ವಿರೋಧ ಪಕ್ಷದ ಸರಪಂಚರನ್ನು ಹೊಂದಿರುವ ಗ್ರಾಮಕ್ಕೆ ಒಂದು ರೂಪಾಯಿಯ ಅನುದಾನವಿಲ್ಲ: ಮಹಾರಾಷ್ಟ್ರ ಸಚಿವ ರಾಣೆ ವಿವಾದಾತ್ಮಕ ಹೇಳಿಕೆ
Photo Credit: PTI
ಮುಂಬೈ: ಶಿವಸೇನೆ (ಉದ್ಧವ್ ಬಣ) ಹಾಗೂ ಇನ್ನಿತರ ವಿರೋಧ ಪಕ್ಷಗಳ ಬೆಂಬಲಿಗರು ತಮ್ಮ ಪ್ರದೇಶಗಳಿಗೆ ಯಾವುದೇ ಅನುದಾನ ಪಡೆಯುವುದಿಲ್ಲ ಎಂದು ಹೇಳುವ ಮೂಲಕ ಮಹಾರಾಷ್ಟ್ರ ಸಚಿವ ಹಾಗೂ ಬಿಜೆಪಿ ನಾಯಕ ನಿತೇಶ್ ರಾಣೆ ವಿವಾದದ ಕಿಡಿ ಹೊತ್ತಿಸಿದ್ದಾರೆ.
ಬುಧವಾರ ಸಿಂಧುದರ್ಗ ಜಿಲ್ಲೆಯ ಒರೋಸ್ ನಲ್ಲಿ ಆಯೋಜಿಸಿದ್ದ ಬಿಜೆಪಿ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಮೀನುಗಾರಿಕೆ ಮತ್ತು ಬಂದರು ಅಭಿವೃದ್ಧಿ ಸಚಿವರೂ ಆದ ರಾಣೆ, ಒಂದು ವೇಳೆ ವಿರೋಧ ಪಕ್ಷಗಳ ಮಹಾ ವಿಕಾಸ್ ಅಘಾಡಿಯ ಕಾರ್ಯಕರ್ತರಿಗೆ ತಮ್ಮ ಕ್ಷೇತ್ರಗಳಲ್ಲಿ ಅಭಿವೃದ್ಧಿ ಬೇಕಿದ್ದರೆ, ಅವರು ಬಿಜೆಪಿ ಸೇರಬೇಕು ಎಂದು ಬೆದರಿಕೆ ಒಡ್ಡಿದ್ದಾರೆ.
“ಹಲವಾರು ಮಹಾ ವಿಕಾಸ್ ಅಘಾಡಿ ಕಾರ್ಯಕರ್ತರು ಈಗಾಗಲೇ ಬಿಜೆಪಿಯನ್ನು ಸೇರ್ಪಡೆಯಾಗಿದ್ದು, ಬಾಕಿ ಉಳಿದಿರುವವವರೂ ಇದೇ ಕೆಲಸ ಮಾಡಬೇಕು ಎಂದು ನಾನು ಪ್ರೋತ್ಸಾಹಿಸುತ್ತೇನೆ. ಆಡಳಿತಾರೂಢ ಮಹಾಯುತಿ ಕಾರ್ಯಕರ್ತರು ಮಾತ್ರ ಅನುದಾನ ಸ್ವೀಕರಿಸಲಿದ್ದಾರೆ. ಮಹಾ ವಿಕಾಸ್ ಅಘಾಡಿ ಮೈತ್ರಿಕೂಟದ ಸರಪಂಚರು ಅಥವಾ ಇನ್ಯಾವುದೇ ಪದಾಧಿಕಾರಿಗಳನ್ನು ಹೊಂದಿರುವ ಗ್ರಾಮವು ಒಂದು ರೂಪಾಯಿಯ ಅನುದಾನ ಸ್ವೀಕರಿಸುವುದಿಲ್ಲ” ಎಂದು ಅವರು ಎಚ್ಚರಿಸಿದ್ದಾರೆ.
ರಾಣೆಯ ಈ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ವ್ಯಕ್ತಪಡಿಸಿರುವ ವಿರೋಧ ಪಕ್ಷಗಳ ನಾಯಕರು, ಸಚಿವ ರಾಣೆ ತಮ್ಮ ಪ್ರಮಾಣ ವಚನವನ್ನು ಮರೆತಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ.
ಸಚಿವ ನಿತೇಶ್ ರಾಣೆಯ ಭಾಷಣದ ವೀಡಿಯೊವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಎನ್ಸಿಪಿ (ಎಸ್ಪಿ) ಶಾಸಕ ರೋಹಿತ್ ಪವಾರ್, “ಬಹುಶಃ ಅವರು ಪ್ರಮಾಣ ವಚನವನ್ನು ಜಾಗರೂಕತೆಯಿಂದ ಓದಿಲ್ಲ ಅಥವಾ ಮರೆತಿರುವಂತಿದೆ. ಒಂದು ವೇಳೆ ಸಚಿವರು ಈ ರೀತಿಯಲ್ಲಿ ಸಂವಿಧಾನಕ್ಕೆ ಹಾನಿ ಮಾಡಲು ಹೊರಟರೆ, ಸಂವಿಧಾನ ಉಳಿಯುವುದಾದರೂ ಹೇಗೆ? ಮುಖ್ಯಮಂತ್ರಿಗಳು ತಮ್ಮ ಸಚಿವರಿಗೆ ಎಚ್ಚರಿಕೆ ನೀಡಬೇಕು”, ಎಂದು ವಾಗ್ದಾಳಿ ನಡೆಸಿದ್ದಾರೆ.
ಈ ವೀಡಿಯೊವನ್ನು ಶಿವಸೇನೆ (ಉದ್ಧವ್ ಬಣ) ನಾಯಕಿ ಸುಷ್ಮಾ ಅಂಧಾರೆ ಕೂಡಾ ಹಂಚಿಕೊಂಡಿದ್ದು, “ಭಾರತವನ್ನು ವಿಶ್ವಗುರು ಮಾಡುವ ಕುರಿತು ಮಾತನಾಡುತ್ತಿರುವ ಪ್ರಧಾನಿ ಹಾಗೂ ಅವರು ಪಕ್ಷವು, ಈ ಮಾತುಗಳನ್ನು ಕೇಳಿದ ನಂತರವೂ ದೇಶದಲ್ಲಿ ಪ್ರಜಾಪ್ರಭುತ್ವ ಜೀವಂತವಿದೆಯೆ ಎಂಬುದರ ಬಗ್ಗೆ ಮಾತನಾಡುವರೆ?” ಎಂದು ಪ್ರಶ್ನಿಸಿದ್ದಾರೆ.