×
Ad

ಮಧ್ಯಪ್ರದೇಶದಲ್ಲಿ ಮಕ್ಕಳನ್ನು ಬಲಿ ಪಡೆದ ನಂತರ ಮೂರು ಕೆಮ್ಮಿನ ಸಿರಪ್‌ಗಳ ವಿರುದ್ಧ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ

Update: 2025-10-14 11:46 IST

Photo credit: ANI

ಹೊಸದಿಲ್ಲಿ: ಮಧ್ಯಪ್ರದೇಶದಲ್ಲಿ ಕಲಬೆರಕೆಯಾದ ಕೆಮ್ಮಿನ ಸಿರಪ್‌ ಔಷಧಿ ತೆಗೆದುಕೊಂಡಿದ್ದ ಅನೇಕ ಮಕ್ಕಳ ಸಾವಿನ ಪ್ರಕರಣದ ಹಿನ್ನೆಲೆಯಲ್ಲಿ, ವಿಶ್ವ ಆರೋಗ್ಯ ಸಂಸ್ಥೆ (WHO) ಭಾರತದಲ್ಲಿ ತಯಾರಿಸಲಾದ ಮೂರು ಕೆಮ್ಮಿನ ಸಿರಪ್‌ಗಳ ವಿರುದ್ಧ ಗಂಭೀರ ಎಚ್ಚರಿಕೆ ನೀಡಿದೆ.

WHO ತನ್ನ ಪ್ರಕಟನೆಯಲ್ಲಿ ಈ ಸಿರಪ್‌ಗಳು ಬೇರೆ ದೇಶಗಳಲ್ಲಿ ಪತ್ತೆಯಾಗಿದ್ದರೆ ತಕ್ಷಣ ವರದಿ ಮಾಡುವಂತೆ ರಾಷ್ಟ್ರಗಳ ಆರೋಗ್ಯ ಅಧಿಕಾರಿಗಳಿಗೆ ಸೂಚಿಸಿದೆ.

WHO ಎಚ್ಚರಿಕೆ ನೀಡಿರುವ ಪಟ್ಟಿಯಲ್ಲಿ ತಮಿಳುನಾಡು ಮೂಲದ ಶ್ರೀಸನ್ ಫಾರ್ಮಾಸಿಟಿಕಲ್ಸ್ ಕಂಪೆನಿಯ ಕೋಲ್ಡ್ರಿಫ್, ರೆಡ್ನೆಕ್ಸ್ ಫಾರ್ಮಾಸಿಟಿಕಲ್ಸ್ ಸಂಸ್ಥೆಯ ರೆಸ್ಪಿಫ್ರೆಶ್ TR ಹಾಗೂ ಶೇಪ್ ಫಾರ್ಮಾ ಕಂಪೆನಿಯ ರಿಲೈಫ್ ಸಿರಪ್‌ ಗಳ ನಿರ್ದಿಷ್ಟ ಬ್ಯಾಚ್‌ಗಳು ಸೇರಿವೆ.

ಮಧ್ಯಪ್ರದೇಶದ ಚಿಂದ್ವಾರಾ ಜಿಲ್ಲೆಯ ಪರಾಸಿಯಾ ಗ್ರಾಮದಲ್ಲಿ ಕೆಮ್ಮಿನ ಔಷಧ ಸೇವಿಸಿ ಕನಿಷ್ಠ 22 ಮಕ್ಕಳು ಮೃತಪಟ್ಟಿದ್ದರು.

ಪ್ರಯೋಗಾಲಯ ಪರೀಕ್ಷೆಯಲ್ಲಿ ಈ ಸಿರಪ್‌ ಗಳಲ್ಲಿ ಅತ್ಯಂತ ವಿಷಕಾರಿ ಡೈಥಿಲೀನ್ ಗ್ಲೈಕೋಲ್ (DEG) ಎಂಬ ರಾಸಾಯನಿಕ ಪತ್ತೆಯಾಗಿದ್ದು, ಇದು ಸಾಮೂಹಿಕ ವಿಷಪ್ರಾಶನದಂತೆಯೇ ಮಾರಕ ಪರಿಣಾಮ ಉಂಟುಮಾಡುತ್ತದೆ ಎಂದು ವರದಿಯಾಗಿದೆ.

ಈ ಹಿನ್ನೆಲೆಯಲ್ಲಿ ಶ್ರೀಸನ್ ಫಾರ್ಮಾಸಿಟಿಕಲ್ಸ್ ಸಂಸ್ಥೆಯ ಉತ್ಪಾದನಾ ಪರವಾನಗಿಯನ್ನು ತಮಿಳುನಾಡು ಸರ್ಕಾರ ಸಂಪೂರ್ಣವಾಗಿ ರದ್ದುಗೊಳಿಸಿದೆ.

WHO ಈ ಸಿರಪ್‌ಗಳು “ಗಂಭೀರ ಹಾಗೂ ಮಾರಣಾಂತಿಕವಾಗುವ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು” ಎಂದು ಎಚ್ಚರಿಕೆ ನೀಡಿದೆ.

ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (CDSCO) WHOಗೆ ಸಲ್ಲಿಸಿದ ವರದಿಯ ಪ್ರಕಾರ, ಈ ಸಿರಪ್‌ ಗಳಲ್ಲಿ ಅನುಮತಿಸಲಾದ ಪ್ರಮಾಣಕ್ಕಿಂತ 500 ಪಟ್ಟು ಹೆಚ್ಚು ಡೈಥಿಲೀನ್ ಗ್ಲೈಕೋಲ್ ಪತ್ತೆಯಾಗಿದೆ. ಇದರಿಂದ ಕೆಮ್ಮಿನ ಸಿರಪ್ ಔಷಧ ಸೇವಿಸಿ ಐದು ವರ್ಷದೊಳಗಿನ ಮಕ್ಕಳು ಮೃತಪಟ್ಟಿದ್ದಾರೆ ಎಂದು ವರದಿ ದೃಢಪಡಿಸಿದೆ.

ಈ ಕುರಿತು ಪ್ರತಿಕ್ರಿಯಿಸಿದ, ಭಾರತೀಯ ಆರೋಗ್ಯ ಸಚಿವಾಲಯವು ದೋಷಿತ ಎಂದು ಗುರುತಿಸಲಾದ ಯಾವುದೇ ಸಿರಪ್‌ ಗಳನ್ನು ವಿದೇಶಗಳಿಗೆ ರಫ್ತು ಮಾಡಿಲ್ಲವೆಂದು ಸ್ಪಷ್ಟಪಡಿಸಿದ್ದು, ಅಮೆರಿಕ ಕೂಡ ಭಾರತದಿಂದ ಇಂತಹ ಸಿರಪ್‌ಗಳನ್ನು ಆಮದು ಮಾಡಿಕೊಂಡಿಲ್ಲ ಎಂದು ದೃಢಪಡಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News