“ನಾವು ಸಾವನ್ನು ಅತಿ ಸಮೀಪದಲ್ಲಿ ನೋಡಿದೆವು”: ಸ್ಫೋಟದ ಭೀಕರತೆ ಹಂಚಿಕೊಂಡ ಬದುಕುಳಿದವರು
Photo: PTI
ಹೊಸದಿಲ್ಲಿ, ನ. 11: ದಿಲ್ಲಿಯ ಕೆಂಪು ಕೋಟೆಯ ಸಮೀಪ ಸೋಮವಾರ ಸಂಭವಿಸಿದ ಸ್ಫೋಟದಲ್ಲಿ ಬದುಕುಳಿದವರು ಘಟನೆಯ ಭೀಕರತೆಯನ್ನು ಹಂಚಿಕೊಂಡಿದ್ದಾರೆ.
‘‘ಜನರು ರಸ್ತೆಯಲ್ಲಿ ಬಿದ್ದುಕೊಂಡಿರುವುದನ್ನು ನಾವು ನೋಡಿದೆವು. ಕೆಲವರಿಗೆ ರಕ್ತಸ್ರಾವವಾಗುತ್ತಿತ್ತು. ತೀವ್ರ ಗಾಯಗೊಂಡ ಇನ್ನು ಕೆಲವರಿಗೆ ಕದಲಲು ಸಾಧ್ಯವಾಗುತ್ತಿರಲಿಲ್ಲ. ಎಲ್ಲೆಲ್ಲೂ ರಕ್ತ. ನಾವು ಸಾವನ್ನು ಹತ್ತಿರದಿಂದ ನೋಡಿದೆವು’’ ಎಂದು ಸ್ಫೋಟದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ದಾಖಲಾಗಿರುವ ರಸ್ತೆ ಬದಿ ತಿಂಡಿ ಅಂಗಡಿ ಮಾಲಕ, ಬಿಹಾರ ಮೂಲದ ರಾಮ್ ಪ್ರತಾಪ್ ತಿಳಿಸಿದ್ದಾರೆ.
‘‘ಅದು ಸಾಮಾನ್ಯ ಸಂಜೆಯಂತೆ ಕಾಣುತ್ತಿತ್ತು. ಕೆಲವು ಗ್ರಾಹಕರು ಕಾಯುತ್ತಿದ್ದರು. ಇದ್ದಕ್ಕಿದ್ದಂತೆ ದೊಡ್ಡ ಶಬ್ದ ಕೇಳಿ ಬಂತು. ಆ ಶಬ್ದ ತೀವ್ರವಾಗಿತ್ತು. ಅನಂತರ ನನಗೆ ಕೆಲವು ಸೆಕೆಂಡುಗಳ ಕಾಲ ಯಾವುದನ್ನು ಕೇಳಲು ಸಾಧ್ಯವಾಗಲಿಲ್ಲ. ಗಾಜುಗಳು ನಮ್ಮ ಮೇಲೆ ಬಿದ್ದುವು. ದಟ್ಟ ಹೊಗೆ ಎಲ್ಲವನ್ನೂ ಆವರಿಸಿಕೊಂಡಿತು’’ ಎಂದು ಅವರು ನೆನಪಿಸಿಕೊಂಡಿದ್ದಾರೆ.
‘‘ಜನರು ನೆಲದ ಮೇಲೆ ಬಿದ್ದಿದ್ದರು. ಎಲ್ಲೆಲ್ಲಿ ನೋಡಿದರೂ ರಕ್ತ. ನನ್ನ ಕೈ ತೀವ್ರವಾಗಿ ಘಾಸಿಗೊಂಡಿತ್ತು. ಆದರೆ, ಅದು ನನಗೆ ಆಗ ಗೊತ್ತಾಗಲಿಲ್ಲ’’ ಅವರು ಹೇಳಿದ್ದಾರೆ.
ಆಸ್ಪತ್ರೆಯ ಹೊರಗೆ ರಾಮ್ ಪ್ರತಾಪ್ ಅವರ ಸಂಬಂಧಿ ಕೂಡ ಸ್ಫೋಟದ ಭೀಕರತೆಯನ್ನು ವಿವರಿಸಿದ್ದಾರೆ. ‘‘ಸ್ಫೋಟದಿಂದ ಬೆಂಕಿ ಹಾಗೂ ದಟ್ಟ ಹೊಗೆ ಕಂಡು ಬಂತು. ನನಗೆ ನನ್ನ ಸಹೋದರನನ್ನೇ ಪತ್ತೆ ಹಚ್ಚಲು ಸಾಧ್ಯವಾಗಲಿಲ್ಲ. ಜನರು ಹೆಸರನ್ನು ಕೂಗಿ ಕರೆಯುತ್ತಿದ್ದರು, ಅಳುತ್ತಿದ್ದರು. ತಮ್ಮ ಕುಟುಂಬದ ಸದಸ್ಯರಿಗಾಗಿ ಹುಡುಕಾಡುತ್ತಿದ್ದರು. ಕೆಲವು ನಿಮಿಷಗಳಲ್ಲಿ ಯಾರು ಬದುಕಿದ್ದಾರೆ ಎಂದು ಯಾರೊಬ್ಬರಿಗೂ ತಿಳಿಯಲಿಲ್ಲ’’ ಎಂದು ಅವರು ಹೇಳಿದ್ದಾರೆ.
ಸ್ಫೋಟ ಸಂಭಸುವ ಕೆಲವೇ ನಿಮಿಷ ಮುನ್ನ ಅದೇ ಸ್ಥಳದ ಸಮೀಪ ತನ್ನ ಟ್ಯಾಂಕರ್ ನಿಲ್ಲಿಸಿದ್ದ ವಿಜೇಂದರ್ ಯಾದವ್ ಸ್ಫೋಟದಲ್ಲಿ ಬದುಕುಳಿದಿದ್ದಾರೆ. ‘‘ನಾನು ನನ್ನ ಟ್ಯಾಂಕರ್ ಅನ್ನು ರಸ್ತೆ ಬದಿ ನಿಲ್ಲಿಸಿದ್ದೆ. ಅದು ಸ್ಫೋಟಗೊಂಡಾಗ ನಾನು ಅದರತ್ತ ಹೋಗುತ್ತಿದ್ದೆ’’ ಎಂದು ವಿಜೇಂದರ್ ಯಾದವ್ ಹೇಳಿದ್ದಾರೆ.
‘‘ಸ್ಫೋಟ ನನ್ನನ್ನು ನೆಲಕ್ಕೆ ಎಸೆಯಿತು. ನಾನು ಎದ್ದು ನಿಂತಾಗ, ನನ್ನ ಬಟ್ಟೆ ರಕ್ತದಿಂದ ತೊಯ್ದಿತ್ತು. ರಸ್ತೆಯಲ್ಲಿ ಮೃತದೇಹಗಳು, ಗಾಜಿನ ಚೂರುಗಳು, ಮಾಂಸಗಳು ಎಲ್ಲೆಲ್ಲೂ ಚದುರಿದ್ದವು’’ ಎಂದು ಅವರು ಹೇಳಿದ್ದಾರೆ.
‘‘ಜನರು ಕೂಗುತ್ತಿದ್ದರು. ಕೆಲವರು ಓಡುತ್ತಿದ್ದರು. ಇತರರು ಆಘಾತದಿಂದ ಸ್ತಂಭೀಭೂತರಾಗಿದ್ದರು. ಆ ಸ್ಫೋಟದ ಶಬ್ದ ಈಗಲೂ ನನ್ನ ಕಿವಿಯಲ್ಲಿ ಪ್ರತಿಧ್ವನಿಸುತ್ತಿದೆ’’ ಎಂದು ಯಾದವ್ ಹೇಳಿದ್ದಾರೆ.