×
Ad

ವಡೋದರಾ ದೋಣಿ ದುರಂತ: ತಪ್ಪಿತಸ್ಥ ಆಯುಕ್ತರನ್ನು ರಕ್ಷಿಸುವ ಯತ್ನವನ್ನು ತನಿಖಾ ವರದಿ ಮಾಡಿದೆ ಎಂದ ಗುಜರಾತ್‌ ಹೈಕೋರ್ಟ್‌

Update: 2024-06-28 14:42 IST

Photo: PTI

ಅಹ್ಮದಾಬಾದ್:‌ ಹನ್ನೆರಡು ವಿದ್ಯಾರ್ಥಿಗಳು ಮತ್ತು ಇಬ್ಬರು ಶಿಕ್ಷಕರನ್ನು ಬಲಿ ಪಡೆದ ವಡೋದರಾದ ಹರ್ನಿ ಕೆರೆಯಲ್ಲಿ ನಡೆದ ದೋಣಿ ದುರಂತದ ಕುರಿತಂತೆ ರಾಜ್ಯ ಸರ್ಕಾರ ಸಲ್ಲಿಸಿರುವ ತನಿಖಾ ವರದಿಯ ಬಗ್ಗೆ ಗುಜರಾತ್‌ ಹೈಕೋರ್ಟ್‌ ತನ್ನ ಅಸಮಾಧಾನ ವ್ಯಕ್ತಪಡಿಸಿದೆ. ಆಗಿನ ವಡೋದರಾ ಮುನಿಸಿಪಲ್‌ ಆಯುಕ್ತರು ತಪ್ಪಿತಸ್ಥರು ಎಂದು ತನಿಖಾ ಸಮಿತಿ ಕಂಡುಕೊಂಡಿದ್ದರೂ ಅವರನ್ನು ರಕ್ಷಿಸುವ ಯತ್ನವನ್ನು ವರದಿಯಲ್ಲಿ ಮಾಡಲಾಗಿದೆ ಎಂದು ಹೈಕೋರ್ಟ್‌ ಹೇಳಿದೆ. ಈ ದುರಂತ ಈ ವರ್ಷದ ಜನವರಿ 18ರಂದು ನಡೆದಿತ್ತು. ಈ ಕುರಿತ ಸ್ವಯಂಪ್ರೇರಿತ ಪಿಐಎಲ್‌ ಒಂದರ ವಿಚಾರಣೆಯನ್ನು ಗುಜರಾತ್‌ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿ ಸುನೀತಾ ಅಗರ್ವಾಲ್‌ ಮತ್ತು ನ್ಯಾಯಮೂರ್ತಿ ಪ್ರಣವ್‌ ತ್ರಿವೇದಿ ಅವರ ಪೀಠ ಗುರುವಾರ ನಡೆಸಿದೆ.

“ಈ ವರದಿಯು ವಡೋದರಾದ ಆಗಿನ ಮುನಿಸಿಪಲ್‌ ಆಯುಕ್ತರು ತಪ್ಪಿತಸ್ಥರೆಂದು ಕಂಡುಕೊಂಡಿದ್ದರೂ ಈ ದುರಂತದಲ್ಲಿ ಅವರ ಪಾತ್ರವನ್ನು ಬದಿಗೆ ಸರಿಸಲು ವರದಿ ಯತ್ನಿಸಿದೆ,” ಎಂದು ಮುಖ್ಯ ನ್ಯಾಯಮೂರ್ತಿಗಳು ಹೇಳಿದರು.

ತನಿಖಾ ವರದಿಯನ್ನು ರಾಜ್ಯದ ನಗರಾಭಿವೃದ್ಧಿ ಮತ್ತು ನಗರ ವಸತಿ ಇಲಾಖೆ ಗುರುವಾರ ಸೀಲ್ಡ್‌ ಕವರಿನಲ್ಲಿ ಸಲ್ಲಿಸಿತ್ತು.

ಕೆರೆ ಪ್ರದೇಶದ ನಿರ್ವಹಣೆಗೆ ವಡೋದರಾ ಮುನಿಸಿಪಲ್‌ ಕಾರ್ಪೊರೇಷನ್‌ ಕೊಟಿಯಾ ಪ್ರಾಜೆಕ್ಟ್ಸ್‌ಗೆ ಗುತ್ತಿಗೆ ನೀಡಿತ್ತು. ದುರಂತದ ನಂತರ ಆ ಸಂಸ್ಥೆಯ ಪಾಲುದಾರರನ್ನು ಬಂಧಿಸಲಾಗಿತ್ತು.

ಎಪ್ರಿಲ್‌ 25ರ ವಿಚಾರಣ ವೇಳೆ ನ್ಯಾಯಾಲಯವು ಈ ಘಟನೆಗೆ ಸಂಬಂಧಿಸಿದಂತೆ ಇಲಾಖಾ ತನಿಖೆಗೆ ಆದೇಶಿಸಿತ್ತು. ಆಯುಕ್ತರು 2015-16ರಲ್ಲಿ ಹರ್ನಿ ಮೋಟನಾಥ್‌ ಲೇಕ್‌ಫ್ರಂಟ್‌ ಯೋಜನೆಯನ್ನು ಅಕ್ರಮವಾಗಿ ಕೋಟಿಯಾ ಪ್ರಾಜೆಕ್ಟ್ಸ್‌ಗೆ ವಹಿಸಿದ್ದರೆಂದು ತಿಳಿದು ಬಂದಿದೆ ಎಂದು ಹೈಕೋರ್ಟ್‌ ಆಗ ಹೇಳಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News