×
Ad

ಉತ್ತರ ಪ್ರದೇಶ: ಪೊಲೀಸರು ನ್ಯಾಯ ಒದಗಿಸಿಲ್ಲ ಎಂದು ಎಸ್ಪಿ ಕಚೇರಿಯಲ್ಲಿ ಮೈಗೆ ಬೆಂಕಿ ಹಚ್ಚಿಕೊಂಡಿದ್ದ ದಲಿತ ವ್ಯಕ್ತಿ ಸಾವು

Update: 2023-12-30 21:02 IST

ಸಾಂದರ್ಭಿಕ ಚಿತ್ರ  

ಉನ್ನಾವೊ: ಭೂ ವಿವಾದ ಪ್ರಕರಣದಲ್ಲಿ ಪೋಲಿಸರು ತನಗೆ ನ್ಯಾಯವನ್ನು ಒದಗಿಸುತ್ತಿಲ್ಲ ಎಂದು ಆರೋಪಿಸಿ ಉತ್ತರ ಪ್ರದೇಶದ ಉನ್ನಾವೊ ಜಿಲ್ಲಾ ಪೋಲಿಸ್ ಅಧೀಕ್ಷಕ (ಎಸ್ಪಿ)ರ ಕಚೇರಿಯಲ್ಲಿ ಮೈಗೆ ಬೆಂಕಿ ಹಚ್ಚಿಕೊಂಡಿದ್ದ ದಲಿತ ವ್ಯಕ್ತಿಯೋರ್ವರು ಶುಕ್ರವಾರ ಮೃತಪಟ್ಟಿದ್ದಾರೆ.

ಪುರ್ವಾ ಕೊತ್ವಾಲಿ ಪ್ರದೇಶದ ಭುಲೆಮಾವ ಗ್ರಾಮದ ನಿವಾಸಿ ಶ್ರೀಚಂದ್ರ ಬುಧವಾರ ಎಸ್ಪಿ ಕಚೇರಿಯಲ್ಲಿ ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದರು. ಸ್ಥಳದಲ್ಲಿದ್ದ ಪೋಲಿಸ್ ಸಿಬ್ಬಂದಿಗಳು ಅವರ ಮೈಮೇಲೆ ಚಾದರ್ ಹೊದಿಸಿ ಬೆಂಕಿಯನ್ನು ಆರಿಸಿದ ಬಳಿಕ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಶೇ.೬೦ರಷ್ಟು ಸುಟ್ಟ ಗಾಯಗಳಾಗಿದ್ದ ಅವರನ್ನು ಬಳಿಕ ಲಕ್ನೋದ ಆಸ್ಪತ್ರೆಗೆ ಸಾಗಿಸಲಾಗಿದ್ದು,ಅಲ್ಲಿ ಶುಕ್ರವಾರ ಕೊನೆಯುಸಿರೆಳೆದಿದ್ದಾರೆ.

ತನಗೆ ಅನ್ಯಾಯವೆಸಗಿದ್ದಾರೆ ಎಂದು ಶ್ರೀಚಂದ್ರ ಆರೋಪಿಸಿದ್ದ ಇಬ್ಬರು ಅಧಿಕಾರಿಗಳನ್ನು ಹುದ್ದೆಗಳಿಂದ ತೆಗೆಯಲಾಗಿದೆ.

ಮರಣೋತ್ತರ ಪರೀಕ್ಷೆಯ ಬಳಿಕ ಅಪರಾಹ್ನ ಶ್ರೀಚಂದ್ರ ಅವರ ಮೃತದೇಹವನ್ನು ಸ್ವಗ್ರಾಮಕ್ಕೆ ತರಲಾಗಿದ್ದು, ರಸ್ತೆಯಲ್ಲಿ ಮೃತದೇಹವಿಟ್ಟು ಪ್ರತಿಭಟನೆ ನಡೆಸಿದ ಆಕ್ರೋಶಿತ ಗ್ರಾಮಸ್ಥರು ಮತ್ತು ಕುಟುಂಬ ಸದಸ್ಯರು, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಮತ್ತು ಮೃತರ ಪತ್ನಿಗೆ ಪರಿಹಾರವನ್ನು ನೀಡುವಂತೆ ಆಗ್ರಹಿಸಿದರು.

ಸರಕಾರಿ ಯೋಜನೆಗಳಡಿ ಎಲ್ಲ ಸೌಲಭ್ಯಗಳನ್ನು ಒದಗಿಸುವುದಾಗಿ ಮೃತರ ಕುಟುಂಬಕ್ಕೆ ಭರವಸೆ ನೀಡಲಾಗಿದೆ ಎಂದು ಹಿರಿಯ ಪೋಲಿಸ್ ಅಧಿಕಾರಿಯೋರ್ವರು ತಿಳಿಸಿದರು.

ಗ್ರಾಮದಲ್ಲಿಯ ತಮ್ಮ ಪೂರ್ವಜರ ಜಮೀನನ್ನು ಕೆಲವು ವ್ಯಕ್ತಿಗಳು ಅತಿಕ್ರಮಣ ಮಾಡಿಕೊಂಡಿದ್ದಾರೆ. ತಾನು ಆಕ್ಷೇಪಿಸಿದಾಗ ಕೊಲೆ ಉದ್ದೇಶದಿಂದ ಕುಟುಂಬ ಸದಸ್ಯರ ಮೇಲೆ ದಾಳಿ ಮಾಡಿದ್ದು, ಈ ಬಗ್ಗೆ ಪ್ರಕರಣ ದಾಖಲಾಗಿತ್ತು. ದಾಳಿಕೋರರ ವಿರುದ್ಧ ಕ್ರಮವನ್ನು ತೆಗೆದುಕೊಳ್ಳುವ ಬದಲು ಪೋಲಿಸರು ದೂರುದಾರರ ವಿರುದ್ಧವೇ ಸುಳ್ಳು ಪ್ರಕರಣವನ್ನು ದಾಖಲಿಸಿದ್ದರು ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಮೃತ ಶ್ರೀಚಂದ್ರರ ಸೋದರ ಆರೋಪಿಸಿದರು.

ತನ್ನ ಕುಟುಂಬದ ಸದಸ್ಯರು ಅಧಿಕಾರಿಗಳನ್ನು ಭೇಟಿಯಾಗಿ ನ್ಯಾಯ ಒದಗಿಸುವಂತೆ ಬೇಡಿಕೊಂಡಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಹೀಗಾಗಿ ತನ್ನ ಸೋದರ ಎಸ್ಪಿ ಕಚೇರಿಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದ ಎಂದು ಅವರು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News