×
Ad

‘ದುರ್ಬಲ ವರ್ಗಗಳ ಮತಾಧಿಕಾರ ಕಿತ್ತುಕೊಳ್ಳಲು ಸಂಚು’: ಪಶ್ಚಿಮ ಬಂಗಾಳ AERO ರಾಜೀನಾಮೆ

Update: 2026-01-10 20:50 IST

 ಸಾಂದರ್ಭಿಕ ಚಿತ್ರ | Photo Credit : PTI 

ಕೋಲ್ಕತಾ, ಜ.10: ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಗಳ ತೀವ್ರ ಪರಿಷ್ಕರಣೆ (SIR) ಸಂದರ್ಭದಲ್ಲಿ ಮತದಾರರ ಎಣಿಕೆ ಫಾರ್ಮ್‌ಗಳಲ್ಲಿ ಕಂಡುಬಂದ ತಾರ್ಕಿಕ ವ್ಯತ್ಯಾಸಗಳಿಗೆ ಸಂಬಂಧಿಸಿದ ಕಾರ್ಯವಿಧಾನಗಳನ್ನು ವಿರೋಧಿಸಿ ಹೌರಾ ಜಿಲ್ಲೆಯ ಸಹಾಯಕ ಚುನಾವಣಾ ನೋಂದಣಿ ಅಧಿಕಾರಿ (AERO) ಒಬ್ಬರು ರಾಜೀನಾಮೆ ಸಲ್ಲಿಸಿದ್ದಾರೆ.

ಇದು ದುರ್ಬಲ ವರ್ಗಗಳಿಗೆ ಸೇರಿದ ಭಾರೀ ಸಂಖ್ಯೆಯ ಜನರ ಮತದಾನದ ಹಕ್ಕನ್ನು ಕಿತ್ತುಕೊಳ್ಳುವ ಸಂಚು ಎಂದು ಅವರು ಆರೋಪಿಸಿದ್ದಾರೆ.

ಪಶ್ಚಿಮ ಬಂಗಾಳ ನಾಗರಿಕ ಸೇವೆಯ ಬ್ಲಾಕ್ ಡೆವಲಪ್‌ಮೆಂಟ್ ಆಫೀಸರ್ ದರ್ಜೆಯ ಅಧಿಕಾರಿ ಮೌಸಮಿ ಸರ್ಕಾರ್ ಅವರು ಜ.8ರಂದು ರಾಜೀನಾಮೆ ಸಲ್ಲಿಸಿದ್ದಾರೆ.

ಪಶ್ಚಿಮ ಬಂಗಾಳದ ಹೆಚ್ಚುವರಿ ಮುಖ್ಯ ಚುನಾವಣಾಧಿಕಾರಿಗಳು 2025ರ ಡಿಸೆಂಬರ್ 25ರಂದು ಬರೆದ ಪತ್ರದಲ್ಲಿ, ರಾಜ್ಯದಲ್ಲಿ ಹಿಂದಿನ ಎಸ್‌ಐಆರ್ ನಡೆದಿದ್ದ 2002ರ ಮತದಾರರ ಪಟ್ಟಿಯ ದತ್ತಾಂಶಗಳನ್ನು ಪಿಡಿಎಫ್‌ನಿಂದ ಸಿಎಸ್‌ವಿ ಕಡತಗಳಿಗೆ ಪರಿವರ್ತಿಸುವ ವೇಳೆ ಸಂಭವಿಸಿದ ವಿರಳ ದೋಷಗಳಿಂದಾಗಿ ಬಿಎಲ್‌ಒ ಆ್ಯಪ್‌ಗಳಲ್ಲಿ ತಾರ್ಕಿಕ ವ್ಯತ್ಯಾಸಗಳು ಕಾಣಿಸಿಕೊಂಡಿವೆ ಎಂದು ಒಪ್ಪಿಕೊಂಡಿದ್ದಾರೆ.

2002ರ ಪಟ್ಟಿಗಳಲ್ಲಿನ ಹೆಸರುಗಳ ಕಾಗುಣಿತವನ್ನು ಯಥಾಸ್ಥಿತಿಯಲ್ಲೇ ಉಳಿಸಿಕೊಳ್ಳಲಾಗಿತ್ತು. ಆದರೆ ನಂತರ ಚುನಾವಣಾ ಆಯೋಗದ ನಿಯಮಗಳಿಗೆ ಅನುಗುಣವಾಗಿ ಫಾರ್ಮ್–8ರ ಮೂಲಕ ಅನೇಕ ಹೆಸರುಗಳನ್ನು ಸರಿಪಡಿಸಲಾಗಿದೆ. ವಂಶಾನುಕ್ರಮ ಮ್ಯಾಪಿಂಗ್ ಪ್ರಕರಣಗಳಲ್ಲಿ ತಂದೆಯ ಹೆಸರಿನ ಹೊಂದಾಣಿಕೆ ತಪ್ಪಿದ್ದಕ್ಕೆ ಇದುವೇ ಪ್ರಮುಖ ಕಾರಣ ಎಂದು ಸರ್ಕಾರ್ ತಮ್ಮ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.

ಹಲವು ಪ್ರಕರಣಗಳಲ್ಲಿ 2002ರ ಪಟ್ಟಿಯಲ್ಲಿನ ಹೆಸರುಗಳ ವಯಸ್ಸು ಮತ್ತು ಲಿಂಗ ದೋಷಪೂರಿತವಾಗಿದ್ದವು. ಅವುಗಳನ್ನೂ ನಂತರ ಫಾರ್ಮ್–8ರ ಮೂಲಕ ಸರಿಪಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಅನೇಕ ಪ್ರಕರಣಗಳಲ್ಲಿ ಮತದಾರರ ಹೆಸರುಗಳು ‘Ya’ ಎಂದು ಕಾಣಿಸಿಕೊಂಡಿವೆ ಎಂದು ಉಲ್ಲೇಖಿಸಿರುವ ಸರ್ಕಾರ್, ಭಾರತದಲ್ಲಿ ಈ ರೀತಿಯ ಹೆಸರು ಹೊಂದಿರುವ ಜನರಿರುವ ಸಾಧ್ಯತೆಯಿಲ್ಲ ಎಂದು ಹೇಳಿದ್ದಾರೆ.

‘ಒಬ್ಬ ಜವಾಬ್ದಾರಿಯುತ ಪ್ರಜೆಯಾಗಿ, ಈ ರೀತಿಯ ತಾರ್ಕಿಕ ವ್ಯತ್ಯಾಸಗಳಿಗೆ ಯಾವುದೇ ಅರ್ಥವಿಲ್ಲ ಎಂದು ನಾನು ಭಾವಿಸಿದ್ದೇನೆ. ಇದು ಎಣಿಕೆ ಫಾರ್ಮ್‌ಗಳ ಮೂಲಕ ತಮ್ಮ ಹೇಳಿಕೆಯ ಸತ್ಯಾಸತ್ಯತೆಯನ್ನು ಸಾಬೀತುಪಡಿಸಲು ಚುನಾವಣಾ ಆಯೋಗ ಅಗತ್ಯವಾಗಿಸಿರುವ 12 ದಾಖಲೆಗಳ ಪೈಕಿ ಒಂದನ್ನೂ ಹೊಂದಿರದ ದುರ್ಬಲ ವರ್ಗಗಳ ದೊಡ್ಡ ಸಂಖ್ಯೆಯ ಜನರ ಮತದಾನದ ಹಕ್ಕನ್ನು ಕಿತ್ತುಕೊಳ್ಳುವ ಸಂಚು ಆಗಿದೆ. ಆದ್ದರಿಂದ, ನಾನು ನನ್ನ ದೇಶವಾಸಿಗಳು ಹಾಗೂ ರಾಷ್ಟ್ರಕ್ಕೆ ಪ್ರಜ್ಞಾಪೂರ್ವಕವಾಗಿ ಮೋಸ ಮಾಡುತ್ತಿಲ್ಲ ಎಂಬ ಸಮಾಧಾನ ಹೊಂದಲು ಎಇಆರ್‌ಒ ಹುದ್ದೆಗೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ. ಅಗತ್ಯವಿದ್ದಲ್ಲಿ ಚುನಾವಣಾ ಆಯೋಗ ನನಗೆ ವಹಿಸುವ ಇತರ ಕರ್ತವ್ಯಗಳನ್ನು ನಿರ್ವಹಿಸಲು ನಾನು ಸಿದ್ಧಳಿದ್ದೇನೆ’ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.

ಬಗ್ನಾನ್ ಬ್ಲಾಕ್‌ ನಲ್ಲಿ ತಾರ್ಕಿಕ ವ್ಯತ್ಯಾಸಗಳಿಗೆ ಸಂಬಂಧಿಸಿದ ನಿಗದಿತ ವಿಚಾರಣೆಗೆ ಆರು ದಿನಗಳ ಮುನ್ನ ಸರ್ಕಾರ್ ರಾಜೀನಾಮೆ ಸಲ್ಲಿಸಿದ್ದಾರೆ. ಅವರ ರಾಜೀನಾಮೆ ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ವಿವಾದಕ್ಕೆ ಕಾರಣವಾಗಿದೆ ಎಂದು ತಿಳಿದುಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News