×
Ad

ಹಣ, ಮದ್ಯ, ಉಡುಗೊರೆಗಳ ಆಮಿಷಕ್ಕೆ ಒಳಗಾಗುವ ಮತದಾರರು ಮುಂದಿನ ಜನ್ಮದಲ್ಲಿ ಪ್ರಾಣಿಗಳಾಗಿ ಹುಟ್ಟಲಿದ್ದಾರೆ: ಬಿಜೆಪಿ ಶಾಸಕಿ

Update: 2025-04-18 17:02 IST

ಉಷಾ ಠಾಕೂರ್ | PC : NDTV

ಇಂದೋರ್: ಹಣ, ಮದ್ಯ, ಉಡುಗೊರೆಗಳ ಆಮಿಷಕ್ಕೆ ಬಲಿಯಾಗುವ ಮತದಾರರ ವಿರುದ್ಧ ವಾಗ್ದಾಳಿ ನಡೆಸಿದ ಮಧ್ಯಪ್ರದೇಶದ ಬಿಜೆಪಿ ಶಾಸಕಿ ಹಾಗೂ ಮಾಜಿ ಸಚಿವೆ ಉಷಾ ಠಾಕೂರ್, ಪ್ರಜಾಪ್ರಭುತ್ವವನ್ನು ಮಾರಾಟ ಮಾಡುವವರು ಮುಂದಿನ ಜನ್ಮದಲ್ಲಿ ಒಂಟೆಗಳು, ಕುರಿಗಳು, ಮೇಕೆಗಳು, ನಾಯಿಗಳು ಹಾಗೂ ಬೆಕ್ಕುಗಳಾಗಿ ಹುಟ್ಟಲಿದ್ದಾರೆ ಎಂದು ಹೇಳಿದ್ದಾರೆ.

ಬುಧವಾರ ಮಹೋವ್ ವಿಧಾನಸಭಾ ಕ್ಷೇತ್ರದ ಹಸಲ್ಪುರ್ ಗ್ರಾಮದಲ್ಲಿ ನಡೆದ ಸಭೆಯನ್ನುದ್ದೇಶಿಸಿ ಉಷಾ ಠಾಕೂರ್ ನೀಡಿರುವ ಈ ಹೇಳಿಕೆಯ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, "ಉಷಾ ಠಾಕೂರ್ ಅವರದ್ದು ಸಂಪ್ರದಾಯವಾದಿ ಚಿಂತನೆ" ಎಂದು ವಿರೋಧ ಪಕ್ಷವಾದ ಕಾಂಗ್ರೆಸ್ ಟೀಕಿಸಿದೆ.

ʼಲಾಡ್ಕಿ ಬಹಿಣ್ʼ ಯೋಜನೆ ಹಾಗೂ ʼಕಿಸಾನ್ ಸಮ್ಮಾನ್‌ʼನಂತಹ ಹಲವಾರು ಬಿಜೆಪಿ ಸರಕಾರದ ಯೋಜನೆಗಳ ಮೂಲಕ ಪ್ರತಿಯೊಬ್ಬ ಫಲಾನುಭವಿಯ ಖಾತೆಗೆ ಸಾವಿರಾರು ರೂಪಾಯಿ ಜಮೆಯಾಗುತ್ತಿದೆ. ಹೀಗಿದ್ದೂ, ಮತದಾರರು ಒಂದು ಸಾವಿರ ರೂಪಾಯಿ, ಐನೂರು ರೂಪಾಯಿಗೆ ಮಾರಾಟವಾದರೆ, ಅದು ಮನುಷ್ಯರ ಪಾಲಿಗೆ ನಾಚಿಕೆಗೇಡಿನ ಸಂಗತಿಯಾಗಿದೆ" ಎಂದು ಹೇಳಿದ ಅವರು, ಪ್ರಜಾಪ್ರಭುತ್ವವನ್ನು ರಕ್ಷಿಸುವಂತೆ ಜನರನ್ನು ಆಗ್ರಹಿಸಿದ್ದಾರೆ.

ಇಂತಹ ವಿವಾದಾತ್ಮಕ ಹೇಳಿಕೆಗಳಿಂದ ಈ ಹಿಂದೆಯೂ ಸುದ್ದಿಯಾಗಿದ್ದ ಶಾಸಕಿ ಉಷಾ ಠಾಕೂರ್, ದೇಶ, ಧರ್ಮ ಹಾಗೂ ಸಂಸ್ಜೃತಿಗಾಗಿ ಸೇವೆ ಸಲ್ಲಿಸುತ್ತಿರುವ ಬಿಜೆಪಿಗೆ ಮಾತ್ರ ಮತದಾರರು ಮತ ಚಲಾಯಿಸಬೇಕು ಎಂದೂ ಕರೆ ನೀಡಿದ್ದಾರೆ.

ಉಷಾ ಠಾಕೂರ್ ಹೇಳಿಕೆಯನ್ನು ತರಾಟೆಗೆ ತೆಗೆದುಕೊಂಡ ಮಧ್ಯಪ್ರದೇಶ ಕಾಂಗ್ರೆಸ್ ವಕ್ತಾರ ಮೃಣಾಲ್ ಪಂತ್, ಉಷಾ ಠಾಕೂರ್‌ರ ಹೇಳಿಕೆ ಕೇವಲ ಅವರ ಸಂಪ್ರದಾಯವಾದಿ ಚಿಂತನೆಗಳನ್ನು ಮಾತ್ರ ತೋರಿಸುತ್ತಿಲ್ಲ, ಬದಲಿಗೆ, ಮಹೋವ್ ವಿಧಾನಸಭಾ ಕ್ಷೇತ್ರದ ಬಿಜೆಪಿ ನಾಯಕರ ನಡುವಿನ ಆಂತರಿಕ ಸಂಘರ್ಷವನ್ನೂ ತೋರಿಸುತ್ತಿದೆ" ಎಂದು ಬೊಟ್ಟು ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News