×
Ad

ಸಂವಿಧಾನದ ಪೀಠಿಕೆಯಲ್ಲಿನ ‘ಸಮಾಜವಾದಿ’ ಮತ್ತು ‘ಜಾತ್ಯತೀತ’ ಪದಗಳನ್ನು ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಸೇರಿಸಲಾಗಿತ್ತು: ಉಪರಾಷ್ಟ್ರಪತಿ ಧನ್ಕರ್

Update: 2025-06-28 15:47 IST

ಜಗದೀಪ ಧನ್ಕರ್ | PTI 

ಹೊಸದಿಲ್ಲಿ: ಸಂವಿಧಾನದ ಪೀಠಿಕೆಯನ್ನು ಬದಲಿಸಲು ಸಾಧ್ಯವಿಲ್ಲ,ಏಕೆಂದರೆ ಅದು ಸಂವಿಧಾನದ ಬೀಜವಾಗಿದೆ ಮತ್ತು ಅದರ ಮೇಲೆಯೇ ಸಂವಿಧಾನವು ಬೆಳೆದಿದೆ ಎಂದು ಉಪರಾಷ್ಟ್ರಪತಿ ಜಗದೀಪ ಧನ್ಕರ್ ಅವರು ಶನಿವಾರ ಇಲ್ಲಿ ಪ್ರತಿಪಾದಿಸಿದರು.

ಇಲ್ಲಿ ಪುಸ್ತಕವೊಂದರ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಧನ್ಕರ್,‘‘ಭಾರತದ ಸಂವಿಧಾನವನ್ನು ಹೊರತುಪಡಿಸಿ ಬೇರೆ ಯಾವುದೇ ಸಂವಿಧಾನವು ಬದಲಾವಣೆಗೆ ಒಳಗಾಗಿಲ್ಲ, ಆದರೆ 1976ರಲ್ಲಿ 42ನೇ ಸಂವಿಧಾನ(ತಿದ್ದುಪಡಿ) ಕಾಯ್ದೆಯ ಮೂಲಕ ನಮ್ಮ ಸಂವಿಧಾನದ ಪೀಠಿಕೆಯನ್ನು ಬದಲಿಸಲಾಗಿತ್ತು ಹಾಗೂ ‘ಸಮಾಜವಾದಿ’,‘ಜಾತ್ಯತೀತ’ ಮತ್ತು ‘ಸಮಗ್ರತೆ’ ಪದಗಳನ್ನು ಸೇರಿಸಲಾಗಿತ್ತು. ನಾವು ಯೋಚಿಸಬೇಕು, ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನವನ್ನು ರಚಿಸಲು ತುಂಬ ಶ್ರಮಿಸಿದ್ದರು ಮತ್ತು ಅವರು ಖಂಡಿತವಾಗಿಯೂ ಅದರ ಮೇಲೆ ಗಮನವನ್ನು ಕೇಂದ್ರೀಕರಿಸಿದ್ದಿರಬೇಕು ’’ಎಂದು ಹೇಳಿದರು.

ಸಂವಿಧಾನದ ಪೀಠಿಕೆಯಲ್ಲಿನ ‘ಸಮಾಜವಾದಿ’ ಮತ್ತು ‘ಜಾತ್ಯತೀತ’ ಪದಗಳನ್ನು ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಸೇರಿಸಲಾಗಿತ್ತು ಮತ್ತು ಅವು ಎಂದೂ ಅಂಬೇಡ್ಕರ್ ರಚಿಸಿದ ಸಂವಿಧಾನದ ಭಾಗವಾಗಿರಲಿಲ್ಲ ಎಂದು ಗುರುವಾರ ಹೇಳಿದ್ದ ಆರೆಸ್ಸೆಸ್‌ನ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ,ಈ ಪದಗಳು ಸಂವಿಧಾನದ ಪೀಠಿಕೆಯಲ್ಲಿ ಇರಬೇಕೇ ಎಂಬ ಬಗ್ಗೆ ರಾಷ್ಟ್ರೀಯ ಚರ್ಚೆಗೆ ಕರೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಧನ್ಕರ್ ಅವರ ಹೇಳಿಕೆ ಹೊರಬಿದ್ದಿದೆ. ಹೊಸಬಾಳೆಯವರ ಕರೆ ರಾಜಕೀಯ ವಿವಾದವನ್ನು ಹುಟ್ಟುಹಾಕಿದೆ.

ಕರೆಯನ್ನು ಟೀಕಿಸಿರುವ ಕಾಂಗ್ರೆಸ್ ಮತ್ತು ಇತರ ಪ್ರತಿಪಕ್ಷಗಳು,ಇದು ರಾಜಕೀಯ ಅವಕಾಶವಾದವಾಗಿದೆ ಮತ್ತು ಸಂವಿಧಾನದ ಆತ್ಮದ ಮೇಲೆ ಉದ್ದೇಶಪೂರ್ವಕ ದಾಳಿಯಾಗಿದೆ ಎಂದು ಟೀಕಿಸಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News