×
Ad

ನೇಪಾಳದ ಬಂಡಾಯಕ್ಕೆ 'ಹಿಂದೂ ರಾಷ್ಟ್ರ'ದ ಬಣ್ಣ: 'ದೈನಿಕ್ ಜಾಗರಣ್' ಸುಳ್ಳು ಸುದ್ದಿಗೆ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ

Update: 2025-09-14 11:35 IST

Photo:X/@ravish_journo

ಹೊಸದಿಲ್ಲಿ: ಸೆಪ್ಟೆಂಬರ್ 11 ರಂದು, ನೇಪಾಳದಲ್ಲಿ ನಡೆದ ಯುವಜನರ ಬೃಹತ್ ಪ್ರತಿಭಟನೆ ಮತ್ತು ಅಲ್ಲಿನ ಸರ್ಕಾರದ ಪತನದ ಕುರಿತು ʼದೈನಿಕ್ ಜಾಗರಣ್ʼ ತನ್ನ ಮುಖಪುಟದಲ್ಲಿ ಪ್ರಕಟಿಸಿದ ವರದಿ, ಇದೀಗ 'ಸುಳ್ಳು ಸುದ್ದಿ' ಎಂಬ ಆರೋಪದಡಿ ತೀವ್ರ ವಿವಾದಕ್ಕೆ ಗುರಿಯಾಗಿದೆ.

ನೇಪಾಳದ ಯುವಜನರು 'ಹಿಂದೂ ರಾಷ್ಟ್ರ'ಕ್ಕಾಗಿ ಬೀದಿಗಿಳಿದಿದ್ದಾರೆ ಎಂದು ಜಾಗರಣ್ ಬಿಂಬಿಸಿದ್ದರೆ, ಖ್ಯಾತ ಪತ್ರಕರ್ತರು, ಯೂಟ್ಯೂಬರ್‌ಗಳು ಮತ್ತು ಸಾಮಾಜಿಕ ಜಾಲತಾಣಗಳ ಬಳಕೆದಾರರು ಇದನ್ನು ಸಂಪೂರ್ಣವಾಗಿ ಕಪೋಲಕಲ್ಪಿತ ಮತ್ತು ಅಪಾಯಕಾರಿ ವರದಿಗಾರಿಕೆ ಎಂದು ಜರಿಯುತ್ತಿದ್ದಾರೆ.

ಸೆಪ್ಟೆಂಬರ್ 11 ರಂದು ʼದೈನಿಕ್ ಜಾಗರಣ್ʼ ತನ್ನ ಮುಖಪುಟದಲ್ಲಿ, ನೇಪಾಳದಲ್ಲಿ ಪ್ರಧಾನಿ ಮತ್ತು ಸಚಿವರ ರಾಜೀನಾಮೆಗೆ ಕಾರಣವಾದ 'ಜೆನ್-ಝಿ’ (Gen Z) ಚಳುವಳಿಯ ಮುಖ್ಯ ಬೇಡಿಕೆ 'ಹಿಂದೂ ರಾಷ್ಟ್ರ'ವನ್ನು ಮರುಸ್ಥಾಪಿಸುವುದಾಗಿದೆ ಎಂದು ವರದಿ ಮಾಡಿತ್ತು.

ನೇಪಾಳದ ಆಂತರಿಕ ಬಿಕ್ಕಟ್ಟಿಗೆ ಧಾರ್ಮಿಕ ಆಯಾಮವನ್ನು ನೀಡಿದ ಈ ವರದಿ ಪ್ರಕಟವಾದ ಕೆಲವೇ ಗಂಟೆಗಳಲ್ಲಿ, ಅದರ ಸತ್ಯಾಸತ್ಯತೆಯ ಬಗ್ಗೆ ಪ್ರಶ್ನೆಗಳು ಏಳಲಾರಂಭಿಸಿದವು. ನೇಪಾಳದ ವಿದ್ಯಮಾನಗಳನ್ನು ಹತ್ತಿರದಿಂದ ಗಮನಿಸುತ್ತಿರುವವರು, ಅಲ್ಲಿನ ಹೋರಾಟ ವ್ಯಾಪಕ ಭ್ರಷ್ಟಾಚಾರ, ನಿರುದ್ಯೋಗ, ನಿರಂಕುಶ ಆಡಳಿತ ಮತ್ತು ಸಾಮಾಜಿಕ ಮಾಧ್ಯಮ ನಿಷೇಧದಂತಹ ವಿಷಯಗಳ ಸುತ್ತ ಕೇಂದ್ರೀಕೃತವಾಗಿದೆಯೇ ಹೊರತು, 'ಹಿಂದೂ ರಾಷ್ಟ್ರ'ದ ಬೇಡಿಕೆ ಅಲ್ಲಿ ಮುನ್ನೆಲೆಯಲ್ಲಿಲ್ಲ ಎಂದು ಪ್ರತಿಪಾದಿಸಿದರು.

ಈ ವರದಿಯನ್ನು ಖಂಡಿಸಿದವರಲ್ಲಿ ಹಿರಿಯ ಪತ್ರಕರ್ತ ರವೀಶ್ ಕುಮಾರ್ ಮತ್ತು ಖ್ಯಾತ ಯೂಟ್ಯೂಬರ್ ಧ್ರುವ್ ರಾಠಿ ಪ್ರಮುಖರು.

ರವೀಶ್ ಕುಮಾರ್ ತಮ್ಮ ಟ್ವೀಟ್‌ನಲ್ಲಿ, "ನೇಪಾಳದಲ್ಲಿ 'ಜೆನ್-ಝಿ' ಯುವಕರು ಹಿಂದೂ ರಾಷ್ಟ್ರಕ್ಕಾಗಿ ಬೇಡಿಕೆ ಇಡುತ್ತಿದ್ದಾರೆ ಎಂಬ ಸುದ್ದಿ ಕೇವಲ 'ಜಾಗರಣ್' ಬಳಿ ಮಾತ್ರ ಇದೆ. ʼದೈನಿಕ್ ಭಾಸ್ಕರ್ʼ ಅಥವಾ ʼಇಂಡಿಯನ್ ಎಕ್ಸ್‌ಪ್ರೆಸ್‌ʼನಂತಹ ಬೇರೆ ಪ್ರಮುಖ ಪತ್ರಿಕೆಗಳ ಮುಖಪುಟದಲ್ಲಿ ಇಷ್ಟು ದೊಡ್ಡ ಬೇಡಿಕೆಯ ಸುದ್ದಿ ಇಲ್ಲ. ನಿಜವಾಗಿಯೂ ಇಂತಹ ಬೇಡಿಕೆ ಇದೆಯೇ ಎಂಬುದನ್ನು ನೇಪಾಳದ ತಜ್ಞರೇ ಹೇಳಬೇಕು" ಎಂದು ಬರೆದು, ಜಾಗರಣ್ ವರದಿಯ ಸತ್ಯಾಸತ್ಯತೆಯನ್ನೇ ಪ್ರಶ್ನಿಸಿದರು.

ಒಂದು ವೇಳೆ ಇದು ನಿಜವಾಗಿದ್ದರೆ, ಬೇರೆ ಯಾವುದೇ ಪ್ರಮುಖ ಇಂಗ್ಲಿಷ್, ಹಿಂದಿ ಮಾಧ್ಯಮ ಇದನ್ನು ಯಾಕೆ ವರದಿ ಮಾಡಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ.

ಮತ್ತೊಂದೆಡೆ, ಧ್ರುವ್ ರಾಠಿ ತಮ್ಮ ವೀಡಿಯೋದಲ್ಲಿ ಇದನ್ನು 'ಮುಖಪುಟದಲ್ಲಿ ಸುಳ್ಳು ಸುದ್ದಿ' ಎಂದು ನೇರವಾಗಿ ಆರೋಪಿಸಿದರು. "ನೇಪಾಳದ ಚಳವಳಿ ಹಿಂದೂ ರಾಷ್ಟ್ರಕ್ಕಾಗಿ ನಡೆಯುತ್ತಿದೆ ಎಂದು ಅಂತರ್ಜಾಲದಲ್ಲಿ ಎಲ್ಲಿಯೂ ವರದಿಯಾಗಿಲ್ಲ. ನೇಪಾಳಿಗಳು ಹಿಂದೂ ರಾಷ್ಟ್ರ ಬೇಕು ಎಂದು ಆಗ್ರಹಿಸಿದ ಹೇಳಿಕೆಯಾಗಲಿ, ಟ್ವೀಟ್ ಆಗಲಿ ಎಲ್ಲೂ ಇಲ್ಲ. ನೇಪಾಳದವರಿಗಿಂತ ಹೆಚ್ಚಾಗಿ, ಭಾರತೀಯ ಬಿಜೆಪಿಗರೆ ನೇಪಾಳದಲ್ಲಿ ಹಿಂದೂ ರಾಷ್ಟ್ರದ ಬಗ್ಗೆ ಮಾತನಾಡುತ್ತಿದ್ದಾರೆ. ತನ್ನ ಮೊದಲ ಪುಟದಲ್ಲೇ ಇಂತಹ ಸ್ಪಷ್ಟ ಸುಳ್ಳುಗಳನ್ನು ಪ್ರಕಟಿಸುವ ಈ ಪತ್ರಿಕೆಯನ್ನು ಓದುವವರೊಂದಿಗೆ ನನ್ನ ವೀಡಿಯೋವನ್ನು ಹಂಚಿಕೊಳ್ಳಿ, ಈ ಸುಳ್ಳು ಸುದ್ದಿ ಹರಡುವ ಪತ್ರಿಕೆ ಖರೀದಿಸಬೇಡಿ" ಎಂದು ಅವರು ತಮ್ಮ ವೀಕ್ಷಕರಲ್ಲಿ ಮನವಿ ಮಾಡಿದರು.

ಈ ಇಬ್ಬರ ಟೀಕೆಗಳ ಬೆನ್ನಲ್ಲೇ, ಸಾಮಾಜಿಕ ಜಾಲತಾಣಗಳಲ್ಲಿ ʼದೈನಿಕ್ ಜಾಗರಣ್ʼ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಹಲವರು, ಇದು ಪತ್ರಿಕೋದ್ಯಮವಲ್ಲ, ಬದಲಿಗೆ ಒಂದು ನಿರ್ದಿಷ್ಟ ಸಿದ್ಧಾಂತವನ್ನು ಪ್ರಚಾರ ಮಾಡುವ ಅಜೆಂಡಾ ಎಂದು ಟೀಕಿಸಿದ್ದಾರೆ.

ಇಷ್ಟೊಂದು ದೊಡ್ಡ ಓದುಗ ಬಳಗವನ್ನು ಹೊಂದಿರುವ ಪತ್ರಿಕೆಯೊಂದು ಇಷ್ಟು ಬೇಜವಾಬ್ದಾರಿಯಿಂದ ವರ್ತಿಸಬಹುದೇ? ನೆರೆಯ ದೇಶದ ಸೂಕ್ಷ್ಮ ವಿಷಯದ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುವುದು ಎಷ್ಟು ಅಪಾಯಕಾರಿ ಎಂಬ ಅರಿವು ಅವರಿಗಿಲ್ಲವೇ? ಎಂದು ಹಲವರು ಪ್ರಶ್ನಿಸಿದ್ದಾರೆ.

ದೈನಿಕ್ ಜಾಗರಣ್ ತನ್ನ ವಿಶ್ವಾಸಾರ್ಹತೆಯನ್ನು ಸಂಪೂರ್ಣವಾಗಿ ಕಳೆದುಕೊಂಡಿದೆ. ಇದು ಕೇವಲ ಒಂದು ತಪ್ಪಲ್ಲ, ಇದೊಂದು ವ್ಯವಸ್ಥಿತ ಪ್ರಚಾರದ ಭಾಗ ಎಂಬಂತಹ ಅಭಿಪ್ರಾಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದವು.

ದೈನಿಕ್ ಜಾಗರಣ್ ಇಂತಹ ಆರೋಪಗಳಿಗೆ ಗುರಿಯಾಗುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಅವರು, ಚುನಾವಣೆಗಳ ಸಂದರ್ಭದಲ್ಲಿ ಪಕ್ಷಪಾತದ ವರದಿಗಳನ್ನು ಪ್ರಕಟಿಸುತ್ತಿದೆ ಎಂದು ಆರೋಪಿಸಿ 'ದೈನಿಕ್ ಜಾಗರಣ್' ಪತ್ರಿಕೆಯನ್ನು ಬಹಿಷ್ಕರಿಸುವಂತೆ ತಮ್ಮ ಕಾರ್ಯಕರ್ತರಿಗೆ ಕರೆ ನೀಡಿದ್ದರು.

ಆ ಸಂದರ್ಭದಲ್ಲೂ ಪತ್ರಿಕೆಯ ನಿಷ್ಪಕ್ಷ ಧೋರಣೆಯ ಬಗ್ಗೆ ದೊಡ್ಡ ಮಟ್ಟದ ಚರ್ಚೆ ನಡೆದಿತ್ತು. ವಿಮರ್ಶಕರ ಪ್ರಕಾರ, ಪತ್ರಿಕೆಯು ನಿರಂತರವಾಗಿ ಆಡಳಿತ ಪಕ್ಷದ ಪರವಾದ ಮತ್ತು ವಿರೋಧ ಪಕ್ಷಗಳ ವಿರುದ್ಧವಾದ ನಿರೂಪಣೆಗಳನ್ನು ಕಟ್ಟಿಕೊಡುತ್ತಾ ಬಂದಿದೆ. ನೇಪಾಳದ ಘಟನೆಯ ವರದಿಯು ಈ ಮಾದರಿಯ ಮತ್ತೊಂದು ಉದಾಹರಣೆ ಎಂದು ಅವರು ವಾದಿಸುತ್ತಾರೆ.

ನೇಪಾಳ ದಂಗೆಯ ಬೆನ್ನಿಗೇ ಸೋಶಿಯಲ್ ಮೀಡಿಯಾದಲ್ಲಿ ಬಿಜೆಪಿ ಐಟಿ ಸೆಲ್ ಮೂಲಕ ನೇಪಾಳದಲ್ಲಿ ಮೋದಿಯಂತಹ ನಾಯಕ ಬೇಕು ಎಂದು ಅಲ್ಲಿನ ಜನ ಆಗ್ರಹಿಸುತ್ತಿದ್ದಾರೆ ಎಂಬ ಪ್ರಚಾರ ನಡೆಯಿತು. ನೇಪಾಳಕ್ಕೆ ಹೋದ ಭಾರತದ ಟಿವಿ ಚಾನಲ್ ಗಳ ವರದಿಗಾರರೂ ಅಲ್ಲಿನ ಜನರಿಂದ ಟೀಕೆಗೆ ಗುರಿಯಾದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News