ವಯನಾಡ್ ದುರಂತ ಸಂತ್ರಸ್ತರಿಗೆ ನೆರವು ನೀಡದ ಕೇಂದ್ರ ಸರ್ಕಾರದ ವಿರುದ್ಧ ಕೇರಳ ಹೈಕೋರ್ಟ್ ತೀವ್ರ ಆಕ್ರೋಶ
“ನಿಮ್ಮ ದಾನ ನಮಗೆ ಅಗತ್ಯವಿಲ್ಲ”: ನ್ಯಾಯಾಲಯದ ತೀಕ್ಷ್ಣ ಪ್ರತಿಕ್ರಿಯೆ
PC | thenewsminute
ಕೊಚ್ಚಿ : ವಯನಾಡ್ ಭೂಕುಸಿತ ಸಂತ್ರಸ್ತರಿಗೆ ಸಾಲ ಮನ್ನಾ ಮಾಡಲು ನಿರಾಕರಿಸಿದ ಕೇಂದ್ರ ಸರ್ಕಾರದ ನಿಲುವನ್ನು ಕೇರಳ ಹೈಕೋರ್ಟ್ ಬುಧವಾರ ತೀವ್ರವಾಗಿ ಖಂಡಿಸಿದೆ.
“ಕೇಂದ್ರ ಸರ್ಕಾರ ಕೇರಳದ ಜನರನ್ನು ನಿರಾಶೆಗೊಳಿಸಿದೆ” ಎಂದು ಕಟುವಾಗಿ ಟೀಕಿಸಿದ ಪೀಠ, “ನಮಗೆ ಕೇಂದ್ರ ಸರ್ಕಾರದ ದಾನ ಅಗತ್ಯವಿಲ್ಲ” ಎಂದು ಸ್ಪಷ್ಟ ಸಂದೇಶ ನೀಡಿದೆ.
ಜುಲೈ 2024ರಲ್ಲಿ ವಯನಾಡ್ ಜಿಲ್ಲೆಯ ಮೆಪ್ಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಂಭವಿಸಿದ ವಿನಾಶಕಾರಿ ಭೂಕುಸಿತದಲ್ಲಿ ನೂರಾರು ಜನರು ಸಾವನ್ನಪ್ಪಿದ್ದು, ಅನೇಕ ಕುಟುಂಬಗಳು ಸ್ಥಳಾಂತರಗೊಂಡಿದ್ದವು. ಈ ಕುರಿತು ಸ್ವಯಂಪ್ರೇರಿತ ವಿಚಾರಣೆಯ ವೇಳೆ ನ್ಯಾಯಮೂರ್ತಿ ಎ.ಕೆ. ಜಯಶಂಕರನ್ ನಂಬಿಯಾರ್ ಮತ್ತು ನ್ಯಾಯಮೂರ್ತಿ ಜೋಬಿನ್ ಸೆಬಾಸ್ಟಿಯನ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಕೇಂದ್ರದ ನಿಲುವಿನ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.
ಕೇಂದ್ರ ಸರ್ಕಾರವು ತನ್ನ ಪ್ರತಿಕ್ರಿಯೆಯಲ್ಲಿ ನೈಸರ್ಗಿಕ ವಿಕೋಪ ಪೀಡಿತರ ಸಾಲ ಮನ್ನಾಗೆ ಯಾವುದೇ ಕಾನೂನು ನಿಬಂಧನೆಗಳಿಲ್ಲವೆಂದು ತಿಳಿಸಿತು. “ಆರ್‌ಬಿಐ ಮಾರ್ಗಸೂಚಿಗಳ ಪ್ರಕಾರ ಬ್ಯಾಂಕುಗಳ ವಾಣಿಜ್ಯ ವ್ಯವಹಾರಗಳಲ್ಲಿ ಸಚಿವಾಲಯದ ಹಸ್ತಕ್ಷೇಪ ಸೀಮಿತವಾಗಿದೆ,” ಎಂದು ಕೇಂದ್ರದ ವರದಿ ಉಲ್ಲೇಖಿಸಿತು.
ಈ ಕುರಿತು ಪೀಠ ತೀವ್ರವಾಗಿ ಪ್ರತಿಕ್ರಿಯಿಸಿ, “ಇದು ಸರ್ಕಾರ ಕ್ರಮ ಕೈಗೊಳ್ಳಲು ಇಚ್ಛಿಸದಿರುವುದನ್ನು ಸ್ಪಷ್ಟಪಡಿಸುತ್ತದೆ. ಧೈರ್ಯವಿದ್ದರೆ ಅದನ್ನು ನೇರವಾಗಿ ಹೇಳಿ; ಅಧಿಕಾರದ ಕೊರತೆಯ ನೆಪದ ಹಿಂದೆ ಅಡಗಿಕೊಳ್ಳಬೇಡಿ. ಸಂವಿಧಾನ ಓದಿದ ಯಾರೇ ಆದರೂ ಇದನ್ನು ಅರ್ಥಮಾಡಿಕೊಳ್ಳಬಲ್ಲರು. ನೀವು ಯಾರನ್ನು ಮೂರ್ಖರನ್ನಾಗಿ ಮಾಡಲು ಯತ್ನಿಸುತ್ತಿದ್ದೀರಿ?” ಎಂದು ಪ್ರಶ್ನಿಸಿತು.
ನ್ಯಾಯಾಲಯವು ಅಸ್ಸಾಂ, ಗುಜರಾತ್, ಹರಿಯಾಣ, ಮಧ್ಯಪ್ರದೇಶ ಮತ್ತು ರಾಜಸ್ಥಾನ ರಾಜ್ಯಗಳಿಗೆ ಕೇಂದ್ರ ನೀಡಿದ ನೆರವಿನ ವಿವರವನ್ನು ಉಲ್ಲೇಖಿಸಿ, “ಇದು ಹಣದ ಕೊರತೆಯ ವಿಷಯವಲ್ಲ” ಎಂದು ಸ್ಪಷ್ಟಪಡಿಸಿತು. “2024ರಲ್ಲಿ ಪ್ರವಾಹ ಮತ್ತು ಭೂಕುಸಿತದಿಂದ ಹಾನಿಗೊಳಗಾದ ಅಸ್ಸಾಂ ಮತ್ತು ಗುಜರಾತ್ ರಾಜ್ಯಗಳಿಗೆ 707.97 ಕೋಟಿ ರೂ. ಹೆಚ್ಚುವರಿ ನೆರವು ನೀಡಲಾಗಿದೆ. ಹರಿಯಾಣ, ಮಧ್ಯಪ್ರದೇಶ ಮತ್ತು ರಾಜಸ್ಥಾನಗಳಿಗೆ ಅಗ್ನಿಶಾಮಕ ಸೇವೆಗಳ ವಿಸ್ತರಣೆಗಾಗಿ 903.67 ಕೋಟಿ ರೂ. ಮಂಜೂರಾಗಿದೆ. ಆದರೆ ಕೇರಳಕ್ಕೆ ಯಾವುದೇ ನೆರವು ನೀಡದೆ ಕೇಂದ್ರವು ಜನರನ್ನು ನಿರ್ಲಕ್ಷಿಸಿದೆ,” ಎಂದು ಪೀಠ ವಿಷಾದ ವ್ಯಕ್ತಪಡಿಸಿತು.
“ಒಕ್ಕೂಟ ಶಕ್ತಿಹೀನವಲ್ಲ. ಆದರೆ ನೀವು ಅಧಿಕಾರವಿಲ್ಲ ಎಂಬ ನೆಪದ ಹಿಂದೆ ಅಡಗಿಕೊಳ್ಳುತ್ತಿದ್ದೀರಿ. ಇದು ಜನರಿಗೂ ತಿಳಿಯಬೇಕು,” ಎಂದು ನ್ಯಾಯಾಲಯ ಎಚ್ಚರಿಸಿತು.
ಈ ಕುರಿತು ಪೀಠವು ಕೇಂದ್ರ ಸರ್ಕಾರಕ್ಕೆ ನೇರ ನಿರ್ದೇಶನ ನೀಡುವುದಿಲ್ಲವೆಂದು ಸ್ಪಷ್ಟಪಡಿಸಿತು.
“ನಮ್ಮ ಸಂವಿಧಾನಿಕ ಅಧಿಕಾರಗಳ ಪ್ರತ್ಯೇಕತೆಯನ್ನು ಗೌರವಿಸಲು ಸೂಚಿಸುತ್ತದೆ. ಆದ್ದರಿಂದ ನಾವು ನಿರ್ದೇಶನ ನೀಡುವುದಿಲ್ಲ. ಸಾಕು ಸಾಕು... ನಮಗೆ ಒಕ್ಕೂಟದ ದಾನದ ಅಗತ್ಯವಿಲ್ಲ,” ಎಂದು ಕಟುವಾದ ಶಬ್ದಗಳಲ್ಲಿ ಪ್ರತಿಕ್ರಿಯಿಸಿತು.
ನ್ಯಾಯಾಲಯವು ಕೇಂದ್ರ ನಿಯಂತ್ರಣದಲ್ಲಿರುವ ಬ್ಯಾಂಕುಗಳ ಪಟ್ಟಿಯನ್ನು ಸಲ್ಲಿಸಲು ಸೂಚಿಸಿ, ತಾತ್ಕಾಲಿಕವಾಗಿ ಸಾಲ ವಸೂಲಾತಿ ಕ್ರಮಗಳನ್ನು ಸ್ಥಗಿತಗೊಳಿಸುವಂತೆ ಸೂಚನೆ ನೀಡಿದೆ.
“ವಯನಾಡ್ ಭೂಕುಸಿತದಿಂದ ಹಾನಿಗೊಳಗಾದವರ ಸಾಲ ಮನ್ನಾಗೆ ಸರ್ಕಾರ ನಿರಾಕರಿಸಿರುವುದು ಆಘಾತಕಾರಿ. ದೊಡ್ಡ ಕಂಪನಿಗಳ ಸಾಲಗಳನ್ನು ಸುಲಭವಾಗಿ ಮನ್ನಾ ಮಾಡುವ ಸರ್ಕಾರ, ತಮ್ಮ ತಪ್ಪಿಲ್ಲದೆ ನೋವು ಅನುಭವಿಸಿದ ಸಾಮಾನ್ಯ ಜನರ ಕಡೆ ಮಾನವೀಯತೆ ತೋರಿಲ್ಲ,” ಎಂದು ವಯನಾಡ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಟೀಕಿಸಿದರು.
ಹೈಕೋರ್ಟ್ ಕಳೆದ ಆಗಸ್ಟ್ ನಲ್ಲಿ ಕೇಂದ್ರ ಸರ್ಕಾರಕ್ಕೆ ಸೆಪ್ಟೆಂಬರ್ 10ರೊಳಗೆ ಸಾಲ ಮನ್ನಾ ಕುರಿತು ನಿರ್ಧಾರ ತಿಳಿಸಲು ಅಂತಿಮ ಅವಕಾಶ ನೀಡಿತ್ತು. ಆದರೆ ಯಾವುದೇ ಕ್ರಮ ಕೈಗೊಳ್ಳದ ಕೇಂದ್ರದ ನಿಲುವಿನ ವಿರುದ್ಧ ಈಗ ಪೀಠ ಗರಂ ಆಯಿತು.
ಕೇರಳ ಬ್ಯಾಂಕ್ ಈಗಾಗಲೇ ಭೂಕುಸಿತದಿಂದ ಹಾನಿಗೊಳಗಾದ ನಿವಾಸಿಗಳ ಸಾಲಗಳನ್ನು ಮನ್ನಾ ಮಾಡಿದೆ.
ಸೌಜನ್ಯ: thenewsminute.com