ವಕ್ಫ್ ನೋಂದಣಿ ಇಂದು ಅಂತ್ಯ; ವಿಸ್ತರಣೆ ಇಲ್ಲ:ಕಿರಣ್ ರಿಜಿಜು
PC: x.com/KirenRijiju
ಹೊಸದಿಲ್ಲಿ: ಕೇಂದ್ರದ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ ಆರಂಭಿಸಿದ ಉಮೀದ್ ಸೆಂಟ್ರಲ್ ಪೋರ್ಟಲ್ ನಲ್ಲಿ ಇದುವರೆಗೆ 4.6 ಲಕ್ಷ ವಕ್ಫ್ ಆಸ್ತಿಗಳ ವಿವರಗಳನ್ನು ಅಪ್ಲೋಡ್ ಮಾಡಲಾಗಿದೆ. ವಕ್ಫ್ (ತಿದ್ದಪಡಿ) ಕಾಯ್ದೆ-2025ರಡಿ ನೀಡಲಾದ ಆರು ತಿಂಗಳ ಗಡುವು ಶನಿವಾರ ಮುಕ್ತಾಯಗೊಳ್ಳುತ್ತಿದೆ ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ಹೇಳಿದ್ದಾರೆ.
ಯಾವುದೇ ಕಾರಣಕ್ಕೆ ಈ ಗಡುವು ವಿಸ್ತರಿಸುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಅವರು, ಇದುವರೆಗೆ ಅಪ್ಲೋಡ್ ಮಾಡದಿದ್ದಲ್ಲಿ ಅಂಥವರು ವಕ್ಫ್ ನ್ಯಾಯಮಂಡಳಿಯನ್ನು ಸಂಪರ್ಕಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
ಆದಾಗ್ಯೂ ಇದುವರೆಗೆ ನೋಂದಾಯಿಸಲು ಸಾಧ್ಯವಾಗದೇ ಇದ್ದಲ್ಲಿ ಅಂಥವರಿಗೆ ಮಾನವೀಯ ಮತ್ತು ಸೌಲಭ್ಯಾತ್ಮಕ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಸಚಿವಾಲಯ ಹೇಳಿದೆ. ಮುಂದಿನ ಮೂರು ತಿಂಗಳವರೆಗೆ ಯಾವುದೇ ದಂಡ ಅಥವಾ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವುದಿಲ್ಲ ಎಂಬ ಭರವಸೆ ನೀಡಿದೆ. ಈ ಮೂಲಕ ಸಕಾರಣಗಳಿಂದಾಗಿ ನೋಂದಣಿಗೆ ಅಪ್ಲೋಡ್ ಮಾಡಲು ಸಾಧ್ಯವಾಗದವರಿಗೆ ನ್ಯಾಯಮಂಡಳಿಯ ಮೊರೆ ಹೋಗುವ ಅವಕಾಶ ನೀಡಲಾಗುತ್ತಿದೆ ಎಂದು ವಿವರಿಸಿದೆ.
ಕಾನೂನಿನ ಪ್ರಕಾರ, ಗಡುವಿನ ಒಳಗಾಗಿ ಸಲ್ಲಿಕೆ ಮಾಡಲು ಸಾಧ್ಯವಾಗದೇ ಇರುವುದಕ್ಕೆ ಕಾರಣ ತೃಪ್ತಿದಾಯಕ ಎಂದು ನ್ಯಾಯಾಧಿಕರಣಕ್ಕೆ ಅನಿಸದಲ್ಲಿ ಮಾತ್ರ ಮುಂದಿನ ಆರು ತಿಂಗಳವರೆಗೆ ವಿಸ್ತರಣೆಗೆ ಅವಕಾಶವಿದೆ.
ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಹೇಳಿಕೆಯನ್ನು ಕೂಡಾ ಸಚಿವಾಲಯ ಬಿಡುಗಡೆ ಮಾಡಿದೆ. "ಕಾಯ್ದೆಯಡಿ ನೀಡಿರುವ ಆರು ತಿಂಗಳ ಕಡ್ಡಾಯ ಗಡುವು ಮುಕ್ತಾಯವಾಗಿದೆ. ಕಾನೂನಿನ ನಿಬಂಧನೆಗಳ ಅನುಸಾರ ಮತ್ತು ಸುಪ್ರೀಂಕೋರ್ಟ್ನ ಸ್ಪಷ್ಟ ನಿರ್ದೇಶನದ ಕಾರಣದಿಂದ ಇದನ್ನು ವಿಸ್ತರಿಸಲಾಗದು" ಎಂದು ರಿಜಿಜು ಹೇಳಿದ್ದಾರೆ.