ವಿಶಲ್‌ಬ್ಲೋವರ್ ಪ್ರಕರಣ | ಹಿಂದೆ ಸರಿದ ಮತ್ತಿಬ್ಬರು; ವಿಚಾರಣೆಗೆ ನಿರಾಕರಿಸಿದ ನ್ಯಾಯಾಧೀಶರ ಸಂಖ್ಯೆ 13ಕ್ಕೇರಿಕೆ
ಡೆಹ್ರಾಡೂನ್(ಉತ್ತರಾಖಂಡ): ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿ(ಸಿಎಟಿ)ಯ ಇಬ್ಬರು ನ್ಯಾಯಾಧೀಶರಾದ ಹರ್ವಿಂದರ್ ಕೌರ್ ಒಬೆರಾಯ್ ಮತ್ತು ಬಿ.ಆನಂದ ಅವರು ಐಎಫ್‌ಎಸ್ ಅಧಿಕಾರಿ ಸಂಜೀವ ಚತುರ್ವೇದಿ ಅವರಿಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆಯಿಂದ ಹಿಂದಕ್ಕೆ ಸರಿದಿದ್ದಾರೆ. ಇದರೊಂದಿಗೆ ಚತುರ್ವೇದಿಯವರ ಪ್ರಕರಣಗಳ ವಿಚಾರಣೆಗೆ ನಿರಾಕರಿಸಿದ ನ್ಯಾಯಾಧೀಶರ ಒಟ್ಟು ಸಂಖ್ಯೆ 13ಕ್ಕೇರಿದ್ದು, ಇದು ಒಂದು ರೀತಿಯಲ್ಲಿ ದಾಖಲೆಯಾಗಿದೆ ಎನ್ನುತ್ತಾರೆ ಕಾನೂನು ತಜ್ಞರು.
ಈವರೆಗೆ ಸರ್ವೋಚ್ಛ ನ್ಯಾಯಾಲಯದ ಇಬ್ಬರು ಮತ್ತು ಉತ್ತರಾಖಂಡ ಉಚ್ಛ ನ್ಯಾಯಾಲಯದ ಇಬ್ಬರು ನ್ಯಾಯಾಧೀಶರು, ಸಿಎಟಿ ಅಧ್ಯಕ್ಷರು,ಶಿಮ್ಲಾ ವಿಚಾರಣಾ ನ್ಯಾಯಾಲಯದ ನ್ಯಾಯಾಧೀಶರು,ದಿಲ್ಲಿ ಮತ್ತು ಅಲಹಾಬಾದ್ ಪೀಠಗಳ ಏಳು ಸಿಎಟಿ ನ್ಯಾಯಾಧೀಶರು ಚತುರ್ವೇದಿಯವರ ಪ್ರಕರಣಗಳ ವಿಚಾರಣೆಯಿಂದ ದೂರವುಳಿದಿದ್ದಾರೆ.
ನ್ಯಾಯಮೂರ್ತಿಗಳಾದ ಒಬೆರಾಯ್ ಮತ್ತು ಆನಂದ ಅವರ ಸಿಎಟಿ ಪೀಠವು ತನ್ನ ಫೆ.19ರ ಇತ್ತೀಚಿನ ಆದೇಶದಲ್ಲಿ, ನಿರ್ಧಿಷ್ಟ ಕಾರಣಗಳನ್ನು ಒದಗಿಸದೆ ಚತುರ್ವೇದಿಯವರ ಪ್ರಕರಣಗಳನ್ನು ಇನ್ನು ಮುಂದೆ ಪಟ್ಟಿ ಮಾಡದಂತೆ ರಿಜಿಸ್ಟ್ರಿಗೆ ನಿರ್ದೇಶ ನೀಡಿದೆ.
ಪ್ರಕರಣವು ತನ್ನ ಕಕ್ಷಿದಾರರ ಮೌಲ್ಯಮಾಪನ ವರದಿಗೆ ಸಂಬಂಧಿಸಿದೆ ಎಂದು ಚತುರ್ವೇದಿ ಪರ ವಕೀಲ ಸುದರ್ಶನ ಗೋಯೆಲ್ ತಿಳಿಸಿದರು.
ಫೆಬ್ರವರಿ 2024ರಲ್ಲಿ ಉತ್ತರಾಖಂಡ ಉಚ್ಛ ನ್ಯಾಯಾಲಯದ ನ್ಯಾಯಾಧೀಶರು ಚತುರ್ವೇದಿಯವರ ಪ್ರಭಾರ ನಿಯೋಜನೆ ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿದಿದ್ದರು. ಗೋಯೆಲ್ ಪ್ರಕಾರ ಅಧಿಕಾರಿಯ ಸೇವಾ ವಿಷಯಗಳನ್ನು ನೈನಿತಾಲ್ ಸಂಚಾರಿ ಪೀಠದಲ್ಲಿ ಪ್ರತ್ಯೇಕವಾಗಿ ನಡೆಸಬೇಕು ಎಂದು 2018ರಲ್ಲಿ ಉಚ್ಛ ನ್ಯಾಯಾಲಯವು ನಿರ್ದೇಶನ ನೀಡಿದ್ದು,ಇದನ್ನು ಸರ್ವೋಚ್ಛ ನ್ಯಾಯಾಲಯವು ಎತ್ತಿ ಹಿಡಿದಿತ್ತು.
2021ರಲ್ಲಿ ಉಚ್ಛ ನ್ಯಾಯಾಲಯವು ತನ್ನ ನಿಲುವನ್ನು ಪುನರುಚ್ಚರಿಸಿತ್ತು. ಆದರೆ ಕೇಂದ್ರವು ಅದನ್ನು ಪ್ರಶ್ನಿಸಿತ್ತು. 2023ರ ಮಾರ್ಚ್‌ನಲ್ಲಿ ಸರ್ವೋಚ್ಛ ನ್ಯಾಯಾಲಯದ ವಿಭಾಗೀಯ ಪೀಠವು ವಿಷಯವನ್ನು ವಿಸ್ತೃತ ಪೀಠಕ್ಕೆ ಉಲ್ಲೇಖಿಸಿತ್ತು ಎಂದು ಗೋಯೆಲ್ ತಿಳಿಸಿದರು.
2013,ನವಂಬರ್‌ನಲ್ಲಿ ಸರ್ವೋಚ್ಛ ನ್ಯಾಯಾಲಯದ ಆಗಿನ ನ್ಯಾಯಾಧೀಶ ರಂಜನ್ ಗೊಗೊಯಿ ಅವರು ಹರ್ಯಾಣದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ, ಇತರ ರಾಜಕೀಯ ನಾಯಕರು ಮ್ತು ಅಧಿಕಾರಿಗಳನ್ನು ಒಳಗೊಂಡ ಭ್ರಷ್ಟಾಷಾರ ಮತ್ತು ಕಿರುಕುಳ ಆರೋಪಗಳ ಪ್ರಕರಣಗಳ ಬಗ್ಗೆ ಸಿಬಿಐ ತನಿಖೆಯನ್ನು ಕೋರಿ ಚತುರ್ವೇದಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯಿಂದ ಹಿಂದೆ ಸರಿದಾಗಿನಿಂದ ನಿರಾಕರಣೆಯ ಈ ಪ್ರವೃತ್ತಿ ಆರಂಭಗೊಂಡಿತ್ತು. ಆಗಸ್ಟ್ 2016ರಲ್ಲಿ ಅಂದಿನ ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶ ಯು.ಯು.ಲಲಿತ್ ಅವರು ಈ ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿದಿದ್ದರು.
2007ರಲ್ಲಿ ಹರ್ಯಾಣ ಅರಣ್ಯ ಇಲಾಖೆಯಲ್ಲಿನ ಹಗರಣಗಳನ್ನು ಬಹಿರಂಗಗೊಳಿಸುವ ಮುನ್ನ ಚತುರ್ವೇದಿ ಸುದ್ದಿಯಾಗಿದ್ದರು. ನಂತರ ಐದು ವರ್ಷಗಳಲ್ಲಿ 12 ಸಲ ಅವರು ವರ್ಗಾವಣೆಗೊಂಡಿದ್ದರು. ತನ್ನನ್ನು ಸೇವೆಯಿಂದ ಅಮಾನತುಗೊಳಿಸಿದಾಗ ಚತುರ್ವೇದಿ ರಾಷ್ಟ್ರಪತಿಗಳಿಗೆ ದೂರು ಸಲ್ಲಿಸಿದ್ದರು. ನಂತರ ಹರ್ಯಾಣ ಸರಕಾರವು ಅವರ ಅಮಾನತು ಆದೇಶವನ್ನು ಹಿಂದೆಗೆದುಕೊಂಡಿತ್ತು.
2012ರಲ್ಲಿ ‘ವಿಶಲ್‌ಬ್ಲೋವರ್’ ಎಂದು ಹೆಸರಿಸಲ್ಪಟ್ಟಿದ್ದ ಚತುರ್ವೇದಿ ರೇಮನ್ ಮ್ಯಾಗ್ಸೆಸೆ ಪ್ರಶಸ್ತಿಗೂ ಭಾಜನರಾಗಿದ್ದಾರೆ.