ಗಾರ್ಬಾ ಕಾರ್ಯಕ್ರಮದಲ್ಲಿ ಹಿಂದೂಗಳಿಗೆ ಮಾತ್ರ ಪ್ರವೇಶ ಎಂಬ VHP ಫರ್ಮಾನು ಹಿಂಸೆಗೆ ಆಹ್ವಾನ: ಕೇಂದ್ರ ಸಚಿವ ಅಠಾವಳೆ ಅಸಮಾಧಾನ
ಕೇಂದ್ರ ಸಚಿವ ರಾಮದಾಸ್ ಅಠಾವಳೆ (PTI)
ಮುಂಬೈ: ನವರಾತ್ರಿಯ ಸಂದರ್ಭದಲ್ಲಿ ನಡೆಯುವ ಗಾರ್ಬಾ ಕಾರ್ಯಕ್ರಮಕ್ಕೆ ಹಿಂದೂಗಳಿಗೆ ಮಾತ್ರ ಪ್ರವೇಶ ನೀಡಬೇಕು ಎಂಬ ವಿಶ್ವ ಹಿಂದೂ ಪರಿಷತ್ ಕರೆಯನ್ನು ರವಿವಾರ ಟೀಕಿಸಿದ ಕೇಂದ್ರ ಸಚಿವ ರಾಮದಾಸ್ ಅಠಾವಳೆ, ಇಂತಹ ಕರೆಯು ಹಿಂಸೆಗೆ ಆಹ್ವಾನ ನೀಡುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನವರಾತ್ರಿ ಮಹಾರಾಷ್ಟ್ರದಲ್ಲಿನ ಪವಿತ್ರ ಸಾಂಪ್ರದಾಯಿಕ ಹಬ್ಬವಾಗಿದ್ದು, ಈ ಸಂದರ್ಭದಲ್ಲಿ ಕೋಲಾಟ ನೃತ್ಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತದೆ. ಈ ನವರಾತ್ರಿಯು ಸೆಪ್ಟೆಂಬರ್ 22ರಿಂದ ಅಕ್ಟೋಬರ್ 1ರವರೆಗೆ ಮಹಾರಾಷ್ಟ್ರದಲ್ಲಿ ನಡೆಯಲಿದೆ.
ಈ ಕುರಿತು ಶನಿವಾರ ಹೇಳಿಕೆ ನೀಡಿದ್ದ ವಿಶ್ವ ಹಿಂದೂ ಪರಿಷತ್, ಗಾರ್ಬಾ ನೃತ್ಯ ಕಾರ್ಯಕ್ರಮಕ್ಕೆ ಕೇವಲ ಹಿಂದೂಗಳಿಗೆ ಮಾತ್ರ ಪ್ರವೇಶ ನೀಡಬೇಕು ಹಾಗೂ ʼಲವ್ ಜಿಹಾದ್ʼ ಪ್ರಕರಣಗಳನ್ನು ನಿಯಂತ್ರಿಸಲು ಕಾರ್ಯಕ್ರಮಕ್ಕೆ ಆಗಮಿಸುವವರ ಆಧಾರ್ ಕಾರ್ಡ್ ಗಳನ್ನು ಪರಿಶೀಲಿಸಬೇಕು ಎಂದು ಕಾರ್ಯಕ್ರಮ ಸಂಘಟಕರಿಗೆ ತಾಕೀತು ಮಾಡಿತ್ತು.
ವಿಶ್ವ ಹಿಂದೂ ಪರಿಷತ್ ನ ಈ ನಿಲುವಿಗೆ ಎಕ್ಸ್ ನಲ್ಲಿ ಆಕ್ಷೇಪ ವ್ಯಕ್ತಪಡಿಸಿರುವ ರಾಮದಾಸ್ ಅಠಾವಳೆ, “ನಾನಿದನ್ನು ಬಲವಾಗಿ ಖಂಡಿಸುತ್ತೇನೆ! ಗಾರ್ಬಾ ಕಾರ್ಯಕ್ರಮಕ್ಕೆ ಯಾರು ಹೋಗಬೇಕು ಹಾಗೂ ಯಾರು ಹೋಗಬಾರದು ಎಂದು ನಿರ್ಧರಿಸಲು ವಿಶ್ವ ಹಿಂದೂ ಪರಿಷತ್ ಯಾವುದು? ಇದು ಸಲಹೆಯು ಕೇವಲ ಸಂಘಟಕರಿಗೆ ಮಾತ್ರ ಸೀಮಿತವಾಗಿಲ್ಲ. ಬದಲಿಗೆ, ಕೆಲವು ಮೂಲಭೂತವಾದಿ ಶಕ್ತಿಗಳಿಗೆ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಲು ಹಾಗೂ ಬಲವನ್ನು ಪ್ರಯೋಗಿಸಲು ನೀಡಿರುವ ಮುಕ್ತ ಆಹ್ವಾನವಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಗಾರ್ಬಾ ನೃತ್ಯ ಕಾರ್ಯಕ್ರಮಕ್ಕೆ ಕೇವಲ ಹಿಂದೂಗಳಿಗೆ ಮಾತ್ರ ಪ್ರವೇಶ ನೀಡಬೇಕು ಎಂಬ ವಿಶ್ವ ಹಿಂದೂ ಪರಿಷತ್ ಫರ್ಮಾನಿನ ವಿರುದ್ಧ ವಿವಿಧ ರಾಜಕೀಯ ಪಕ್ಷಗಳ ನಾಯಕರೂ ಆಕ್ಷೇಪ ವ್ಯಕ್ತಪಡಿಸಿದ್ದಾರೆ.