×
Ad

ವಯನಾಡ್ ಉಪ ಚುನಾವಣೆ | ನಾಮಪತ್ರ ಸಲ್ಲಿಸಿದ ಎಲ್ಡಿಎಫ್, ಬಿಜೆಪಿ ಅಭ್ಯರ್ಥಿಗಳು

Update: 2024-10-24 21:26 IST

 ಸತ್ಯನ್ ಮೊಕೇರಿ(X \ @CPI_National),  ಬಿಜೆಪಿ ಅಭ್ಯರ್ಥಿ ನವ್ಯಾ ಹರಿದಾಸ್ (X\ @AshwiniML2)

ವಯನಾಡ್ : ವಯನಾಡ್ ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ ಎಲ್ಡಿಎಫ್ ಅಭ್ಯರ್ಥಿ ಸತ್ಯನ್ ಮೊಕೇರಿ ಹಾಗೂ ಬಿಜೆಪಿ ಅಭ್ಯರ್ಥಿ ನವ್ಯಾ ಹರಿದಾಸ್ ಇಂದು ನಾಮಪತ್ರ ಸಲ್ಲಿಸಿದರು.

ಮೂರು ಪ್ರಮುಖ ಪಕ್ಷಗಳಾದ ಕಾಂಗ್ರೆಸ್, ಎಲ್ಡಿಎಫ್ ಹಾಗೂ ಬಿಜೆಪಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವುದರೊಂದಿಗೆ ವಯನಾಡ್ ಉಪ ಚುನಾವಣಾ ಕಣ ರಂಗೇರಿದೆ. ನಿನ್ನೆಯಷ್ಟೆ ಯುಡಿಎಫ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ, ತಮ್ಮ ಚೊಚ್ಚಲ ಚುನಾವಣಾ ರಾಜಕಾರಣಕ್ಕೆ ಪದಾರ್ಪಣೆ ಮಾಡಿದ್ದರು.

ಸಾವಿರಾರು ಎಲ್ಡಿಎಫ್ ಕಾರ್ಯಕರ್ತರು ಹಾಗೂ ಬೆಂಬಲಿಗರೊಂದಿಗೆ ಜಿಲ್ಲಾಧಿಕಾರಿ ಕಚೇರಿವರೆಗೆ ರೋಡ್ ಶೋ ನಡೆಸಿದ ಎಲ್ಡಿಎಫ್ ಅಭ್ಯರ್ಥಿ ಸತ್ಯನ್ ಮೊಕೇರಿ, ನಂತರ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಿಪಿಐ ರಾಜ್ಯ ಕಾರ್ಯದರ್ಶಿ ಬಿನೋಯ್ ವಿಶ್ವಂ ಹಾಗೂ ಪಕ್ಷದ ಹಿರಿಯ ನಾಯಕಿ ಆ್ಯನಿ ರಾಜಾ ಸೇರಿದಂತೆ ಅನೇಕ ಹಿರಿಯ ನಾಯಕರು ಉಪಸ್ಥಿತರಿದ್ದರು. ಕಳೆದ ಎಪ್ರಿಲ್ ತಿಂಗಳಲ್ಲಿ ನಡೆದಿದ್ದ ಲೋಕಸಭಾ ಚುನಾವಣೆಯಲ್ಲಿ ವಯನಾಡ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಎಡರಂಗದ ಅಭ್ಯರ್ಥಿಯಾಗಿ ಆ್ಯನಿ ರಾಜಾ ಕಣಕ್ಕಿಳಿದಿದ್ದರು.

ರಾಜ್ಯ ಬಿಜೆಪಿಯ ಮಾಜಿ ಅಧ್ಯಕ್ಷ ಹಾಗೂ ಮಿಝೋರಾಂನ ಮಾಜಿ ರಾಜ್ಯಪಾಲ ಕುಮ್ಮನಂ ರಾಜಶೇಖರನ್ ಸಮ್ಮುಖದಲ್ಲಿ ಬಿಜೆಪಿ ಅಭ್ಯರ್ಥಿ ನವ್ಯಾ ಕೂಡಾ ಇಂದು ಬೆಳಗ್ಗೆ ನಾಮಪತ್ರ ಸಲ್ಲಿಸಿದರು. ಸಾಫ್ಟ್ ವೇರ್ ಇಂಜಿನಿಯರ್ ಆಗಿರುವ ನವ್ಯಾ, ಸಿಂಗಾಪೂರ್ ಹಾಗೂ ನೆದರ್ ಲ್ಯಾಂಡ್ಸ್ ಗಳಲ್ಲಿ ಕೆಲಸ ಮಾಡಿರುವ ವಿದೇಶಿ ಅನುಭವ ಹೊಂದಿದ್ದಾರೆ. ಅವರು ಕಳೆದ ಒಂದು ದಶಕದಿಂದ ಕೋಯಿಕ್ಕೋಡ್ ಮಹಾನಗರ ಪಾಲಿಕೆಯ ಕೌನ್ಸಿಲರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ನವೆಂಬರ್ 13ರಂದು ವಯನಾಡ್ ಲೋಕಸಭಾ ಕ್ಷೇತ್ರದಲ್ಲಿ ಮತದಾನ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News