ಪಶ್ಚಿಮ ಬಂಗಾಳ ಎಸ್‌ಐಆರ್: ನೊಬೆಲ್ ಪ್ರಶಸ್ತಿ ಪುರಸ್ಕೃತ ಅಮರ್ತ್ಯ ಸೇನ್‌ಗೆ ಚುನಾವಣಾ ಆಯೋಗ ನೋಟಿಸ್
ಅಮರ್ತ್ಯ ಸೇನ್ | Photo Credit : PTI
ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯಡಿ ಖ್ಯಾತ ಅರ್ಥಶಾಸ್ತ್ರಜ್ಞ ಹಾಗೂ ನೊಬೆಲ್ ಪ್ರಶಸ್ತಿ ಪುರಸ್ಕೃತ ಅಮರ್ತ್ಯ ಸೇನ್ (92) ಅವರ ಎಣಿಕೆ ಫಾರಮ್‌ನಲ್ಲಿ ತಾರ್ಕಿಕ ವ್ಯತ್ಯಾಸಗಳು ಕಂಡು ಬಂದಿರುವ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಚುನಾವಣಾ ಆಯೋಗವು ಅವರಿಗೆ ನೋಟಿಸ್ ಕಳುಹಿಸಿದೆ ಎಂದು ಅಧಿಕಾರಿಯೋರ್ವರು ತಿಳಿಸಿದರು.
ಪ.ಬಂಗಾಳದ ಬೀರಭೂಮ್ ಜಿಲ್ಲೆಯ ಬೋಲ್ಪುರದಲ್ಲಿರುವ ಸೇನ್ ಅವರ ಪೂರ್ವಜರ ನಿವಾಸದಲ್ಲಿ ಜ.16ರಂದು ವಿಚಾರಣೆ ನಡೆಯಲಿದೆ ಎಂದು ಚು.ಆಯೋಗದ ಅಧಿಕಾರಿಯೋರ್ವರು ತಿಳಿಸಿದರು.
ಆಯೋಗದಿಂದ ಯಾವುದೇ ನೋಟಿಸನ್ನು ತಾವು ಸ್ವೀಕರಿಸಿಲ್ಲ ಎಂದು ಸೇನ್ ಅವರ ಕುಟುಂಬ ಸದಸ್ಯರೋರ್ವರು ಸುದ್ದಿಸಂಸ್ಥೆಗೆ ತಿಳಿಸಿದರು.
ಸೇನ್ ಅವರಿಗೆ ನೋಟಿಸ್ ನೀಡಿರುವುದಕ್ಕಾಗಿ ಆಡಳಿತಾರೂಢ ಟಿಎಂಸಿ ಚುನಾವಣಾ ಆಯೋಗವನ್ನು ಟೀಕಿಸಿದೆ.
ಚುನಾವಣಾ ಆಯೋಗವು ಜ.5ರಂದು ವಿಚಾರಣೆಗೆ ಹಾಜರಾಗುವಂತೆ ಕೋಲ್ಕತಾದ ಜಾದವಪುರ ನಿವಾಸಿಯಾಗಿರುವ ಕ್ರಿಕೆಟಿಗ ಮುಹಮ್ಮದ್ ಶಮಿ ಅವರಿಗೂ ನೋಟಿಸ್ ನೀಡಿತ್ತು. ಆದರೆ ನಗರದಲ್ಲಿ ಇಲ್ಲದ್ದರಿಂದ ಅವರು ವಿಚಾರಣೆಗೆ ಹಾಜರಾಗಿರಲಿಲ್ಲ. ಆಯೋಗವು ಅವರ ವಿಚಾರಣೆಗಾಗಿ ಇನ್ನೊಂದು ದಿನಾಂಕವನ್ನು ನಿಗದಿಗೊಳಿಸುವ ಸಾಧ್ಯತೆಯಿದೆ ಎನ್ನಲಾಗಿದೆ.