ ಸಾವಿನಿಂದ ಕಂಗೆಟ್ಟಿರುವ ತಾಯಿ ಹೇಳಿದರು.
ದಲಿತರನ್ನು ರಕ್ಷಿಸಲು ಮೋದಿ ಸರಕಾರ ವಿಫಲ : ಕಾಂಗ್ರೆಸ್ ಟೀಕೆ
ದಲಿತರ ಪ್ರಾಣಗಳನ್ನು ರಕ್ಷಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಡಬಲ್-ಇಂಜಿನ್ ಸರಕಾರ ಸಂಪೂರ್ಣವಾಗಿ ವಿಫಲವಾಗಿವೆ ಎಂದು ಕಾಂಗ್ರೆಸ್ ಪಕ್ಷದ ವಕ್ತಾರೆ ಶಮಾ ಮುಹಮ್ಮದ್ ಆರೋಪಿಸಿದ್ದಾರೆ.
‘‘ಗ್ರೇಟರ್ ನೋಯ್ಡದಲ್ಲಿ, 17 ವರ್ಷದ ದಲಿತ ಹುಡುಗನೊಬ್ಬ ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾಗ ಮೇಲ್ಜಾತಿಯ ದುಷ್ಕರ್ಮಿಗಳ ಗುಂಪೊಂದು ಅವರ ಮೇಲೆ ಮಾರಣಾಂತಿಕ ಆಕ್ರಮಣ ನಡೆಸಿತು. ದುಷ್ಕರ್ಮಿಗಳು ಹುಡುಗನನ್ನು ಥಳಿಸುತ್ತಿದ್ದ ವೇಳೆ, ‘ನಿನ್ನ ಸ್ಥಾನ ಏನು?’ ಎಂಬುದಾಗಿ ಪ್ರಶ್ನಿಸುತ್ತಿದ್ದರು. ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದ ತರುಣ ಈಗ ಮೃತಪಟ್ಟಿದ್ದಾರೆ’’ ಎಂಬುದಾಗಿ ಶಮಾ ತನ್ನ ‘ಎಕ್ಸ್’ ಖಾತೆಯಲ್ಲಿ ಬರೆದಿದ್ದಾರೆ.
‘‘ಬಿಜೆಪಿ ಆಳ್ವಿಕೆಯ ಉತ್ತರಪ್ರದೇಶದಲ್ಲಿ ಪ್ರತಿ ಒಂದು ಅಥವಾ ಎರಡು ವಾರಗಳಿಗೊಮ್ಮೆ ದಲಿತರ ಕೊಲೆಯ ವರದಿಗಳನ್ನು ನಾವು ನೋಡುತ್ತಿದ್ದೇವೆ. ದಲಿತರ ಪ್ರಾಣಗಳನ್ನು ರಕ್ಷಿಸಲು ನರೇಂದ್ರ ಮೋದಿ ಮತ್ತು ಅವರ ಡಬಲ್-ಇಂಜಿನ್ ಸರಕಾರಗಳು ಸಂಪೂರ್ಣವಾಗಿ ವಿಫಲವಾಗಿವೆ’’ ಎಂದು ಶಮಾ ಆರೋಪಿಸಿದ್ದಾರೆ.