×
Ad

West Bengal | S I R ವಿಚಾರಣೆ; ಬಿಡಿಒ ಕಚೇರಿಗಳಿಗೆ ಗುಂಪು ದಾಳಿ, ಇನ್ಸ್‌ಪೆಕ್ಟರ್‌ ಗೆ ಗಂಭೀರ ಗಾಯ

Update: 2026-01-15 22:41 IST

Screengrab photo 

ಕೋಲ್ಕತಾ, ಜ.15: ಉತ್ತರ ದಿನಾಜ್‌ಪುರದ ಚಕುಲಿಯಾ ಪ್ರದೇಶದಲ್ಲಿ ಗುರುವಾರ ಮತದಾರರ ಪಟ್ಟಿಗಳ ತೀವ್ರ ಪರಿಷ್ಕರಣೆ (ಎಸ್‌ಐಆರ್) ವಿಚಾರಣೆಗಳ ಸಂದರ್ಭದಲ್ಲಿ ಟಿಎಂಸಿ ಬೆಂಬಲಿತರೆನ್ನಲಾದ ಪ್ರತಿಭಟನಾಕಾರರು ಪೊಲೀಸರ ಮೇಲೆ ಇಟ್ಟಿಗೆಗಳನ್ನು ತೂರಿದ್ದಾರೆ. ಈ ವೇಳೆ ಸ್ಥಳೀಯ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ತಲೆಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಬುಧವಾರ ಪ್ರತಿಭಟನಾಕಾರರು ಮುರ್ಷಿದಾಬಾದ್ ಜಿಲ್ಲೆಯ ಫರಕ್ಕಾದಲ್ಲಿ ಬಿಡಿಒ ಕಚೇರಿಯನ್ನು ಧ್ವಂಸಗೊಳಿಸಿದ್ದರು.

ಎರಡೂ ಘಟನೆಗಳಲ್ಲಿ ಆಡಳಿತಾರೂಢ ಟಿಎಂಸಿ ಬೆಂಬಲಿತ ಪ್ರತಿಭಟನಾಕಾರರು ಭಾಗಿಯಾಗಿದ್ದಾರೆ ಎಂದು ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಸಿಪಿಎಂ ಆರೋಪಿಸಿವೆ.

ಹಿಂಸಾಚಾರದ ಕುರಿತು ಗಂಭೀರ ಕಳವಳ ವ್ಯಕ್ತಪಡಿಸಿರುವ ಚುನಾವಣಾ ಆಯೋಗವು, ಚಕುಲಿಯಾ ಘಟನೆಯ ಬಗ್ಗೆ ಪಶ್ಚಿಮ ಬಂಗಾಳ ಮುಖ್ಯ ಚುನಾವಣಾಧಿಕಾರಿಗಳಿಂದ ವಿವರವಾದ ವರದಿಯನ್ನು ಕೇಳಿದೆ.

ಪ್ರದೇಶದಲ್ಲಿ ಹಿಂಸಾಚಾರಕ್ಕೆ ಕಾರಣರಾದವರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಉತ್ತರ ದಿನಾಜ್‌ಪುರ ಜಿಲ್ಲಾಧಿಕಾರಿಗೆ ಆಯೋಗ ನಿರ್ದೇಶನ ನೀಡಿದೆ.

ಎಸ್‌ಐಆರ್ ವಿಚಾರಣೆಗಳಿಗೆ ಹಾಜರಾಗುವಂತೆ ಸೂಚಿಸಲಾಗಿದ್ದ ಜನಸಾಮಾನ್ಯರಿಗೆ ಕಿರುಕುಳ ನೀಡಲಾಗುತ್ತಿದೆ ಎಂಬ ಆರೋಪದ ವಿರುದ್ಧ ಪ್ರತಿಭಟಿಸಲು ಗುರುವಾರ ಚಕುಲಿಯಾದ ಕಹಾಟಾ ಪ್ರದೇಶದ ನಿವಾಸಿಗಳು ಬಿಡಿಒ ಕಚೇರಿ ಬಳಿಯ ರಾಜ್ಯ ಹೆದ್ದಾರಿಯನ್ನು ನಿರ್ಬಂಧಿಸಿದ್ದರು. ನಿರ್ಬಂಧ ತೆರವುಗೊಳಿಸಲು ಸ್ಥಳಕ್ಕೆ ಧಾವಿಸಿದ ಪೊಲೀಸರ ಮೇಲೆ ಗುಂಪು ಇಟ್ಟಿಗೆಗಳನ್ನು ತೂರಿದೆ.

ಗುಂಪು ಬಿಡಿಒ ಕಚೇರಿಯ ಒಂದು ಭಾಗಕ್ಕೆ ಬೆಂಕಿ ಹಚ್ಚಿದ್ದು, ಅಲ್ಲಿದ್ದ ಪೀಠೋಪಕರಣಗಳು ಹಾಗೂ ಎಸ್‌ಐಆರ್ ಸಂಬಂಧಿತ ದಾಖಲೆಗಳಿಗೆ ಹಾನಿಯಾಗಿದೆ.

ಪರಿಸ್ಥಿತಿ ನಿಯಂತ್ರಣ ಮೀರಿದ ಹಿನ್ನೆಲೆಯಲ್ಲಿ ಹೆಚ್ಚಿನ ಪೊಲೀಸ್ ಪಡೆಗಳನ್ನು ಸ್ಥಳಕ್ಕೆ ಕರೆಸಲಾಗಿತ್ತು. ಗುಂಪನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿ ಅಶ್ರುವಾಯು ಪ್ರಯೋಗಿಸಿದರು.

ಚಕುಲಿಯಾ ಘಟನೆ ರಾಜ್ಯದಲ್ಲಿ ಎಸ್‌ಐಆರ್ ವಿರುದ್ಧ ನಡೆದ ಅತ್ಯಂತ ಕೆಟ್ಟ ಪ್ರತಿಭಟನೆಗಳಲ್ಲಿ ಒಂದಾಗಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಆದರೆ ಹಿಂಸಾಚಾರದಲ್ಲಿ ಆಡಳಿತ ಪಕ್ಷವು ನೇರವಾಗಿ ಭಾಗವಹಿಸಿದ್ದೇ ಎಂಬುದು ಇನ್ನೂ ದೃಢಪಟ್ಟಿಲ್ಲ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News