West Bengal: ವ್ಯಕ್ತಿ ಮೃತಪಟ್ಟ ಘಟನೆಗೆ S I R ನೋಟಿಸ್ ಕಾರಣ: ಕುಟುಂಬ ಆರೋಪ
ಸಾಂದರ್ಭಿಕ ಚಿತ್ರ | Photo Credit : PTI
ಕೋಲ್ಕತಾ, ಜ. 20: ಪಶ್ಚಿಮಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ ಜಲಂಗಿಯಲ್ಲಿ 50 ವರ್ಷದ ವ್ಯಕ್ತಿಯೋರ್ವರು ಮಂಗಳವಾರ ಬೆಳಗ್ಗೆ ಸಾವನ್ನಪ್ಪಿದ್ದಾರೆ. ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಸಂಬಂಧಿತ ನೋಟಿಸ್‌ನಿಂದ ಉಂಟಾದ ತೀವ್ರ ಮಾನಸಿಕ ಒತ್ತಡವೇ ಸಾವಿಗೆ ಕಾರಣ ಎಂದು ಅವರ ಕುಟುಂಬ ಆರೋಪಿಸಿದೆ.
ಮೃತಪಟ್ಟ ವ್ಯಕ್ತಿಯನ್ನು ನವ್ಡಾಪಾರ ಗ್ರಾಮದ ಅಕ್ಷತ್ ಅಲಿ ಮಂಡಲ್ ಎಂದು ಗುರುತಿಸಲಾಗಿದೆ. ಆರಕ್ಕಿಂತ ಹೆಚ್ಚು ಮಕ್ಕಳಿದ್ದಾರೆ ಎಂದು ತಪ್ಪಾಗಿ ಉಲ್ಲೇಖಿಸಲಾಗಿದ್ದ ನೋಟಿಸ್ ಬಂದ ಬಳಿಕ ಅವರು ತೀವ್ರ ಆತಂಕಕ್ಕೆ ಒಳಗಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಮಂಡಲ್ ಏಕಾಂಗಿಯಾಗಿ ವಾಸಿಸುತ್ತಿದ್ದರು. ಅವರ ಐವರು ಪುತ್ರರು ಹೊರರಾಜ್ಯಗಳಲ್ಲಿ ಹಾಗೂ ಗಲ್ಫ್ ದೇಶಗಳಲ್ಲಿ ಕೆಲಸ ಮಾಡುತ್ತಿದ್ದರು ಎಂದು ಕುಟುಂಬ ತಿಳಿಸಿದೆ.
ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ನೋಟಿಸ್ ಮಂಡಲ್‌ಗೆ ತೀವ್ರ ಆತಂಕ ಉಂಟುಮಾಡಿತ್ತು. ತಮ್ಮ ಪುತ್ರರನ್ನು ಮರಳಿ ಕರೆತರುವುದು, ಅಧಿಕಾರಿಗಳ ಮುಂದೆ ಹಾಜರುಪಡಿಸುವುದು ಹಾಗೂ ಅಗತ್ಯ ದಾಖಲೆಗಳನ್ನು ಸಲ್ಲಿಸುವ ಬಗ್ಗೆ ಅವರು ನಿರಂತರವಾಗಿ ಚಿಂತಿಸುತ್ತಿದ್ದರು. ನೋಟಿಸ್ ಸ್ವೀಕರಿಸಿದ ಕೆಲವೇ ದಿನಗಳಲ್ಲಿ ಅವರು ಅನಾರೋಗ್ಯಕ್ಕೆ ತುತ್ತಾದರು. ಅವರನ್ನು ಸಾದಿಕಾರ್ಡಿಯಾರ್ ಗ್ರಾಮೀಣ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು ಎಂದು ಮಂಡಲ್ ಕುಟುಂಬದ ಸದಸ್ಯರೊಬ್ಬರು ತಿಳಿಸಿದ್ದಾರೆ.
ತಮ್ಮ ಪತಿ ಸಾವನ್ನಪ್ಪುವ ಮೂರು ದಿನಗಳ ಮುನ್ನ ಈ ನೋಟಿಸ್ ಬಂದಿತ್ತು. ಆ ಬಳಿಕ ಅವರು ನಿರಂತರ ಭೀತಿಯಲ್ಲಿ ಬದುಕುತ್ತಿದ್ದರು ಎಂದು ಮಂಡಲ್ ಅವರ ಪತ್ನಿ ಸರೀಫಾ ಬೀಬಿ ತಿಳಿಸಿದ್ದಾರೆ. ಮಂಡಲ್ ಅವರ ನಾಲ್ವರು ಪುತ್ರರು ಕೇರಳದಲ್ಲಿ ಹಾಗೂ ಓರ್ವ ಪುತ್ರ ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಪುತ್ರರ ಸಂಖ್ಯೆ ಕುರಿತು ನೋಟಿಸ್‌ನಲ್ಲಿ ನೀಡಿರುವ ತಪ್ಪು ಮಾಹಿತಿ ಮಂಡಲ್ ಅವರ ಸಾವಿಗೆ ಕಾರಣವಾಗಿದೆ ಎಂದು ಸ್ಥಳೀಯ ಪಂಚಾಯತ್ ಪ್ರಧಾನ್ ಮಹಬುಲ್ ಇಸ್ಲಾಮ್ ಹೇಳಿದ್ದಾರೆ.
ಈ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ನೋಟಿಸ್ ಜನರಲ್ಲಿ ಪ್ರಕ್ಷುಬ್ಧತೆಗೆ ಕಾರಣವಾಗಿದ್ದು, ಇಂತಹ ನೋಟಿಸ್‌ಗಳನ್ನು ಜಾರಿಗೊಳಿಸುವ ಹಿಂದಿನ ಆಡಳಿತಾತ್ಮಕ ಪ್ರಕ್ರಿಯೆಯ ಕುರಿತು ನಿವಾಸಿಗಳು ಪ್ರಶ್ನೆ ಎತ್ತುವಂತಾಗಿದೆ. ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಯೂಸುಫ್ ಅಲಿ ಈ ಘಟನೆಯನ್ನು ಅಮಾನವೀಯ ಕಿರುಕುಳ ಎಂದು ಹೇಳಿ, ಸಂಪೂರ್ಣ ತನಿಖೆಗೆ ಆಗ್ರಹಿಸಿದ್ದಾರೆ.
Assam: ಜಾನುವಾರು ಕಳವು ಶಂಕಿಸಿ ಗುಂಪಿನಿಂದ ದಾಳಿ; ಓರ್ವ ಮೃತ್ಯು (W/F)
ಕೊಕ್ರಝಾರ್, ಜ. 20: ಅಸ್ಸಾಂನ ಕೊಕ್ರಝಾರ್ ಜಿಲ್ಲೆಯಲ್ಲಿ ಜಾನುವಾರು ಕಳವು ಮಾಡಿದ್ದಾರೆ ಎಂಬ ಶಂಕೆಯ ಮೇರೆಗೆ ಗುಂಪೊಂದು ದಾಳಿ ನಡೆಸಿದ ಪರಿಣಾಮ ಓರ್ವ ಸಾವನ್ನಪ್ಪಿ, ಇತರ ನಾಲ್ವರು ಗಂಭೀರ ಗಾಯಗೊಂಡಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಸಂತ್ರಸ್ತರು ರಸ್ತೆ ನಿರ್ಮಾಣ ಯೋಜನೆಗೆ ಸಂಬಂಧಿಸಿದವರು. ಅವರು ಸೋಮವಾರ ರಾತ್ರಿ ಔಡಾಂಗ್ ಪ್ರದೇಶದಲ್ಲಿ ಸ್ಥಳ ಪರಿಶೀಲನೆ ನಡೆಸಿ ವಾಹನದಲ್ಲಿ ಹಿಂದಿರುಗುತ್ತಿದ್ದಾಗ ಈ ಘಟನೆ ನಡೆದಿದೆ.
ಅವರ ವಾಹನ ಗೌರಿ ನಗರ–ಮಾಶಿಂಗ್ ರಸ್ತೆಗೆ ತಲುಪುತ್ತಿದ್ದಂತೆ ಸ್ಥಳೀಯ ಗ್ರಾಮಸ್ಥರ ಗುಂಪೊಂದು ಜಾನುವಾರು ಕಳ್ಳರೆಂದು ಶಂಕಿಸಿ ತಡೆದು ನಿಲ್ಲಿಸಲು ಪ್ರಯತ್ನಿಸಿತು. ಇದರಿಂದ ವಾಹನ ರಸ್ತೆಯಿಂದ ಜಾರಿತು. ಈ ಸಂದರ್ಭ ಗುಂಪು ಅದರಲ್ಲಿದ್ದವರ ಮೇಲೆ ದಾಳಿ ನಡೆಸಿ, ವಾಹನಕ್ಕೆ ಬೆಂಕಿ ಹಚ್ಚಿತು. ಪರಿಣಾಮ ಕೆಲವರಿಗೆ ಗಂಭೀರ ಸುಟ್ಟ ಗಾಯಗಳಾದವು ಎಂದು ಪೊಲೀಸರು ತಿಳಿಸಿದ್ದಾರೆ.
ಗಾಯಾಳುಗಳನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು. ಅವರಲ್ಲಿ ಗಂಭೀರ ಗಾಯಗೊಂಡಿದ್ದ ಸಿಖ್ನಾ ಜ್ವಾಹೌಲಾವೊ ಬಿಸ್ಮಿತ್ ಆಲಿ ಅಲಿಯಾಸ್ ರಾಜಾ ಮೃತಪಟ್ಟಿದ್ದಾರೆ. ಅವರು ಈ ಪ್ರದೇಶದಲ್ಲಿ ನಡೆಯುತ್ತಿರುವ ರಸ್ತೆ ನಿರ್ಮಾಣ ಯೋಜನೆಯ ಗುತ್ತಿಗೆದಾರ ಮೊರಾಂಡಾ ಬಸುಮತಾರಿ ಅವರ ಅಳಿಯ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಭಾತ್ ಬ್ರಹ್ಮಾ, ಜುಬಿರಾಜ್ ಬ್ರಹ್ಮಾ, ಸುನಿಲ್ ಮುರ್ಮು ಹಾಗೂ ಮಹೇಶ್ ಮುರ್ಮು ಗಂಭೀರ ಗಾಯಗೊಂಡಿದ್ದು, ಅವರನ್ನು ಕೊಕ್ರಝಾರ್ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಭಾತ್ ಬ್ರಹ್ಮಾ ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಘಟನೆಯ ಸಂಬಂಧ ಕೆಲವರನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದ್ದು, ತನಿಖೆ ಆರಂಭಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.