×
Ad

ವಾರ್ನರ್, ಪಂತ್ ಅರ್ಧಶತಕ | ಚಾಂಪಿಯನ್ ಚೆನ್ನೈ ವಿರುದ್ಧ ಡೆಲ್ಲಿ ಜಯಭೇರಿ

Update: 2024-03-31 23:38 IST

Photo: X \ @IPL 

ವಿಶಾಖಪಟ್ಟಣ : ಹಿರಿಯ ಆರಂಭಿಕ ಬ್ಯಾಟರ್ ಡೇವಿಡ್ ವಾರ್ನರ್(52 ರನ್, 35 ಎಸೆತ) ಹಾಗೂ ನಾಯಕ ರಿಷಭ್ ಪಂತ್(51 ರನ್, 32 ಎಸೆತ)ಅರ್ಧಶತಕ, ಮುಕೇಶ್ ಕುಮಾರ್(3-21) ನೇತೃತ್ವದ ಬೌಲರ್ಗಳ ಮಹತ್ವದ ಕೊಡುಗೆಯ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡ ರವಿವಾರ ನಡೆದ ಐಪಿಎಲ್ ನ 13ನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 20 ರನ್ ಅಂತರದಿಂದ ಮಣಿಸಿದೆ.

ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಆಯ್ದುಕೊಂಡ ಡೆಲ್ಲಿ ತಂಡ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ಗಳ ನಷ್ಟಕ್ಕೆ 191 ರನ್ ಗಳಿಸಿದೆ. ಇದಕ್ಕೆ ಉತ್ತರವಾಗಿ ಚೆನ್ನೈ ತಂಡ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 171 ರನ್ ಗಳಿಸಿ ಪ್ರಸಕ್ತ ಟೂರ್ನಿಯಲ್ಲಿ ಮೊದಲ ಸೋಲು ಕಂಡಿದೆ. ಡೆಲ್ಲಿ ಈಗಿನ ಟೂರ್ನಿಯಲ್ಲಿ ತಾನಾಡಿದ 3ನೇ ಪಂದ್ಯದಲ್ಲಿ ಮೊದಲ ಜಯ ದಾಖಲಿಸಿದೆ.

ಚೆನ್ನೈ ಆರಂಭಿಕ ಆಟಗಾರರಾದ ಋತುರಾಜ್ ಗಾಯಕ್ವಾಡ್(1 ರನ್)ಹಾಗೂ ರಚಿನ್ ರವೀಂದ್ರ(2)ವಿಕೆಟನ್ನು ಬೇಗನೆ ಕಬಳಿಸಿದ ಖಲೀಲ್ ಅಹ್ಮದ್(2-21) ಡೆಲ್ಲಿಗೆ ಆರಂಭಿಕ ಮೇಲುಗೈ ಒದಗಿಸಿದರು. ಅಜಿಂಕ್ಯ ರಹಾನೆ(46 ರನ್, 30 ಎಸೆತ, 5 ಬೌಂಡರಿ, 2 ಸಿಕ್ಸರ್) ಹಾಗೂ ಡ್ಯಾರಿಲ್ ಮಿಚೆಲ್(34 ರನ್, 26 ಎಸೆತ, 1 ಬೌಂಡರಿ, 2 ಸಿಕ್ಸರ್)3ನೇ ವಿಕೆಟ್ಗೆ 45 ಎಸೆತಗಳಲ್ಲಿ 68 ರನ್ ಜೊತೆಯಾಟ ನಡೆಸಿ ತಂಡವನ್ನು ಆಧರಿಸಿದರು. ಆದರೆ ಈ ಇಬ್ಬರು ಔಟಾದ ನಂತರ ಚೆನ್ನೈ ಮತ್ತೆ ಕುಸಿತ ಕಂಡಿತು. ಮಾಜಿ ನಾಯಕ ಎಂ.ಎಸ್. ಧೋನಿ(ಔಟಾಗದೆ 37, 16 ಎಸೆತ) ಹಾಗೂ ರವೀಂದ್ರ ಜಡೇಜ(ಔಟಾಗದೆ 21, 17 ಎಸೆತ) 7ನೇ ವಿಕೆಟ್ಗೆ 51 ರನ್ ಜೊತೆಯಾಟ ನಡೆಸಿ ತಂಡದ ಸೋಲಿನ ಅಂತರ ಕಡಿಮೆಗೊಳಿಸಿದರು.

ಇದಕ್ಕೂ ಮೊದಲು ಇನಿಂಗ್ಸ್ ಆರಂಭಿಸಿದ ವಾರ್ನರ್ ಹಾಗೂ ಪೃಥ್ವಿ ಶಾ(43 ರನ್, 27 ಎಸೆತ) 9.3 ಓವರ್ಗಳಲ್ಲಿ 93 ರನ್ ಸೇರಿಸಿ ಡೆಲ್ಲಿಗೆ ಉತ್ತಮ ಆರಂಭ ಒದಗಿಸಿದರು. ಮುಸ್ತಫಿಝುರ್ರಹ್ಮಾನ್ ಈ ಜೋಡಿಯನ್ನು ಬೇರ್ಪಡಿಸಿದರು. ಅರ್ಧಶತಕ ಗಳಿಸಿದ ವಾರ್ನರ್(52 ರನ್, 35 ಎಸೆತ, 5 ಬೌಂಡರಿ, 3 ಸಿಕ್ಸರ್)10ನೇ ಓವರ್ನಲ್ಲಿ ವಿಕೆಟ್ ಕೈಚೆಲ್ಲಿದರು. ಸ್ವಲ್ಪ ಹೊತ್ತಿನಲ್ಲಿ ಶಾ ಅವರು ರವೀಂದ್ರ ಜಡೇಜಗೆ(1-43)ವಿಕೆಟ್ ಒಪ್ಪಿಸಿದರು.

ಮಿಚೆಲ್ ಮಾರ್ಷ್(18 ರನ್)ಹಾಗೂ ಟ್ರಿಸ್ಟಾನ್ ಸ್ಟಬ್ಸ್(0)ಬೆನ್ನುಬೆನ್ನಿಗೆ ಔಟಾದರು. ಆಗ ಜೊತೆಯಾದ ನಾಯಕ ಪಂತ್ ಹಾಗೂ ಅಕ್ಷರ್ ಪಟೇಲ್(ಔಟಾಗದೆ 7)ಐದನೇ ವಿಕೆಟ್ಗೆ 44 ರನ್ ಸೇರಿಸಿ ತಂಡ ಸ್ಪರ್ಧಾತ್ಮಕ ಮೊತ್ತ ಗಳಿಸಲು ನೆರವಾದರು.

ಪಂತ್ ಅವರು ಚೆನ್ನೈನ ಅತ್ಯಂತ ಯಶಸ್ವಿ ಬೌಲರ್ ಮಥೀಶ ಪಥಿರನಗೆ (3-31)ವಿಕೆಟ್ ಒಪ್ಪಿಸುವ ಮೊದಲು ಪ್ರಸಕ್ತ ಐಪಿಎಲ್ ನಲ್ಲಿ ಮೊದಲ ಅರ್ಧಶತಕ(51 ರನ್, 32 ಎಸೆತ, 4 ಬೌಂಡರಿ, 3 ಸಿಕ್ಸರ್)ಗಳಿಸಿದರು. ಗಾಯದ ಸಮಸ್ಯೆಯ ಕಾರಣದಿಂದಾಗಿ ಕುಲದೀಪ್ ಯಾದವ್ ಡೆಲ್ಲಿ ತಂಡದಲ್ಲಿ ಆಡುವ ಅವಕಾಶದಿಂದ ವಂಚಿತರಾದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News