ಉತ್ತಮ ಹಾಸ್ಯ ಯಾವುದೆಂದು ಚರ್ಚಿಸುವಾಗ ನೈಜ ಪತ್ರಿಕೋದ್ಯಮದ ಬಗ್ಗೆಯೂ ಚರ್ಚೆ ನಡೆಯಬೇಕು: ಕಾಮಿಡಿಯನ್ ವೀರ್ ದಾಸ್
ವೀರ್ ದಾಸ್ (Photo credit: instagram)
ಹೊಸದಿಲ್ಲಿ: ಉತ್ತಮ ಹಾಸ್ಯ ಯಾವುದು ಎಂಬುದರ ಕುರಿತು ಚರ್ಚೆ ನಡೆಯುವಾಗ ನೈಜ ಪತ್ರಿಕೋದ್ಯಮ ಯಾವುದು ಎಂಬ ಬಗ್ಗೆಯೂ ಚರ್ಚೆ ನಡೆಸಬೇಕು ಎಂದು ನಟ, ಕಾಮಿಡಿಯನ್ ವೀರ್ ದಾಸ್ ಹೇಳಿದ್ದಾರೆ.
ಈ ಕುರಿತು ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿರುವ ವೀರ್ ದಾಸ್, ಯೂಟ್ಯೂಬರ್ ರಣವೀರ್ ಅಲಹಾಬಾದಿಯ ಅವರು "ಇಂಡಿಯಾಸ್ ಗಾಟ್ ಲೇಟೆಂಟ್" ಕಾರ್ಯಕ್ರಮದಲ್ಲಿ ಹೇಳಿದ ಹೇಳಿಕೆ ಬಗ್ಗೆ ಹೆಚ್ಚಿನ ಸುದ್ದಿಗಳನ್ನು ಪ್ರಸಾರ ಮಾಡಿ ವಿವಾದವನ್ನಾಗಿಸಿದ್ದಕ್ಕೆ ಮಾಧ್ಯಮಗಳನ್ನು ಟೀಕಿಸಿದ್ದಾರೆ.
"ನಾವು ಅಳಿವಿನಂಚಿನಲ್ಲಿರುವ ಅಪ್ರಸ್ತುತ ಮುಖ್ಯವಾಹಿನಿಯ ಮಾಧ್ಯಮ ನಿರೂಪಕರ ಗುಂಪನ್ನು ನೋಡುತ್ತಿದ್ದೇವೆ, ದೀರ್ಘ ಸಂದರ್ಶನಗಳು, ಮಿಲಿಯನ್ ಗಿಂತಲೂ ಅಧಿಕ ವೀಕ್ಷಣೆಗಳನ್ನು ಹೊಂದುವ ಮೂಲಕ ಹೆಚ್ಚು ಪ್ರಭಾವ ಬೀರುವ ಹೊಸ ಮಾಧ್ಯಮವನ್ನು ವಿಶ್ಲೇಷಿಸಲು ಅವರು ಒಟ್ಟಾಗಿ ಸೇರುತ್ತಿದ್ದಾರೆ. ನೀವು ಹೊಸ ಮಾಧ್ಯಮವನ್ನು ಇಷ್ಟಪಡುತ್ತೀರೋ ಇಲ್ಲವೋ ಎಂಬುದು ಅಪ್ರಸ್ತುತವಾಗಿದೆ" ಎಂದು ಹೇಳಿದ್ದಾರೆ.
"ಇಲ್ಲಿ ನಡೆಯುತ್ತಿರುವುದು ಕೂಡ ಅಷ್ಟೇ. ಒಳ್ಳೆಯ ಹಾಸ್ಯ ಯಾವುದು ಎಂದು ನಾವು ಚರ್ಚಿಸುತ್ತಿರುವಾಗ, ದಯವಿಟ್ಟು ಒಳ್ಳೆಯ ಪತ್ರಿಕೋದ್ಯಮ ಯಾವುದು? ಅವರು ಮಾಡಬೇಕಾದ ಸುದ್ದಿ, ಅವರು ಕೇಳಬೇಕಾದ ಪ್ರಶ್ನೆಗಳು, ಮತ್ತು ಅವರು ಯಾರನ್ನು ಕೇಳಬೇಕು ಎಂಬ ಬಗ್ಗೆಯೂ ಚರ್ಚೆ ನಡೆಸಬೇಕು" ಎಂದು ವೀರ್ ದಾಸ್ ಹೇಳಿದ್ದಾರೆ.