ಉತ್ತರ ಪ್ರದೇಶ: ‘ಅಕ್ಬರ್‌ಪುರ’ದ ಮೇಲೆ ‘ರಘುವರಪುರ’ ಎಂದು ಬರೆದ ಕಿಡಿಗೇಡಿಗಳು
Photo Credit : wikiwand.com
ಲಕ್ನೋ, ಡಿ. 5: ದಿಲ್ಲಿ-ಆಗ್ರಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಮಥುರಾ ಜಿಲ್ಲೆಯ ಗ್ರಾಮವೊಂದರ ನಾಮಫಲಕವನ್ನು ವಿರೂಪಗೊಳಿಸಿರುವ ಕಿಡಿಗೇಡಿಗಳು, ‘ಅಕ್ಬರ್‌ಪುರ’ ಹೆಸರಿನ ಮೇಲೆ ಬಣ್ಣ ಬಳಿದು ಅದರ ಮೇಲೆ ‘ರಘುವರಪುರ’ ಎಂಬುದಾಗಿ ಬರೆದಿದ್ದಾರೆ.
ಇದನ್ನು ತೋರಿಸುವ ವೀಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ಬಳಿಕ, ಈ ಘಟನೆ ಬೆಳಕಿಗೆ ಬಂದಿದೆ. ಬಳಿಕ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಕಳೆದ ತಿಂಗಳು ಬಾಗೇಶ್ವರ ಧಾಮ ದೇವಸ್ಥಾನದ ಪ್ರಧಾನ ಅರ್ಚಕ ಧೀರೇಂದ್ರ ಕೃಷ್ಣ ಶಾಸ್ತ್ರಿ ದಿಲ್ಲಿಯಿಂದ ವೃಂದಾವನಕ್ಕೆ ಪಾದಯಾತ್ರೆಯಲ್ಲಿ ಹೋಗಿದ್ದು, ದಾರಿಯಲ್ಲಿ ‘ಅಕ್ಬರ್‌ಪುರ’ ನಾಮಫಲಕವನ್ನು ನೋಡಿ ಅದನ್ನು ‘ರಘುವರಪುರ’ ಎಂಬುದಾಗಿ ಬದಲಾಯಿಸಬೇಕು ಎಂದು ಹೇಳಿದ್ದರು. ಅವರ ಮಾತಿಗೂ, ನಾಮಫಲಕ ವಿರೂಪಕ್ಕೂ ಸಂಬಂಧವಿರುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಅವರ ಮಾತುಗಳಿಂದ ಪ್ರೇರಿತರಾಗಿ ಅಜ್ಞಾತ ವ್ಯಕ್ತಿಗಳು ನಾಮಫಲಕವನ್ನು ವಿರೂಪಗೊಳಿಸಿರಬಹುದಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಕಿಡಿಗೇಡಿಗಳನ್ನು ಬಂಧಿಸಿ ಶಿಕ್ಷೆಗೆ ಒಳಪಡಿಸಲಾಗುವುದು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.