×
Ad

ಶಿಕ್ಷಣ ಸಂಸ್ಥೆಗಳಲ್ಲಿ ಹಾಸುಹೊಕ್ಕಾಗಿರುವ ಜಾತಿ ತಾರತಮ್ಯ: ಸಾಂಸ್ಥಿಕ ಕೊಲೆಗೆ ಕಾರಣವಾಗುವುದು ಏನೇನು?

ರೋಹಿತ್ ವೇಮುಲ ಸಾಂಸ್ಥಿಕ ಹತ್ಯೆಯಾಗಿ 10 ವರ್ಷಗಳು!

Update: 2026-01-16 22:47 IST

Photo Credit : newindianexpress.com

ವೇಮುಲ ಬದುಕಿರುತ್ತಿದ್ದರೆ ಆತನಿಗೆ ಈಗ ಮೂವತ್ತಾರು ವರ್ಷ ವಯಸ್ಸಾಗಿರುತ್ತಿತ್ತು. ಜನವರಿ 17, 2016ರಂದು ಹೈದರಾಬಾದ್ ವಿಶ್ವವಿದ್ಯಾಲಯದ ಪಿಎಚ್‌ಡಿ ವಿದ್ಯಾರ್ಥಿ ರೋಹಿತ್ ವೇಮುಲ ಆತ್ಮಹತ್ಯೆ ಮಾಡಿಕೊಂಡರು. ಈ ಸಾವು ದೇಶದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿನ ಜಾತಿ ಆಧಾರಿತ ತಾರತಮ್ಯವನ್ನು ಬಹಿರಂಗಪಡಿಸಿತು. ತನ್ನ ಆತ್ಮಹತ್ಯೆ ಟಿಪ್ಪಣಿಯಲ್ಲಿ ವೇಮುಲ, “My birth is my fatal accident” ಎಂದು ಬರೆದಿದ್ದರು.

ವೇಮುಲ ಅವರ ಸಾವು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿನ ಜಾತಿ ತಾರತಮ್ಯ ವಿರುದ್ದ ನಡೆದ ಪ್ರತಿಭಟನೆಗಳಿಗೆ ಕಿಚ್ಚು ಹಚ್ಚಿತು. ವಿದ್ಯಾರ್ಜನೆಯ ಸ್ಥಳಗಳಲ್ಲಿ ಆಳವಾಗಿ ಬೇರೂರಿರುವ ಜಾತಿ ವ್ಯವಸ್ಥೆಯನ್ನು ಇದು ತೀವ್ರವಾಗಿ ಎತ್ತಿ ತೋರಿಸಿತು.

ಹೈದರಾಬಾದ್ ವಿಶ್ವವಿದ್ಯಾಲಯದಲ್ಲಿ ರೋಹಿತ್ ವೇಮುಲ ಅವರ ಅನುಭವವು, ಸಾಂಸ್ಥಿಕ ವೈಫಲ್ಯವು ಜಾತಿ ಪರಿಭಾಷೆಯಲ್ಲಿ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ. ವೇಮುಲ ಅಧಿಕಾರಶಾಹಿಯನ್ನು ಹಾಗೂ ಬ್ರಾಹ್ಮಣ್ಯ ಪ್ರಾಬಲ್ಯವನ್ನು ಪ್ರಶ್ನಿಸಿದರು. ಸಮಾನತೆ ಹಕ್ಕು; ಅದು ಔದಾರ್ಯವಲ್ಲ ಎಂದು ಹೇಳಿದ್ದಕ್ಕೆ ಅವರಿಗೆ ಸಿಕ್ಕ ಉತ್ತರ ಶಿಸ್ತು ಕ್ರಮವಾಗಿತ್ತು. ಅಮಾನತು, ಸಾಮಾಜಿಕ ಬಹಿಷ್ಕಾರ, ಶಿಕ್ಷಣಕ್ಕೆ ಅಗತ್ಯವಾದ ಬೆಂಬಲ ನಿರಾಕರಣೆ, ಅಧಿಕಾರಿಗಳ ಅಲಕ್ಷ್ಯ—ಇವೆಲ್ಲವೂ ಅವರಿಗೆ ದೊರಕಿದ ಪ್ರತಿಕ್ರಿಯೆಗಳಾಗಿದ್ದವು.

ವಿಶ್ವವಿದ್ಯಾಲಯ ಆತನ ಮಾತುಗಳನ್ನು ಆಲಿಸಲಿಲ್ಲ. ಆತನನ್ನು ಮೌನವಾಗಿಸುವುದೇ ಅದರ ಉದ್ದೇಶವಾಗಿತ್ತು. ಆತನ ಫೆಲೋಶಿಪ್ ನಿಲ್ಲಿಸಲಾಯಿತು. ಮೂಲಭೂತ ಸಂಪನ್ಮೂಲಗಳನ್ನು ದೊರಕದಂತೆ ಮಾಡಲಾಯಿತು. ಆತನ ಸಾಮಾಜಿಕ ಜಗತ್ತನ್ನು ಉದ್ದೇಶಪೂರ್ವಕವಾಗಿ ಸಂಕುಚಿತಗೊಳಿಸಲಾಯಿತು. ಆತನನ್ನು ಇಲ್ಲವಾಗಿಸುವ ಉದ್ದೇಶದಿಂದಲೇ ಆತನ ಬದುಕನ್ನು ಅಸಹನೀಯವಾಗಿಸಲಾಯಿತು.

ಉನ್ನತ ಶಿಕ್ಷಣದಲ್ಲಿ ಜಾತಿ ತಾರತಮ್ಯ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ತಾರತಮ್ಯ ಹಾಸುಹೊಕ್ಕಾಗಿದೆ. ಇಲ್ಲಿ ದಲಿತ ವಿದ್ಯಾರ್ಥಿಗಳನ್ನು ಬಹಿರಂಗವಾಗಿ ನಿಂದಿಸುವುದಿಲ್ಲ; ಅವರನ್ನು ಸದ್ದಿಲ್ಲದೆ ಚಿವುಟಲಾಗುತ್ತದೆ. ಸವರ್ಣ ಗೆಳೆಯರು ಪ್ರತಿಧ್ವನಿಸುವವರೆಗೆ ಅವರ ವಿಚಾರಗಳನ್ನು ಸೆಮಿನಾರ್‌ಗಳಲ್ಲಿ ನಿರ್ಲಕ್ಷಿಸಲಾಗುತ್ತದೆ. ಅವರ ಶೈಕ್ಷಣಿಕ ಶ್ರಮವನ್ನು ಗುರುತಿಸಲಾಗುವುದಿಲ್ಲ; ಆದರೆ ಇತರರು ಅದೇ ರೀತಿಯ ಕೆಲಸ ಮಾಡಿದರೆ ಅವರ ಬೆನ್ನು ತಟ್ಟಲಾಗುತ್ತದೆ.

ವಿದ್ಯಾರ್ಥಿ ದಲಿತನಾಗಿದ್ದರೆ ಯಾವುದೇ ಸ್ಪಷ್ಟ ವಿವರಣೆ ನೀಡದೆ ಮೌಖಿಕ ಪರೀಕ್ಷೆಗಳಲ್ಲಿ ಕಡಿಮೆ ಅಂಕ ನೀಡಲಾಗುತ್ತದೆ. ಆತನಿಗೆ ಸ್ಪಷ್ಟತೆ ಇಲ್ಲ, ಆತ್ಮವಿಶ್ವಾಸ ಇಲ್ಲ ಎಂಬ ಮುದ್ರೆ ಅಂಟಿಸಲಾಗುತ್ತದೆ. ಸಂದರ್ಶನಗಳು ಮತ್ತು ಮೌಖಿಕ ಮೌಲ್ಯಮಾಪನಗಳಲ್ಲಿಯೂ ಪಕ್ಷಪಾತಗಳು ಕೆಲಸ ಮಾಡುತ್ತವೆ.

ಭಾಷಾ ನಿರರ್ಗಳತೆ, ಶೈಕ್ಷಣಿಕ ಸಂಸ್ಕೃತಿಯೊಂದಿಗೆ ಪರಿಚಿತತೆ ಮತ್ತು ನಿರ್ದಿಷ್ಟ ಪ್ರಸ್ತುತಿ ಶೈಲಿಗಳನ್ನು ಅರ್ಹತೆಯ ಸೂಚಕಗಳೆಂದು ಪರಿಗಣಿಸಲಾಗುತ್ತದೆ. ಇಲ್ಲಿ ಸಂದರ್ಶನಗಳು ಕೇವಲ ಅಭ್ಯರ್ಥಿಗಳನ್ನು ಮೌಲ್ಯಮಾಪನ ಮಾಡುವುದಿಲ್ಲ; ಅವು ಹೊರಗಿಡುವಿಕೆಯ ಸಾಧನಗಳಾಗಿಯೂ ಕಾರ್ಯನಿರ್ವಹಿಸುತ್ತವೆ.

ದಲಿತ ವಿದ್ಯಾರ್ಥಿಗಳು—ವಿಶೇಷವಾಗಿ ಕಡಿಮೆ ಶಿಕ್ಷಣ ಅಥವಾ ಅನಕ್ಷರಸ್ಥ ಕುಟುಂಬ ಹಿನ್ನೆಲೆಯಿಂದ ಬಂದವರು—ವಿಶ್ವವಿದ್ಯಾಲಯಕ್ಕೆ ಪ್ರವೇಶಿಸಿದಾಗ ಅಲ್ಲಿನ ಅನುಭವಗಳೆಲ್ಲ ಅವರಿಗೆ ಹೊಸತಾಗಿರುತ್ತವೆ. ಅವರ ನಡೆ-ನುಡಿ, ಕಲಿಕೆ ಮತ್ತು ಹೊಂದಿಕೊಳ್ಳುವಿಕೆಯ ವೈಫಲ್ಯವನ್ನು ವೈಯಕ್ತಿಕ ದೌರ್ಬಲ್ಯವೆಂದು ರೂಪಿಸಲಾಗುತ್ತದೆ.

ಪ್ರತಿಭೆ ಮತ್ತು ಪ್ರಯತ್ನಗಳ ಮೌಲ್ಯಮಾಪನಗಳು ಎಲ್ಲರಿಗೂ ಒಂದೇ ರೀತಿ ಇರುವುದಿಲ್ಲ. ಮಾರ್ಗದರ್ಶನ, ಶೈಕ್ಷಣಿಕ ಜಾಲಗಳು ಮತ್ತು ಅನೌಪಚಾರಿಕ ಬೆಂಬಲ ವ್ಯವಸ್ಥೆಗಳ ಪ್ರವೇಶವೂ ಇದರಲ್ಲಿ ಸೇರಿದೆ. ಇವು ಶೈಕ್ಷಣಿಕ ಕಾರ್ಯಕ್ಷಮತೆಯನ್ನು ರೂಪಿಸುತ್ತವೆ, ಆದರೆ ಔಪಚಾರಿಕ ಮೌಲ್ಯಮಾಪನ ಚೌಕಟ್ಟುಗಳಲ್ಲಿ ಕಾಣೆಯಾಗಿರುತ್ತವೆ. ಈ ರಚನಾತ್ಮಕ ಸವಲತ್ತುಗಳನ್ನು ನಿರ್ಲಕ್ಷಿಸುವ ಮೂಲಕ, ಅರ್ಹತೆಯ ಚರ್ಚೆ ಆನುವಂಶಿಕ ಸವಲತ್ತನ್ನು ವೈಯಕ್ತಿಕ ಸಾಧನೆಯಾಗಿಯೂ, ಹೊರಗಿಡುವಿಕೆಯನ್ನು ವೈಯಕ್ತಿಕ ವೈಫಲ್ಯವಾಗಿಯೂ ಪರಿವರ್ತಿಸುತ್ತದೆ. ಹೀಗೆ ಅಸಮಾನತೆಯನ್ನು ಸಾಮಾನ್ಯಗೊಳಿಸಿ ಶ್ರೇಣಿಯನ್ನು ನೈತಿಕಗೊಳಿಸಲಾಗುತ್ತದೆ.

ಸಾಂಸ್ಥಿಕ ಕೊಲೆಗೆ ಕಾರಣವಾಗುವುದು ಏನೇನು?

ಸಾಂಸ್ಥಿಕ ಕೊಲೆ ವೈಯಕ್ತಿಕ ಕ್ರೌರ್ಯದ ಪ್ರತ್ಯೇಕ ಕೃತ್ಯವಲ್ಲ. ಇದು ಸಾಂಸ್ಥಿಕ ಜೀವನದಲ್ಲಿ ಹುದುಗಿರುವ ದೀರ್ಘಕಾಲದ ಅವಮಾನದ ಅಂತಿಮ ಪರಿಣಾಮವಾಗಿದೆ. ಬ್ರಾಹ್ಮಣ್ಯ ಸಾಕಾರವನ್ನು ಸಾಮಾನ್ಯಗೊಳಿಸುವ ಮೂಲಕ ಮತ್ತು ದಲಿತ ವಿದ್ಯಾರ್ಥಿಗಳ ವ್ಯವಸ್ಥಿತ ನಿರಾಕರಣೆಯ ಮೂಲಕ ಈ ಆಡಳಿತ ಕಾರ್ಯನಿರ್ವಹಿಸುತ್ತದೆ.

ವಿಶ್ವವಿದ್ಯಾಲಯಗಳು ಸವರ್ಣ ಸೌಂದರ್ಯಶಾಸ್ತ್ರ, ಅಭಿರುಚಿ, ನಡವಳಿಕೆ ಮತ್ತು ಪ್ರಭಾವವನ್ನು ಅರ್ಹತೆ ಹಾಗೂ ವೃತ್ತಿಪರತೆಯ ಅಸ್ಪಷ್ಟ ಮಾನದಂಡಗಳಾಗಿ ರೂಪಿಸುತ್ತವೆ. ಇವು ಸವರ್ಣರಿಗೆ ಕಾನೂನುಬದ್ಧತೆಯನ್ನು ನೀಡುತ್ತವೆ; ದಲಿತರನ್ನು ದೂರವಿಡುತ್ತವೆ. ಪರಿಣಾಮವಾಗಿ, ದಲಿತ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯ ಗುರುತಿನ ಸ್ಥಳವಾಗದೆ, ನಿರಂತರ ತಿದ್ದುವಿಕೆ, ಕಣ್ಗಾವಲು ಮತ್ತು ಶಿಸ್ತಿನ ತಾಣವಾಗುತ್ತದೆ.

ಈ ಪ್ರಕ್ರಿಯೆ ಸಾಂಸ್ಥಿಕ ಅವಮಾನವನ್ನು ಸೃಷ್ಟಿಸುತ್ತದೆ. ಸಾಮರ್ಥ್ಯ, ಭಾಷೆ, ಉಡುಗೆ ಮತ್ತು ಭಾವನೆಗಳ ನಿಯಂತ್ರಣದ ಮೂಲಕ ದಲಿತ ವಿದ್ಯಾರ್ಥಿಗಳನ್ನು “ಕೋಟಾ”, “ಫಲಾನುಭವಿಗಳು” ಎಂದು ಗುರುತಿಸಲಾಗುತ್ತದೆ. ಪ್ರತಿಯೊಂದು ನಿದರ್ಶನ ಚಿಕ್ಕದಾಗಿ ಕಾಣಿಸಬಹುದು; ಆದರೆ ಒಟ್ಟಾಗಿ ಅವು ಘನತೆಯ ಮೇಲೆ ನಡೆಯುವ ನಿರಂತರ ದಾಳಿಗಳಾಗುತ್ತವೆ.

ಸಾಂಸ್ಥಿಕ ಅವಮಾನವು ಇತಿಹಾಸದ ಮೂಲಕ ಕಾರ್ಯನಿರ್ವಹಿಸುತ್ತದೆ—ಹಿಂದೇನಾಯ್ತು? ಹಿಂದೆ ಹೇಗಿದ್ದರು? ಎಂಬ ಪ್ರಶ್ನೆಗಳ ಮೂಲಕ. ಶೈಕ್ಷಣಿಕ ಬದುಕಿಗಾಗಿ ದಲಿತ ವಿದ್ಯಾರ್ಥಿಗಳು ತಮ್ಮ ಇತಿಹಾಸ, ಸಂಸ್ಕೃತಿ ಮತ್ತು ಸಾಮಾಜಿಕ ನೆನಪುಗಳನ್ನು ನಿಗ್ರಹಿಸಲು ಒತ್ತಾಯಿಸಲ್ಪಡುತ್ತಾರೆ. ಇದರಿಂದ ಸಂಸ್ಥೆಯೊಳಗೆ ಸಾಮಾಜಿಕ ಸಾವು ಎಂಬ ಸ್ಥಿತಿ ನಿರ್ಮಾಣವಾಗುತ್ತದೆ.

ಆಡಳಿತಾಧಿಕಾರಿಗಳ ಅಲಕ್ಷ್ಯ, ಮಿತಿಮೀರಿದ ಶಿಸ್ತು, ಕುಂದುಕೊರತೆಗಳ ನಿರ್ಲಕ್ಷ್ಯ—ಇವುಗಳೆಲ್ಲ ಸೇರಿ ಸಾಂಸ್ಥಿಕ ಕೊಲೆಗೆ ಕಾರಣವಾಗುತ್ತವೆ. ತಾರತಮ್ಯವನ್ನು ಅರ್ಹತೆಯ ಕೊರತೆ ಎಂದು ಮರುರೂಪಿಸಿದಾಗ, ಬೆಂಬಲದ ಬದಲು ಮೂಲೆಗುಂಪು ಮಾಡಿದಾಗ, ಘನತೆಯಿಂದ ಬದುಕಲು ಅಗತ್ಯವಾದ ಪರಿಸ್ಥಿತಿಗಳನ್ನು ಸಂಸ್ಥೆಯೇ ನಾಶಗೊಳಿಸುತ್ತದೆ. ಅಂತಹ ಸಂದರ್ಭಗಳಲ್ಲಿ ಸಾವು ಆಕಸ್ಮಿಕವಲ್ಲ.

ಉನ್ನತ ಶಿಕ್ಷಣದಲ್ಲಿ ದಲಿತರು

ಅನೇಕ ದಲಿತ ಕುಟುಂಬಗಳಿಗೆ ಉನ್ನತ ಶಿಕ್ಷಣಕ್ಕೆ ಪ್ರವೇಶವು ತಲೆಮಾರುಗಳ ಭಾರವನ್ನು ಹೊತ್ತುಕೊಂಡಿರುತ್ತದೆ. ವಿಶ್ವವಿದ್ಯಾಲಯದ ಸೀಟು ಘನತೆ, ಚಲನಶೀಲತೆ ಮತ್ತು ಜಾತಿ ಆಧಾರಿತ ಬಂಧನಗಳಿಂದ ಮುಕ್ತಿ ಎಂಬ ಅರ್ಥವನ್ನು ಹೊಂದಿರುತ್ತದೆ. ಆದರೆ ಅನೇಕ ವಿದ್ಯಾರ್ಥಿಗಳಿಗೆ ಈ ಕನಸು ಬೇಗನೆ ಪ್ರತ್ಯೇಕತೆಯಾಗಿ ಬದಲಾಗುತ್ತದೆ.

ಬೆಂಬಲ ವ್ಯವಸ್ಥೆಗಳ ಕೊರತೆ, ಸಾಮಾಜಿಕ ಏಕಾಂತ, ಸಂಸ್ಥೆಗಳ ಮೌನ—ಇವೆಲ್ಲ ದಲಿತ ವಿದ್ಯಾರ್ಥಿಗಳ ಅನುಭವವಾಗುತ್ತವೆ. ವಿಶ್ವವಿದ್ಯಾಲಯಗಳು ಸವರ್ಣ ವಿದ್ಯಾರ್ಥಿಗಳಿಗೆ ಆತ್ಮೀಯ ಸ್ಥಳಗಳಾಗಿ ಕಾಣಿಸಿಕೊಂಡರೆ, ದಲಿತ ವಿದ್ಯಾರ್ಥಿಗಳಿಗೆ ಅವು ನಿರ್ಲಕ್ಷ್ಯದ ಸ್ಥಳಗಳಾಗುತ್ತವೆ. ಬದುಕುಳಿಯುವಿಕೆ ಶೈಕ್ಷಣಿಕವಾಗುವ ಮೊದಲು ಭಾವನಾತ್ಮಕವಾಗುತ್ತದೆ.

ಎಸ್.ಕೆ. ಥೋರಟ್ ಸಮಿತಿ ವರದಿ (2007) ಮತ್ತು ಮುಂಗೇಕರ್ ಸಮಿತಿ ವರದಿ (2012) ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವ್ಯವಸ್ಥಿತ ಜಾತಿ ಪಕ್ಷಪಾತವನ್ನು ದಾಖಲೆಗಳ ಮೂಲಕ ಬಹಿರಂಗಪಡಿಸಿವೆ. ಆದರೂ ಅವುಗಳ ಶಿಫಾರಸುಗಳು ಬಹುಮಟ್ಟಿಗೆ ಜಾರಿಗೆ ಬಂದಿಲ್ಲ. ಹೀಗಾಗಿ ಸಮಸ್ಯೆ ಜ್ಞಾನದ ಕೊರತೆಯಲ್ಲ; ರಾಜಕೀಯ ಇಚ್ಛಾಶಕ್ತಿಯ ಕೊರತೆ ಎಂಬುದು ಸ್ಪಷ್ಟ.

ಶೈಕ್ಷಣಿಕ ಕ್ಷೇತ್ರದಲ್ಲಿ ಹೊರಗಿಡುವಿಕೆಯ ಮಾದರಿಗಳು

ರೋಹಿತ್ ವೇಮುಲರಿಂದ ಪಾಯಲ್ ತಡ್ವಿವರೆಗೆ, ದರ್ಶನ್ ಸೋಲಂಕಿಯಿಂದ ಅನಾಮಧೇಯ ದಲಿತ ಕಾರ್ಮಿಕರು ಮತ್ತು ಅಧಿಕಾರಿಗಳವರೆಗೆ—ಸಾಂಸ್ಥಿಕ ಅವಮಾನಕ್ಕೆ ಸಂಬಂಧಿಸಿದ ಸಾವುಗಳು ಮರುಮರು ಸಂಭವಿಸುತ್ತಿವೆ.

ಇತ್ತೀಚಿನ ಪ್ರಕರಣಗಳು, ಶೈಕ್ಷಣಿಕ ಸ್ಥಳಗಳಲ್ಲಿ ಜಾತಿ ಹಿಂಸೆ ಎಷ್ಟು ಆಳವಾಗಿ ಬೇರೂರಿದೆ ಎಂಬುದನ್ನು ತೋರಿಸುತ್ತವೆ. ಸಂಸ್ಥೆಗಳು ಕಾರ್ಯನಿರ್ವಹಿಸಲು ನಿರಾಕರಿಸಿದಾಗ, ಅವುಗಳ ಮೌನವೂ ಹಿಂಸೆಯೇ ಆಗುತ್ತದೆ.

ಈ ಪ್ರತಿಕೂಲ ಪರಿಸ್ಥಿತಿಗಳ ನಡುವೆಯೂ ದಲಿತ ವಿದ್ಯಾರ್ಥಿಗಳು ಯೋಚಿಸುತ್ತಾರೆ, ಬರೆಯುತ್ತಾರೆ, ಸಂಘಟಿಸುತ್ತಾರೆ ಮತ್ತು ಪ್ರತಿರೋಧಿಸುತ್ತಾರೆ. ವಿಶ್ವವಿದ್ಯಾಲಯದ ಬಾಗಿಲುಗಳಲ್ಲಿ ಜಾತಿ ಕಣ್ಮರೆಯಾಗುವುದಿಲ್ಲ; ಅದು ಗುರುತಿಸುವಿಕೆ, ಸೇರುವಿಕೆ ಮತ್ತು ಮೌಲ್ಯದ ಸೂಕ್ಷ್ಮ ಶ್ರೇಣಿಗಳ ಮೂಲಕ ಮರುಸಂಘಟಿತಗೊಳ್ಳುತ್ತದೆ.

“ಹೆಸರಿನಲ್ಲಿ ಏನಿದೆ?” ಎಂದು ಶೇಕ್ಸ್‌ಪಿಯರ್ ಕೇಳಿದಾಗ, ಹೆಸರು ಘನತೆ ಮತ್ತು ಹಣೆಬರಹವನ್ನು ನಿರ್ಧರಿಸುವ ಸಮಾಜವನ್ನು ಅವರು ಊಹಿಸಿರಲಿಲ್ಲ. ಜಾತಿ ಸಮಾಜದಲ್ಲಿ ಹೆಸರು ಗೌರವವೋ ಅಪಹಾಸ್ಯವೋ, ಅವಕಾಶವೋ ಹೊರಗಿಡುವಿಕೆಯೋ ಆಗುತ್ತದೆ. ಹೆಸರು ಮೌನವಾಗಿ ಜಾತಿಯನ್ನು ಘೋಷಿಸುತ್ತದೆ; ಸಂಸ್ಥೆಗಳು ಅದಕ್ಕೆ ತಕ್ಕಂತೆ ಪ್ರತಿಕ್ರಿಯಿಸುತ್ತವೆ.

ನ್ಯಾಯ ಸಮಿತಿಗೆ ಯುಜಿಸಿ ನಿರ್ದೇಶನ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ತಾರತಮ್ಯ ನಿವಾರಣೆಗೆ ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಅಧಿಸೂಚನೆಗಳನ್ನು ಹೊರಡಿಸಿದೆ. ಈ ನಿಯಮದ ಪ್ರಕಾರ ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳು ತಾರತಮ್ಯದ ದೂರುಗಳನ್ನು ಪರಿಶೀಲಿಸಲು ನ್ಯಾಯ ಸಮಿತಿಯನ್ನು ರಚಿಸಬೇಕು.

ಈ ಸಮಿತಿಯಲ್ಲಿ ಇತರ ಹಿಂದುಳಿದ ವರ್ಗಗಳು (ಒಬಿಸಿ), ಪರಿಶಿಷ್ಟ ಜಾತಿಗಳು (ಎಸ್‌ಸಿ), ಪರಿಶಿಷ್ಟ ಪಂಗಡಗಳು (ಎಸ್‌ಟಿ), ಅಂಗವಿಕಲರು ಮತ್ತು ಮಹಿಳೆಯರ ಪ್ರತಿನಿಧಿಗಳು ಇರಬೇಕು. ಸಂಸ್ಥೆಯ ಮುಖ್ಯಸ್ಥರು ಸಮಿತಿಯನ್ನು ರಚಿಸಬೇಕು. ದೂರುಗಳ ವಿಚಾರಣೆ, ಪರಿಹಾರ ಕ್ರಮಗಳ ಶಿಫಾರಸು ಹಾಗೂ ದೂರುದಾರರನ್ನು ಪ್ರತೀಕಾರದಿಂದ ರಕ್ಷಿಸುವ ಹೊಣೆಗಾರಿಕೆ ಈ ಸಮಿತಿಗೆ ಸೇರಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News