ಎಲ್ಲವೂ ಸುಗಮವಾಗಿ ನಡೆಯತೊಡಗಿದಾಗ ಹಳೆಯ ಪೀಳಿಗೆ ಪಕ್ಕಕ್ಕೆ ಸರಿಯಬೇಕು: ಸಚಿವ ನಿತಿನ್ ಗಡ್ಕರಿ
photo: PTI
ನಾಗ್ಪುರ (ಮಹಾರಾಷ್ಟ್ರ),ಜ.18: ಎಲ್ಲವೂ ಸುಗಮವಾಗಿ ನಡೆಯಲು ಆರಂಭಿಸಿದಾಗ ಹೊಸ ಪೀಳಿಗೆಯು ಪ್ರಮುಖ ಜವಾಬ್ದಾರಿಗಳನ್ನು ವಹಿಸಿಕೊಳ್ಳಬೇಕು ಮತ್ತು ಹಳೆಯ ಪೀಳಿಗೆಯು ಪಕ್ಕಕ್ಕೆ ಸರಿಯಬೇಕು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿಯವರು ರವಿವಾರ ಹೇಳಿದರು.
ತನ್ನದೇ ಪರಿಕಲ್ಪನೆಯ ಮತ್ತು ಕೈಗಾರಿಕಾ ಅಭಿವೃದ್ಧಿ ಸಂಘದ (ಎಐಡಿ) ಅಧ್ಯಕ್ಷ ಆಶಿಷ್ ಕಾಳೆ ಆಯೋಜನೆಯ ಅಡ್ವಾಂಟೇಜ್ ವಿದರ್ಭ-ಖಾಸದಾರ್ ಔದ್ಯೋಗಿಕ ಮಹೋತ್ಸವದ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಗಡ್ಕರಿ, ‘ಕಾಳೆಯವರು ಅಡ್ವಾಂಟೇಜ್ ವಿದರ್ಭ ಉಪಕ್ರಮದಲ್ಲಿ ಯುವಪೀಳಿಗೆಯನ್ನು ತೊಡಗಿಸಿಕೊಂಡಿದ್ದಾರೆ. ಕ್ರಮೇಣ ಪೀಳಿಗೆಯೂ ಬದಲಾಗಬೇಕು ಎನ್ನುವುದು ನನ್ನ ನಂಬಿಕೆಯಾಗಿದೆ. ಕಾಳೆಯವರ ತಂದೆ ನನ್ನ ಸ್ನೇಹಿತರು. ನಾವು ಈಗ ನಿಧಾನವಾಗಿ ನಿವೃತ್ತರಾಗಬೇಕು ಮತ್ತು ಜವಾಬ್ದಾರಿಗಳನ್ನು ಯುವ ಪೀಳಿಗೆಗೆ ಹಸ್ತಾಂತರಿಸಬೇಕು. ಎಲ್ಲವೂ ಸುಸೂತ್ರವಾಗಿ ನಡೆಯತೊಡಗಿದಾಗ ನಾವು ಹಿಂದೆ ಸರಿಯಬೇಕು ಮತ್ತು ಬೇರೆ ಏನಾದರೂ ಕೆಲಸದಲ್ಲಿ ತೊಡಗಿಕೊಳ್ಳಬೇಕು ’ಎಂದು ಹೇಳಿದರು.
ಇದು ಅಡ್ವಾಂಟೇಜ್ ವಿದರ್ಭ ಪ್ರದರ್ಶನದ ಮೂರನೇ ವರ್ಷವಾಗಿದ್ದು,ಫೆ.6ರಿಂದ 8ರವರೆಗೆ ನಾಗ್ಪುರದಲ್ಲಿ ನಡೆಯಲಿದೆ ಎಂದು ಎಐಡಿಯ ಮುಖ್ಯ ಮಾರ್ಗದರ್ಶಕರೂ ಆಗಿರುವ ಗಡ್ಕರಿ ತಿಳಿಸಿದರು.
ವಿದರ್ಭ ಪ್ರದೇಶದಲ್ಲಿ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಅತ್ಯುತ್ತಮ ಉದ್ಯಮಿಗಳಿದ್ದಾರೆ ಎಂದು ಹೇಳಿದ ಅವರು,ವಿದರ್ಭವನ್ನು ಭಾರತೀಯ ಕೈಗಾರಿಕಾ ರಂಗದಲ್ಲಿ ಪ್ರಬಲ ಮತ್ತು ಉದಯೋನ್ಮುಖ ಬೆಳವಣಿಗೆ ಕೇಂದ್ರವನ್ನಾಗಿ ಮಾಡುವುದು ಮಹೋತ್ಸವದ ಉದ್ದೇಶವಾಗಿದೆ ಎಂದರು.
ಯಾವುದೇ ಪ್ರದೇಶದ ಅಭಿವೃದ್ಧಿಯಲ್ಲಿ ಕೈಗಾರಿಕಾ, ಕೃಷಿ ಮತ್ತು ಸಂಬಂಧಿತ ಕ್ಷೇತ್ರಗಳು ಹಾಗೂ ಸೇವಾ ಕ್ಷೇತ್ರದ ಮಹತ್ವವನ್ನೂ ಗಡ್ಕರಿ ಒತ್ತಿ ಹೇಳಿದರು.