×
Ad

ಉತ್ತರಪ್ರದೇಶ: ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ 'ಜೈ ಶ್ರೀ ರಾಮ್' ಘೋಷಣೆ ಕೂಗಿದ ವಿದ್ಯಾರ್ಥಿಗೆ ಆಕ್ಷೇಪ ವ್ಯಕ್ತಪಡಿಸಿದ ಅಧ್ಯಾಪಕರು ಅಮಾನತು

Update: 2023-10-21 22:13 IST

Photo: twitter/erbmjha

ಗಾಝಿಯಾಬಾದ್‌: ಉತ್ತರ ಪ್ರದೇಶದ ಗಾಝಿಯಾಬಾದ್‌ನ ಖಾಸಗಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದ ವೇಳೆ ವೇದಿಕೆಯಲ್ಲಿ 'ಜೈ ಶ್ರೀ ರಾಮ್' ಘೋಷಣೆ ಕೂಗಿದ ವಿದ್ಯಾರ್ಥಿಯನ್ನು ವೇದಿಕೆಯಿಂದ ಕೆಳಗಿಳಿಸಿದ ಇಬ್ಬರು ಹಿರಿಯ ಅಧ್ಯಾಪಕರನ್ನು ಅಮಾನತುಗೊಳಿಸಲಾಗಿದೆ ಎಂದು ವರದಿಗಳು ತಿಳಿಸಿವೆ.

ಶುಕ್ರವಾರ ಸಂಜೆ ಎಬಿಇಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಂಡಕ್ಷನ್ ಕಾರ್ಯಕ್ರಮದ ಅಂಗವಾಗಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ.

ವರದಿಗಳ ಪ್ರಕಾರ, ಪ್ರದರ್ಶನಕ್ಕಾಗಿ ವೇದಿಕೆಯೇರಿದ ವಿದ್ಯಾರ್ಥಿಯೊಬ್ಬ 'ಜೈ ಶ್ರೀ ರಾಮ್' ಎಂದು ಘೋಷಣೆ ಕೂಗಿದ್ದು, ಇದಕ್ಕೆ ಆಕ್ಷೇಪ ಎತ್ತಿದ ಇಬ್ಬರು ಮಹಿಳಾ ಪ್ರಾಧ್ಯಾಪಕರು, “ಇದೊಂದು ಸಾಂಸ್ಕೃತಿಕ ಕಾರ್ಯಕ್ರಮ, ಧಾರ್ಮಿಕ ಘೋಷಣೆಗಳಿಗೆ ಅವಕಾಶವಿಲ್ಲ” ಎಂದು ವಿದ್ಯಾರ್ಥಿಯನ್ನು ವೇದಿಕೆಯಿಂದ ಹೊರಹೋಗುವಂತೆ ಹೇಳಿದ್ದರು.

ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದಂತೆ, ಕೆಲವು ಬಲಪಂಥೀಯ ಗುಂಪುಗಳು ಕಾಲೇಜಿನ ಮುಂದೆ ಪ್ರತಿಭಟನೆಗಳನ್ನು ನಡೆಸಿದ್ದು, ಇನ್ನು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಅಧ್ಯಾಪಕರನ್ನು ಅಮಾನತುಗೊಳಿಸುವಂತೆ ಆಗ್ರಹಿಸಿ ಅಭಿಯಾನ ನಡೆಸಿದ್ದರು.

ಪ್ರಕರಣ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ಈ ವಿಷಯವನ್ನು ತನಿಖೆ ಮಾಡಲು ಸಮಿತಿಯನ್ನು ರಚಿಸಿದ ಕಾಲೇಜು ಆಡಳಿತ ಮಂಡಳಿ ಅಧ್ಯಾಪಕರಾದ ಮಮತಾ ಗೌತಮ್ ಮತ್ತು ಶ್ವೇತಾ ಶರ್ಮಾ ಅವರನ್ನು ಅಮಾನತುಗೊಳಿಸಿದೆ.

ಘಟನೆಯ ಬಗ್ಗೆ ಪೊಲೀಸ್ ತನಿಖೆಯನ್ನು ಕೂಡಾ ಪ್ರಾರಂಭಿಸಲಾಗಿದೆ ಎಂದು ವರದಿಗಳು ಹೇಳಿವೆ.

ಎಬಿಇಎಸ್ ಇಂಜಿನಿಯರಿಂಗ್ ಕಾಲೇಜಿನ ನಿರ್ದೇಶಕ ಡಾ ಸಂಜಯ್ ಕುಮಾರ್ ಸಿಂಗ್ ವಿಡಿಯೋ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ವಿದ್ಯಾರ್ಥಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

“ಕೆಲವು ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ವಿಷಯದ ಕುರಿತು ಭಿನ್ನಾಭಿಪ್ರಾಯವನ್ನು ಹೊಂದಿರುವ ವೀಡಿಯೊ ನನ್ನ ಅರಿವಿಗೆ ಬಂದಿದೆ. ತನಿಖಾ ಸಮಿತಿಯನ್ನು ರಚಿಸಲಾಗಿದ್ದು, ಪ್ರಕರಣದ ತನಿಖೆಯ ನಂತರ ಕ್ರಮ ಕೈಗೊಳ್ಳಲಾಗುವುದು. ವಿದ್ಯಾರ್ಥಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ,'' ಎಂದು ಅವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News