×
Ad

ಉತ್ತರಪ್ರದೇಶ: ಪೊಲೀಸ್ ಅಧಿಕಾರಿಯ ಗುಂಡಿನಿಂದ ಗಾಯಗೊಂಡ ಮಹಿಳೆ ಸಾವು

Update: 2023-12-14 21:00 IST

Photo: NDTV 

ಅಲಿಗಢ: ಉತ್ತರಪ್ರದೇಶದ ಅಲಿಗಢ ಜಿಲ್ಲೆಯ ಪೊಲೀಸ್ ಠಾಣೆಯೊಂದರ ಒಳಗೆ ಪೊಲೀಸ್ ಅಧಿಕಾರಿಯ ಪಿಸ್ತೂಲ್ ನಿಂದ ಆಕಸ್ಮಿಕವಾಗಿ ಸಿಡಿದ ಗುಂಡಿನಿಂದ ತಲೆಗೆ ಗಾಯವಾಗಿದ್ದ ಮಹಿಳೆಯೋರ್ವರು ಗುರುವಾರ ಮೃತಪಟ್ಟಿದ್ದಾರೆ.

ಈ ಘಟನೆ ಅಲಿಗಢ ಪೊಲೀಸ್ ಠಾಣೆಯಲ್ಲಿ ಡಿಸೆಂಬರ್ 8ರಂದು ಸಂಭವಿಸಿದೆ ಹಾಗೂ ಈ ಘಟನೆಯ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಮೃತಪಟ್ಟ ಮಹಿಳೆಯರನ್ನು ಇಶ್ರತ್‌ ಜಹಾನ್ ಎಂದು ಗುರುತಿಸಲಾಗಿದೆ. ಇಶ್ರತ್‌ ಜಹಾನ್ ತನ್ನ ಪುತ್ರನೊಂದಿಗೆ ಪಾಸ್ಪೋರ್ಟ್ ಪರಿಶೀಲನೆ ಮಾಡಿಸಿಕೊಳ್ಳಲು ಪೊಲೀಸ್ ಠಾಣೆಗೆ ತೆರಳಿದ್ದರು. ಈ ಸಂದರ್ಭ ಪೊಲೀಸ್ ಅಧಿಕಾರಿಯೊಬ್ಬರು ಆಗಮಿಸಿದ್ದರು ಹಾಗೂ ಪಿಸ್ತೂಲ್ ಅನ್ನು ಸಬ್ ಇನ್ಸ್‌ಪೆಕ್ಟರ್‌ ಮನೋಜ್ ಶರ್ಮಾ ಅವರಿಗೆ ನೀಡಿದ್ದರು.

ಸಬ್ ಇನ್ಸ್‌ಪೆಕ್ಟರ್‌ ಮನೋಜ್ ಅವರು ಪಿಸ್ತೂಲ್ ಸ್ವಚ್ಛಗೊಳಿಸುತ್ತಿದ್ದ ಸಂದರ್ಭ ಅದರಿಂದ ಆಕಸ್ಮಿಕವಾಗಿ ಇಶ್ರತ್‌ ಜಹಾನ್ ಅವರತ್ತ ಗುಂಡು ಹಾರಿದೆ. ಇದರಿಂದ ಅವರು ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಜವಾಹರ್ ಲಾಲ್ ನೆಹರೂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅವರು ಅಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಆದರೆ, ಅವರು ಗುರುವಾರ ಮೃತಪಟ್ಟಿದ್ದಾರೆ.

ಈ ಹಿನ್ನೆಲೆಯಲ್ಲಿ ಆಸ್ಪತ್ರೆ ಹಾಗೂ ಕೊಟ್ವಾಲಿ ಪೊಲೀಸ್ ಠಾಣೆಗೆ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು. ಈ ನಡುವೆ ತಲೆಮರೆಸಿಕೊಂಡಿರುವ ಸಬ್ ಇನ್ಸ್‌ಪೆಕ್ಟರ್‌ ಮನೋಜ್ ಶರ್ಮಾ ಅವರನ್ನು ಪತ್ತೆ ಹಚ್ಚಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಪರಾರಿಯಾಗಿರುವ ಶರ್ಮಾ ವಿರುದ್ಧ ಜಾಮೀನು ರಹಿತ ಬಂಧನಾದೇಶ ಹೊರಡಿಸಲಾಗಿದೆ.

ಇದಲ್ಲದೆ, ಜೈಲಿಗೆ ಕಳುಹಿಸಲಾದ ಪೊಲೀಸ್ ಠಾಣೆ ಉಸ್ತುವಾರಿ ಸುದೀಪ್ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News