×
Ad

ಆಪರೇಷನ್ ಸಿಂಧೂರ್ ಕಾರ್ಯಾಚರಣೆ | ಅಮಾಯಕ ಜನರನ್ನು ಕೊಂದವರನ್ನು ಮಾತ್ರ ನಾವು ಹತ್ಯೆಗೈದಿದ್ದೇವೆ: ರಾಜನಾಥ್ ಸಿಂಗ್

Update: 2025-05-07 20:08 IST

ರಾಜನಾಥ್ ಸಿಂಗ್ | PC : PTI 

ಹೊಸದಿಲ್ಲಿ: “ನಮ್ಮ ಅಮಾಯಕ ಜನರನ್ನು ಕೊಂದವರನ್ನು ಮಾತ್ರ ನಾವು ಹತ್ಯೆಗೈದಿದ್ದೇವೆ” ಎಂದು ಬುಧವಾರ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದರು.

ಆರು ರಾಜ್ಯಗಳು ಹಾಗೂ ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿ ಗಡಿ ರಸ್ತೆಗಳ ಸಂಘಟನೆಯು ಕೈಗೆತ್ತಿಕೊಂಡಿದ್ದ 50 ಮೂಲಸೌಕರ್ಯ ಯೋಜನೆಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, “ಯೋಜನೆಯಂತೆ ‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆಯಡಿ ನಡೆಸಲಾದ ಕಾರ್ಯಾಚರಣೆಯಲ್ಲಿ ಭಯೋತ್ಪಾದಕ ಗುರಿಗಳನ್ನು ನಿಖರವಾಗಿ ನಾಶಗೊಳಿಸಲಾಗಿದೆ” ಎಂದು ತಿಳಿಸಿದರು.

ಬುಧವಾರ ಮುಂಜಾನೆ ಭಾರತೀಯ ಸೇನೆಯು ಪಾಕಿಸ್ತಾನ ಹಾಗೂ ಪಾಕಿಸ್ತಾನ ಆಕ್ರಮಿತ ಕಾಶ್ಮೀಂರದಲ್ಲಿನ ಭಯೋತ್ಪಾದಕ ನೆಲೆಗಳ ಮೇಲೆ ನಡೆಸಿದ ವಾಯು ದಾಳಿಯ ಬೆನ್ನಿಗೇ ಅವರು ಈ ಹೇಳಿಕೆ ನೀಡಿದ್ದಾರೆ.

“ಭಾರತವು ತನ್ನ ನೆಲದಲ್ಲಿ ನಡೆದ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳುವ ಹಕ್ಕನ್ನು ಈ ದಾಳಿಯ ಮೂಲಕ ಚಲಾಯಿಸಿದೆ. ನಮ್ಮ ಕಾರ್ಯಾಚರಣೆಯನ್ನು ತೀವ್ರ ಆಲೋಚನೆ ಹಾಗೂ ಯೋಜನಾಬದ್ಧವಾಗಿ ನಡೆಸಲಾಗಿದೆ” ಎಂದು ಹೇಳಿದ ಅವರು, ಎಪ್ರಿಲ್ 22ರಂದು 26 ಮಂದಿ ಪ್ರವಾಸಿಗರನ್ನು ಬಲಿ ಪಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸಶಸ್ತ್ರ ಪಡೆಗಳು ನಡೆಸಿದ ಪ್ರತಿ ದಾಳಿಯನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು.

“ಭಯೋತ್ಪಾದಕರ ಮನೋಬಲವನ್ನು ಕುಂದಿಸುವ ಗುರಿಯೊಂದಿಗೆ ಅವರ ಶಿಬಿರಗಳು ಹಾಗೂ ಇನ್ನಿತರ ನೆಲೆಗಳ ಮೇಲೆ ಮಾತ್ರ ಈ ಕಾರ್ಯಾಚರಣೆಯನ್ನು ನಡೆಸಲಾಗಿದೆ” ಎಂದೂ ಅವರು ಹೇಳಿದರು.

ಭಾರತೀಯ ಸೇನೆಯು ನಿಖರತೆ, ಜಾಗರೂಕತೆ ಹಾಗೂ ಸೂಕ್ಷ್ಮಜ್ಞತೆಯೊಂದಿಗೆ ಈ ಕಾರ್ಯಾಚರಣೆಯನ್ನು ನಡೆಸಿದೆ. ಈ ಕಾರ್ಯಾಚರಣೆಯಲ್ಲಿ ಯಾವುದೇ ನಾಗರಿಕರಿಗೆ ತೊಂದರೆಯಾಗದಂತಹ ಸೂಕ್ಷ್ಮಜ್ಞತೆಯನ್ನು ನಾವು ಪ್ರದರ್ಶಿಸಿದ್ದೇವೆ” ಎಂದು ಅವರು ತಿಳಿಸಿದರು.

“ಆಪರೇಷನ್ ಸಿಂಧೂರ್ ಕಾರ್ಯಾಚರಣೆಯಲ್ಲಿ ಭಯೋತ್ಪಾದಕರ ತರಬೇತಿ ಶಿಬಿರಗಳನ್ನು ನಾಶಗೊಳಿಸುವ ಮೂಲಕ, ಅವರಿಗೆ ನಮ್ಮ ಸೇನಾ ಪಡೆಗಳು ತಕ್ಕ ಪ್ರತ್ಯುತ್ತರ ನೀಡಿವೆ. ನಾನು ನಮ್ಮ ಸಶಸ್ತ್ರ ಪಡೆಗಳ ಕೆಚ್ಚಿಗೆ ವಂದಿಸುತ್ತೇನೆ” ಎಂದು ಕೇಂದ್ರ ರಕ್ಷಣಾ ಸಚಿವರೂ ಆದ ರಾಜನಾಥ್ ಸಿಂಗ್ ಪ್ರಶಂಸಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News