ತುರ್ಕಿಯೆ ಮಹಿಳೆಯರಿಗೆ ಅವಹೇಳನ ಮಾಡಿ ಬಂಧನಕ್ಕೊಳಗಾದ ಭಾರತೀಯ ಯೂಟ್ಯೂಬರ್
Photo credit: Malik SD Khan/Instagram
ಅಂಕಾರಾ: ತುರ್ಕಿಯಾದ ಮಹಿಳೆಯರನ್ನು ಗುರಿಯಾಗಿಸಿಕೊಂಡು ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ಭಾರೀ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಭಾರತೀಯ ಯೂಟ್ಯೂಬರ್ ಅನ್ನು ತುರ್ಕಿಯಾದಲ್ಲಿ ಬಂಧಿಸಲಾಗಿದೆ ಎಂದು ವರದಿಯಾಗಿದೆ.
'ಮಲಿಕ್ ಸ್ವಾಶ್‌ಬಕ್ಲರ್' ಎಂದೇ ಪರಿಚಿತರಾಗಿರುವ ಯೂಟ್ಯೂಬರ್ ಮಲಿಕ್ ಎಸ್‌ಡಿ ಖಾನ್ ತುರ್ಕಿಯಾದ ಮಹಿಳೆಯರ ಬಗ್ಗೆ ಅವಹೇಳನಾಕಾರಿ ಹೇಳಿಕೆ ನೀಡುತ್ತಿರುವುದು ಕಂಡು ಬಂದ ಬೆನ್ನಲ್ಲೇ ಟೀಕೆಗೆ ಗುರಿಯಾದರು. ಇದರ ಬೆನ್ನಲ್ಲೇ ಯೂಟ್ಯೂಬ್ ಮತ್ತು ಇನ್ಸ್ಟಾಗ್ರಾಮ್‌ನಿಂದ ಎಲ್ಲಾ ವೀಡಿಯೊಗಳನ್ನು ಡಿಲಿಟ್ ಮಾಡಿ ಕ್ಷಮೆಯಾಚಿಸುವ ಪೋಸ್ಟ್‌ಗಳನ್ನು ಅಪ್ಲೋಡ್ ಮಾಡಿದ್ದರು.
ಅವನು ತನ್ನ ವೀಡಿಯೊಗಳಲ್ಲಿ ಸ್ಥಳೀಯ ಮಹಿಳೆಯರ ಬಗ್ಗೆ ಅವಹೇಳನಕಾರಿ ಪದಗಳನ್ನು ಬಳಕೆ ಮಾಡಿದ್ದಾನೆ. ವೀಡಿಯೊವೊಂದರಲ್ಲಿ ತುರ್ಕಿಯೆ ಗೈಡ್ ಅನ್ನು ಅತ್ಯಾಚಾರ ಮಾಡಬೇಕೆ ಎಂದು ಪ್ರೇಕ್ಷಕರನ್ನು ಕೇಳುವುದು ಕಂಡು ಬಂದಿದೆ.
ಪೋಸ್ಟ್ ವಿವಾದವಾಗುತ್ತಿದ್ದಂತೆ ಮಲಿಕ್ ಎಸ್‌ಡಿ ಖಾನ್ ಇನ್ಸ್ಟಾಗ್ರಾಮ್ ನಲ್ಲಿ ಕ್ಷಮೆಯಾಚಿಸಿದ್ದಾನೆ.
ʼನಾನು ಹೃದಯಾಂತರಾಳದಿಂದ ಕ್ಷಮೆಯಾಚಿಸುತ್ತೇನೆ. ನಾನು ಯಾರನ್ನೂ ನೋಯಿಸಲು ಅಥವಾ ಅಸಮಾಧಾನಗೊಳಿಸಲು ಎಂದಿಗೂ ಉದ್ದೇಶಿಸಿರಲಿಲ್ಲ. ನನ್ನ ಮಾತುಗಳು ಅಥವಾ ಕಾರ್ಯಗಳು ಯಾರಿಗಾದರೂ ನೋವುಂಟುಮಾಡಿದರೆ ಅದು ಸಂಪೂರ್ಣವಾಗಿ ಉದ್ದೇಶಪೂರ್ವಕವಲ್ಲ ಎಂದು ದಯವಿಟ್ಟು ತಿಳಿದುಕೊಳ್ಳಿ. ನಾನು ಜನರ ಅಸಮಾಧಾನಕ್ಕೆ ಕಾರಣವಾಗಿದ್ದೇನೆ ಎಂದು ತಿಳಿದು ನನಗೆ ನಿಜವಾಗಿಯೂ ನೋವುಂಟಾಗಿದೆ. ನಾನು ನನ್ನನ್ನು ಪ್ರಶ್ನಿಸಿಕೊಂಡೆ ಮತ್ತು ಇಂದಿನಿಂದ ಹೆಚ್ಚು ಜಾಗರೂಕರಾಗಿರುತ್ತೇನೆ ಎಂದು ನಾನು ಭರವಸೆ ನೀಡುತ್ತೇನೆ. ಗೌರವ ಮತ್ತು ಪ್ರೀತಿಯಿಂದ ನಾನು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆʼ ಎಂದು ಹೇಳಿದರು.
ಇದಲ್ಲದೆ ಸಾಮಾಜಿಕ ಜಾಲತಾಣಗಳ ಖಾತೆಯಿಂದ ವಿವಾದಿತ ವೀಡಿಯೊವನ್ನು ಮಲಿಕ್ ಡಿಲಿಟ್ ಮಾಡಿದ್ದಾರೆ. ಇನ್ಸ್ಟಾಗ್ರಾಮ್ ಖಾತೆಯ ಬಯೋದಲ್ಲಿ ನನಗೆ ನನ್ನ ತಪ್ಪಿನ ಬಗ್ಗೆ ಅರಿವಾಗಿದೆ. ಕ್ಷಮೆಯಿರಲಿ ತುರ್ಕಿಯೆ ಎಂದು ಬರೆದುಕೊಂಡಿದ್ದಾರೆ.