Uttar Pradesh | ಮತದಾರರ ಪಟ್ಟಿಯಿಂದ 2.89 ಕೋಟಿ ಮತದಾರರ ಹೆಸರು ಹೊರಗೆ
ಭಾರತೀಯ ಚುನಾವಣಾ ಆಯೋಗ | Photo Credit : PTI
ಹೊಸದಿಲ್ಲಿ, ಜ. 6: ವಿಶೇಷ ತೀವ್ರ ಪರಿಷ್ಕರಣೆಯ ವೇಳೆ ಉತ್ತರಪ್ರದೇಶದ ಮತದಾರರ ಪಟ್ಟಿಯಿಂದ 2.89 ಕೋಟಿ ಮತದಾರರ ಹೆಸರುಗಳನ್ನು ಕೈಬಿಡಲಾಗಿದೆ. ಪರಿಷ್ಕರಣೆ ಪ್ರಕ್ರಿಯೆಯ ಮತದಾರರ ಎಣಿಕೆ ಹಂತ ಮುಕ್ತಾಯದ ಬಳಿಕ ಭಾರತೀಯ ಚುನಾವಣಾ ಆಯೋಗ (ಇಸಿಐ)ವು ಮಂಗಳವಾರ ರಾಜ್ಯದ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಿದೆ.
ಉತ್ತರಪ್ರದೇಶದ ಮತದಾರರ ಪಟ್ಟಿಯಲ್ಲಿ ಮೊದಲು 15.44 ಕೋಟಿ ಮತದಾರರ ಹೆಸರುಗಳಿದ್ದವು. ಪರಿಷ್ಕರಣೆಯ ಬಳಿಕ 2.89 ಕೋಟಿ ಮತದಾರರ ಹೆಸರುಗಳನ್ನು ಕೈಬಿಡಲಾಗಿದ್ದು, ಪಟ್ಟಿಯಲ್ಲಿ ಈಗ 12.55 ಕೋಟಿ ಹೆಸರುಗಳು ಉಳಿದಿವೆ ಎಂದು ಉತ್ತರಪ್ರದೇಶದ ಮುಖ್ಯ ಚುನಾವಣಾಧಿಕಾರಿ ನವದೀಪ್ ರಿನ್ವಾ ತಿಳಿಸಿದ್ದಾರೆ.
‘‘2025 ಅಕ್ಟೋಬರ್ 27ರಂದು ಮತದಾರರ ಪಟ್ಟಿಯಲ್ಲಿ 15,44,30,092 ಹೆಸರುಗಳಿದ್ದವು. ಈ ಪೈಕಿ 12,55,56,025 ಮಂದಿ ಎಣಿಕೆಯ ಕೊನೆಯ ದಿನಾಂಕವಾದ 2025 ಡಿಸೆಂಬರ್ 26ರವರೆಗೆ ತಮ್ಮ ಎಣಿಕೆ ಅರ್ಜಿಗಳನ್ನು ಸಲ್ಲಿಸಿದ್ದಾರೆ’’ ಎಂದು ಭಾರತೀಯ ಚುನಾವಣಾ ಆಯೋಗದ ಹೇಳಿಕೆ ತಿಳಿಸಿದೆ.
ಮತದಾರರ ಪಟ್ಟಿಯಿಂದ ಕೈಬಿಡಲಾಗಿರುವ ಹೆಸರುಗಳ ಪೈಕಿ 46.23 ಲಕ್ಷ (2.99 ಶೇಕಡ) ಮಂದಿ ಮೃತರಾಗಿದ್ದಾರೆ, 2.17 ಕೋಟಿ (14.06 ಶೇಕಡ) ಮಂದಿ ವಾಸ್ತವ್ಯ ಬದಲಾಯಿಸಿದ್ದಾರೆ ಮತ್ತು 25.46 ಲಕ್ಷ (1.65 ಶೇಕಡ) ಮಂದಿಯ ಹೆಸರುಗಳು ಒಂದಕ್ಕಿಂತ ಹೆಚ್ಚು ಬಾರಿ ನೋಂದಣಿಯಾಗಿವೆ ಎಂದು ಮುಖ್ಯ ಚುನಾವಣಾಧಿಕಾರಿ ತಿಳಿಸಿದ್ದಾರೆ.
ಕೈಬಿಡಲಾಗಿರುವ ಹೆಸರುಗಳಲ್ಲಿ ನೈಜ ಮತದಾರರಿದ್ದರೆ, ಅವರ ಹೆಸರುಗಳನ್ನು ಜನವರಿ 6ರಿಂದ ಫೆಬ್ರವರಿ 6ರವರೆಗಿನ ಆಕ್ಷೇಪ ಸಲ್ಲಿಕೆ ಅವಧಿಯಲ್ಲಿ ಮರಳಿ ಮತದಾರರ ಪಟ್ಟಿಗೆ ಸೇರಿಸಬಹುದಾಗಿದೆ ಎಂದು ಚುನಾವಣಾ ಆಯೋಗ ಹೇಳಿದೆ. ಅದಕ್ಕಾಗಿ ನಮೂನೆ–6ರಲ್ಲಿ ಘೋಷಣಾ ಪತ್ರ ಹಾಗೂ ನಿಗದಿತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ತಿಳಿಸಿದೆ.