ವಯನಾಡ್ ಭೂಕುಸಿತಕ್ಕೆ ಒಂದು ವರ್ಷ; ಮಡಿದವರಿಗೆ ನಮನ
Photo Credit: PTI
ವಯನಾಡ್, ಜು. 30: ಕಳೆದ ವರ್ಷ 250ಕ್ಕೂ ಅಧಿಕ ಜನರ ಸಾವಿಗೆ ಕಾರಣವಾದ ಭಾರೀ ಭೂಕುಸಿತ ಸಂಭವಿಸಿದ ಮೊದಲ ವರ್ಷವಾದ ಬುಧವಾರ ಮುಂಡಕ್ಕೈ-ಚೂರಲ್ಮಲ ಪ್ರದೇಶದಲ್ಲಿ ನೂರಾರು ಜನರು ಸೇರಿ ದುರಂತದಲ್ಲಿ ಮಡಿದವರಿಗೆ ನಮನ ಸಲ್ಲಿಸಿದರು.
2024 ಜುಲೈ 29 ಹಾಗೂ 30ರ ನಡುವಿನ ರಾತ್ರಿ ಸುರಿದ ಭಾರೀ ಮಳೆಗೆ ಸಂಭವಿಸಿದ ಭೂಕುಸಿತದಿಂದ ಜೀವಂತ ಸಮಾಧಿಯಾದ ತಮ್ಮ ಪ್ರೀತಿ ಪಾತ್ರರನ್ನು ನೆನಪಿಸಿಕೊಂಡು ಕೆಲವರು ಅತ್ತರು, ಇನ್ನು ಕೆಲವರು ಮೌನವಾದರು.
ಮೆಪ್ಪಾಡಿ ಪಂಚಾಯತ್ ನಲ್ಲಿರುವ ದುರಂತದಲ್ಲಿ ಮೃತಪಟ್ಟ 264 ಮಂದಿಯನ್ನು ದಫನ ಮಾಡಲಾದ ಸಮಾಧಿ ಸ್ಥಳವಾದ ‘‘ಹೃದಯ ಭೂಮಿ’’ಯಲ್ಲಿ ನೂರಾರು ಜನರು ಸೇರಿದ್ದರು. ಈ ದುರಂತ ಅಸಂಖ್ಯಾತ ಕುಟುಂಬಗಳ ಕನಸುಗಳನ್ನು ಛಿದ್ರಗೊಳಿಸಿದ ಹಿನ್ನೆಲೆಯಲ್ಲಿ ಪಂಚಾಯತ್ ಈ ಸ್ಥಳಕ್ಕೆ ‘ಹೃದಯ ಭೂಮಿ’ ಎಂದು ಹೆಸರಿಟ್ಟಿದೆ.
‘‘ಇದು ನಾವು ಎಂದೂ ನೆನಪಿಸಿಕೊಳ್ಳಲು ಬಯಸದ ದಿನ. ಆದರೆ, ನೆನಪು ಇನ್ನೂ ಉಳಿದುಕೊಂಡಿದೆ’’ ಎಂದು ದುರಂತದಲ್ಲಿ ತನ್ನ ಕುಟುಂಬದ 26 ಮಂದಿಯನ್ನು ಕಳೆದುಕೊಂಡ ಮನೋಜ್ ತಿಳಿಸಿದ್ದಾರೆ. ಭೂಕುಸಿತ ಸಂಭವಿಸಿದ ಸಂದರ್ಭ ಅವರು ತನ್ನ ಊರಿನಿಂದ ದೂರವಿದ್ದರು.
‘‘ನಾವು ಒಬ್ಬರನ್ನೊಬ್ಬರನ್ನು ನೋಡಲು ಕೂಡ ಸಾಧ್ಯವಾಗುತ್ತಿಲ್ಲ. ನಾವು ನಮ್ಮ ಕಣ್ಣೀರನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದ್ದೇವೆ’’ ಎಂದು ಅವರು ಹೇಳಿದ್ದಾರೆ.