ಬಿಜೆಪಿಗೆ ವೇದಾಂತ್ ಲಿಮಿಟೆಡ್ ನ ದೇಣಿಗೆ ನಾಲ್ಕು ಪಟ್ಟು ಹೆಚ್ಚಳ
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ, ಜು. 13: ಬಿಲಿಯನೇರ್ ಅನಿಲ್ ಅಗ್ರವಾಲ್ ಅವರ ಗಣಿಗಾರಿಕೆ ಸಂಸ್ಥೆ ವೇದಾಂತ ಲಿಮಿಟೆಡ್ ಆಡಳಿತಾರೂಢ ಬಿಜೆಪಿಗೆ ನೀಡಿದ ದೇಣಿಗೆ ಸುಮಾರು ನಾಲ್ಕು ಪಟ್ಟು ಹೆಚ್ಚಾಗಿದೆ. 2025 ಮಾರ್ಚ್‌ನಲ್ಲಿ ಅಂತ್ಯಗೊಂಡ ಹಣಕಾಸು ವರ್ಷದಲ್ಲಿ ವೇದಾಂತ ಲಿಮಿಟೆಡ್ ಬಿಜೆಪಿಗೆ 97 ಕೋ.ರೂ. ದೇಣಿಗೆ ನೀಡಿದೆ ಎಂದು ವೇದಾಂತ್ ಲಿಮಿಟೆಡ್‌ನ ಇತ್ತೀಚೆಗಿನ ವಾರ್ಷಿಕ ವರದಿ ತಿಳಿಸಿದೆ.
ವೇದಾಂತ ಲಿಮಿಟೆಡ್ ತನ್ನ ಪೋಷಕ ಸಂಸ್ಥೆ ಲಂಡನ್ ನ ವೇದಾಂತ ರಿಸೋರ್ಸಸ್ ಪಿಎಲ್‌ಸಿಗೆ ‘ವಿವಿಧ ವೆಚ್ಚ’ಗಳ ಅಡಿಯಲ್ಲಿ ನೀಡಲಾದ ರಾಜಕೀಯ ದೇಣಿಗೆಳು ಹಾಗೂ ನಿರ್ವಹಣೆ, ಬ್ರಾಂಡ್ ಶುಲ್ಕದ ವೆಚ್ಚವನ್ನು ವರದಿಯಲ್ಲಿ ತಿಳಿಸಿದೆ.
2024-25ರಲ್ಲಿ ರಾಜಕೀಯ ದೇಣಿಗೆ ಒಟ್ಟು 157 ಕೋಟಿ ರೂ.ಗಳಾಗಿದ್ದು, ಹಿಂದಿನ ಹಣಕಾಸು ವರ್ಷದಲ್ಲಿ ಇದು 97 ಕೋಟಿ ರೂಪಾಯಿ ಇತ್ತು. ಬಿಜೆಪಿಗೆ ನೀಡಿದ ದೇಣಿಗೆ ಹೆಚ್ಚಾದರೆ, ಪ್ರತಿಪಕ್ಷವಾದ ಕಾಂಗ್ರೆಸ್ ನ ನೀಡಿದ ದೇಣಿಗೆ ಕೇವಲ 10 ಕೋಟಿ ರೂ.ಗೆ ಇಳಿಕೆಯಾಗಿದೆ.
2024 ಎಪ್ರಿಲ್ ನಿಂದ 2025 ಮಾರ್ಚ್ ವರೆಗಿನ ಹಣಕಾಸು ವರ್ಷದಲ್ಲಿ ದೇಣಿಗೆ ನೀಡಿರುವುದರಲ್ಲಿ ಬಿಜೆಪಿಗೆ 97 ಕೋ.ರೂ., ಬಿಜು ಜನತಾದಳಕ್ಕೆ 25 ಕೋ.ರೂ., ಜಾರ್ಖಂಡ್ ಮುಕ್ತಿ ಮೋರ್ಚಾಕ್ಕೆ 20 ಕೋ.ರೂ. ಆಲ್ ಇಂಡಿಯಾ ಕಾಂಗ್ರೆಸ್ ಕಮಿಟಿಗೆ 10 ಕೋ.ರೂ. ದೇಣಿಗೆ ನೀಡಿರುವುದು ಒಳಗೊಂಡಿದೆ ಎಂದು ವೇದಾಂತ್‌ನ 2024-25ರ ವಾರ್ಷಿಕ ವರದಿ ತಿಳಿಸಿದೆ.