ಬಿಎಸ್‌ಎಫ್ ಯೋಧ ಪೂರ್ಣಂ ಸಾಹು ಬಿಡುಗಡೆ ಯಾವಾಗ?: ಟ್ರಂಪ್‌ಗೆ ಕಾಂಗ್ರೆಸ್ ಪ್ರಶ್ನೆ
ಪವನ ಖೇರಾ | PTI
ಹೊಸದಿಲ್ಲಿ: ಭಾರತ ಮತ್ತು ಪಾಕಿಸ್ತಾನ ನಡುವೆ ಕದನ ವಿರಾಮದ ಹೆಗ್ಗಳಿಕೆಯನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪಡೆದುಕೊಳ್ಳುತ್ತಿರುವ ಕುರಿತು ಕೋಲಾಹಲದ ನಡುವೆಯೇ ಕಾಂಗ್ರೆಸ್ ನಾಯಕ ಪವನ ಖೇರಾ ಎಕ್ಸ್ ಪೋಸ್ಟ್‌ನಲ್ಲಿ ಟ್ರಂಪ್ ಅವರನ್ನು ಟ್ಯಾಗ್ ಮಾಡಿ ‘ಪಾಕಿಸ್ತಾನದ ಬಂಧನದಲ್ಲಿರುವ ನಮ್ಮ ಬಿಎಸ್‌ಎಫ್ ಯೋಧ ಪೂರ್ಣಂ ಸಾಹು ಅವರನ್ನು ಯಾವಾಗ ಬಿಡುಗಡೆ ಮಾಡಲಾಗುತ್ತದೆ?’ ಎಂದು ಪ್ರಶ್ನಿಸಿದ್ದಾರೆ.
ಭಾರತ ಮತ್ತು ಪಾಕಿಸ್ತಾನ ನಡುವಿನ ಕದನ ವಿರಾಮ ಘೋಷಣೆಯನ್ನು ಪ್ರಧಾನಿ ನರೇಂದ್ರ ಮೋದಿಯವರ ಕಚೇರಿಯ ಬದಲು ಅಮೆರಿಕದ ಅಧ್ಯಕ್ಷರು ಮಾಡಿದ್ದೇಕೆ ಎಂದು ಪ್ರತಿಪಕ್ಷಗಳು ಪ್ರಶ್ನಿಸಿರುವಾಗಲೇ ಟ್ರಂಪ್ ವಿರುದ್ಧ ಈ ವ್ಯಂಗ್ಯಬಾಣ ಹೊರಬಿದ್ದಿದೆ.
ಎ.23ರಂದು ಸಾಹು ಪಂಜಾಬಿನ ಫಿರೋಜ್‌ಪುರ ಸಮೀಪದ ಅಂತರರಾಷ್ಟ್ರೀಯ ಗಡಿಯನ್ನು ಅನುದ್ದಿಷ್ಟವಾಗಿ ದಾಟಿದ ಬಳಿಕ ಪಾಕಿಸ್ತಾನಿ ರೇಂಜರ್‌ಗಳು ಅವರನ್ನು ಬಂಧಿಸಿದ್ದಾರೆ. ವರದಿಗಳ ಪ್ರಕಾರ ಸಾಹು ಆಕಸ್ಮಿಕವಾಗಿ ಪಾಕಿಸ್ತಾನದ ಭೂಪ್ರದೇಶವನ್ನು ಪ್ರವೇಶಿಸಿದ್ದರು.
ಇದಕ್ಕೂ ಮೊದಲು ಪ.ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರೂ ಸಾಹು ವಾಪಸಾತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಟಿಎಂಸಿ ನಾಯಕ ಕಲ್ಯಾಣ ಬ್ಯಾನರ್ಜಿಯವರು ಸಾಹು ಕುಟುಂಬ ಸದಸ್ಯರ ಜೊತೆ ಸಂಪರ್ಕದಲ್ಲಿದ್ದಾರೆ ಎಂದು ತಿಳಿಸಿದ್ದರು.