×
Ad

ಕೇರಳ | ವಯನಾಡ್ ಸುರಂಗ ರಸ್ತೆ ಯೋಜನೆಗೆ ಅನುಮತಿ: ನ್ಯಾಯಾಲಯದ ಮೆಟ್ಟಿಲೇರಲು ಮುಂದಾದ ಪರಿಸರವಾದಿಗಳು

Update: 2025-05-29 22:32 IST

ಸಾಂದರ್ಭಿಕ ಚಿತ್ರ  

 

ತಿರುವನಂತಪುರಂ: ಕೋಯಿಕ್ಕೋಡ್-ವಯನಾಡ್ ಅವಳಿ ಸುರಂಗ ಮಾರ್ಗ ಯೋಜನೆಗೆ ನೀಡಲಾಗಿರುವ ಅನುಮತಿಯನ್ನು ಪ್ರಶ್ನಿಸಿ, ವಯನಾಡ್ ಪ್ರಕೃತಿ ಸಂರಕ್ಷಣ ಸಮಿತ್ ಎಂಬ ಪರಿಸರ ರಕ್ಷಣೆ ಸಂಘಟನೆಯು ಹೈಕೋರ್ಟ್ ಮೆಟ್ಟಿಲೇರಲು ಸಜ್ಜಾಗಿದೆ.

ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ತಜ್ಞರ ಮೌಲ್ಯಮಾಪನ ಸಮಿತಿಯಿಂದ ಕೇರಳ ಸರಕಾರವು ಮಹತ್ವದ ಸಂಗತಿಗಳನ್ನು ಮರೆಮಾಚಿದೆ ಎಂದು ಈ ಸಂಘಟನೆಯ ಪರಿಸರವಾದಿಗಳು ಆರೋಪಿಸಿದ್ದಾರೆ.

ಮೇ 14 ಮತ್ತು 15ರಂದು ನಡೆದಿದ್ದ ತಜ್ಞರ ಮೌಲ್ಯಮಾಪನ ಸಮಿತಿ ಸಭೆಯು, ಬಹುತೇಕ ಪ್ರಾಕೃತಿಕ ಕಳವಳಗಳನ್ನು ಎದುರಿಸುವುದಕ್ಕೆ ಸಂಬಂಧಿಸಿದ 60ಕ್ಕೂ ಹೆಚ್ಚು ಷರತ್ತುಗಳನ್ನು ಪಟ್ಟಿ ಮಾಡುವ ಮೂಲಕ, ಕೋಯಿಕ್ಕೋಡ್-ವಯನಾಡ್ ಅವಳಿ ಸುರಂಗ ಮಾರ್ಗಕ್ಕೆ ಅನುಮತಿ ನೀಡುವಂತೆ ಶಿಫಾರಸು ಮಾಡಿತ್ತು.

ಈ ಕುರಿತು ಪ್ರತಿಕ್ರಿಯಿಸಿರುವ ವಯನಾಡ್ ಪ್ರಕೃತಿ ಸಂರಕ್ಷಣ ಸಮಿತ್ ನ ಅಧ್ಯಕ್ಷ ಎನ್.ಬಾದುಶಾ, “ಪರಿಸರವಾದಿಗಳು ವ್ಯಕ್ತಪಡಿಸಿದ್ದ ಆತಂಕಗಳನ್ನು ತಜ್ಞರ ಸಮಿತಿಯು ದೃಢಪಡಿಸಿದ್ದು, ಹೀಗಾಗಿಯೇ ಷರತ್ತುಗಳನ್ನು ವಿಧಿಸಲಾಗಿದೆ” ಎಂದು deccanherald.comಗೆ ಹೇಳಿದ್ದಾರೆ.

ವಯನಾಡ್ ಪ್ರಾಂತ್ಯದಲ್ಲಿ ಬಾನಸೂರ ಚಿಲಪ್ಪನ್ ನಂತಹ ಅಳಿವಿನಂಚಿನಲ್ಲಿರುವ ಪಕ್ಷಿ ಪ್ರಭೇದಗಳ ಉಪಸ್ಥಿತಿ, ಆನೆಗಳ ಚಲನವಲನಕ್ಕೆ ಅಡ್ಡಿ ಹಾಗೂ ಭೂಕುಸಿತದ ಅಪಾಯವಿರುವ ದುರ್ಬಲ ಭೂಪ್ರದೇಶದಲ್ಲಿ ಪ್ರಸ್ತಾವಿತ ಸುರಂಗ ಮಾರ್ಗ ಹಾದು ಹೋಗಲಿರುವುದು ಸೇರಿದಂತೆ, ಹಲವಾರು ಮಹತ್ವದ ಸಂಗತಿಗಳನ್ನು ಮರೆಮಾಚುವ ಮೂಲಕ ಕೇರಳ ಸರಕಾರವು ಈ ಯೋಜನೆಗೆ ಪ್ರಾಥಮಿಕ ಹಂತದ ಆರಂಭಿಕ ಅನುಮತಿ ಪಡೆದಿದೆ ಎಂದು ಅವರು ಆರೋಪಿಸಿದ್ದಾರೆ.

2019 ಹಾಗೂ 2024ರಲ್ಲಿ ನಡೆದಿದ್ದ ಪ್ರಮುಖ ಭೂಕುಸಿತಗಳು ಈ ಯೋಜನಾ ಪ್ರದೇಶದ ಸಮೀಪವೇ ಸಂಭವಿಸಿದ್ದವು.

“ತಜ್ಞರ ಸಮಿತಿಯು ಪ್ರಾಕೃತಿಕ ಕಳವಳಗಳನ್ನು ರಕ್ಷಿಸುವಲ್ಲಿ ವಿಫಲಗೊಂಡಿರುವುದರಿಂದ, ನಾವು ನ್ಯಾಯಾಲಯದ ಮೊರೆ ಹೋಗಲಿದ್ದೇವೆ” ಎಂದು ಅವರು ಹೇಳಿದ್ದಾರೆ.

ವಯನಾಡ್-ಕೋಯಿಕ್ಕೋಡ್ ಘಟ್ಟ ಪ್ರದೇಶದ ರಸ್ತೆಯಲ್ಲಿ ಸಂಭವಿಸುತ್ತಿರುವ ಸಂಚಾರ ದಟ್ಟಣೆಗೆ ಈ ಸುರಂಗ ಮಾರ್ಗ ಯೋಜನೆ ಪರಿಹಾರ ಎಂದು ರಾಜ್ಯ ಸರಕಾರ ಬಿಂಬಿಸುತ್ತಿದ್ದರೆ, ಈ ಸುರಂಗ ಮಾರ್ಗ ಯೋಜನೆಗೆ ವೆಚ್ಚವಾಗಲಿರುವ ಒಟ್ಟು ಮೊತ್ತದ ಶೇ. 10ರಷ್ಟು ಮೊತ್ತದಲ್ಲಿ ಹಾಲಿ ಅಸ್ತಿತ್ವದಲ್ಲಿರುವ ವಯನಾಡ್ ಘಟ್ಟ ಪ್ರದೇಶದ ಐದು ರಸ್ತೆಗಳನ್ನು ವಿಸ್ತರಿಸಬಹುದಾಗಿದೆ ಎಂದು ವಯನಾಡ್ ಪ್ರಕೃತಿ ಸಂರಕ್ಷಣ ಸಮಿತ್ ವಾದಿಸುತ್ತಿದೆ.

ಕೇರಳ ಮತ್ತು ಕರ್ನಾಟಕದ ನಡುವಿನ ಪ್ರಮುಖ ಮಾರ್ಗವಾದ ವಯನಾಡ್ ಮತ್ತು ಕೋಯಿಕ್ಕೋಡ್ ನಡುವಿನ ಜನಪ್ರಿಯ ತಮಸ್ಸೇರಿ ಘಟ್ಟ ರಸ್ತೆಗೆ ಪರ್ಯಾಯವಾಗಿ, ಅಂದಾಜು ಒಟ್ಟು 2,043.74 ಕೋಟಿ ರೂ. ಮೊತ್ತದ 8.75 ಕಿಮೀ ದೂರದ ಈ ಸುರಂಗ ಯೋಜನೆಗೆ ಜನ್ಮ ನೀಡಲಾಗಿದೆ.

ಈ ಪ್ರಸ್ತಾವಿತ ಸುರಂಗ ರಸ್ತೆಯು ವಯನಾಡ್ ನ ಮೇಪ್ಪಡಿಯಿಂದ ಕೋಯಿಕ್ಕೋಡ್ ನ ಅನಕ್ಕಂಪೋಯಿಲ್ ವರೆಗೆ ಪ್ರಾರಂಭವಾಗಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News