ಬಾಂಗ್ಲಾದೇಶಕ್ಕೆ ಗಡೀಪಾರು ಮಾಡಿದ ಗರ್ಭಿಣಿ, ಆಕೆಯ ಮಗುವನ್ನು ವಾಪಸ್ ಕರೆತರಲಾಗುವುದು: ಸುಪ್ರೀಂ ಕೋರ್ಟ್ ಗೆ ತಿಳಿಸಿದ ಕೇಂದ್ರ ಸರ್ಕಾರ
Photo credit: PTI
ಹೊಸದಿಲ್ಲಿ: ಬಾಂಗ್ಲಾದೇಶಕ್ಕೆ ಗಡೀಪಾರು ಮಾಡಲಾದ ಗರ್ಭಿಣಿ ಸುನಾಲಿ ಖಾತೂನ್ ಮತ್ತು ಅವರ 8 ವರ್ಷದ ಮಗ ಸಬೀರ್ ಅವರನ್ನು ಮಾನವೀಯ ಆಧಾರದ ಮೇಲೆ ಭಾರತಕ್ಕೆ ಮರಳಿ ಕರೆತರಲು ಕೇಂದ್ರ ಸರ್ಕಾರ ಒಪ್ಪಿರುವುದಾಗಿ ಸುಪ್ರೀಂ ಕೋರ್ಟ್‌ಗೆ ಬುಧವಾರ ತಿಳಿಸಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರನ್ನೊಳಗೊಂಡ ಪೀಠದ ಮುಂದೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹಾಜರಾಗಿ ಸರ್ಕಾರದ ನಿಲುವನ್ನು ಸ್ಪಷ್ಟಪಡಿಸಿದರು.
“ಮಾನವೀಯ ಆಧಾರದ ಮೇಲೆ ಸುನಾಲಿ ಖಾತೂನ್ ಮತ್ತು ಅವರ ಮಗನನ್ನು ಭಾರತಕ್ಕೆ ಕರೆತರಲಾಗುತ್ತದೆ. ಆದರೆ ಇದು ಅರ್ಹತೆಗಳ ಕುರಿತು ನಮ್ಮ ವಾದಗಳು ಹಾಗೂ ಅವರನ್ನು ಕಣ್ಗಾವಲಿನಲ್ಲಿಡುವ ನಮ್ಮ ಹಕ್ಕಿನ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ,” ಎಂದು ಎಸ್‌ಜಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಭೋದು ಶೇಖ್ ಎಂಬವರು ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯಲ್ಲಿ ತಮ್ಮ ಮಗಳು, ಅಳಿಯ ಮತ್ತು ಮೊಮ್ಮಗನನ್ನು ದಿಲ್ಲಿಯಿಂದ ಬಂಧಿಸಿ ಬಾಂಗ್ಲಾದೇಶಕ್ಕೆ ಕಳುಹಿಸಲಾಗಿದೆ ಎಂದು ಅವರು ಆರೋಪಿಸಿದ್ದರು.
ಸೋಮವಾರ ನ್ಯಾಯಾಲಯವು ಮಹಿಳೆ ಮತ್ತು ಮಗನನ್ನು ವಾಪಸ್ ಕರೆತರಬಹುದೇ ಎಂದು ಕೇಳಿದ್ದ ಪ್ರಶ್ನೆಗೆ ಇಂದು ಸರ್ಕಾರದಿಂದ ಸಮ್ಮತಿ ಸೂಚಿಸಿದೆ.
ನ್ಯಾಯಾಲಯ ತನ್ನ ಆದೇಶದಲ್ಲಿ, ಸುನಾಲಿ ಮತ್ತು ಸಬೀರ್ ಅವರನ್ನು ಮಾನವೀಯ ಆಧಾರದ ಮೇಲೆ ಕೇಂದ್ರ ವಾಪಸ್ ಕರೆತರಲಿದೆ ಎಂದು ದಾಖಲಿಸಿದೆ. ದಿಲ್ಲಿಯಿಂದ ಬಂಧಿಸಲ್ಪಟ್ಟಿದ್ದರಿಂದ ಸುನಾಲಿಯನ್ನು ಮೊದಲು ದಿಲ್ಲಿಗೇ ತರಲಾಗುವುದು ಎಂದು ಎಸ್‌ಜಿ ತಿಳಿಸಿದ್ದಾರೆ. ಆದರೆ ಮಹಿಳೆಯ ತಂದೆ ಪಶ್ಚಿಮ ಬಂಗಾಳದ ಬಿರ್ಭುಮ್ ಜಿಲ್ಲೆಯಲ್ಲಿ ವಾಸವಾಗಿರುವ ಹಿನ್ನೆಲೆಯಲ್ಲಿ ಅವರನ್ನು ಅಲ್ಲಿಗೆ ಸ್ಥಳಾಂತರಿಸುವುದೇ ಸೂಕ್ತವೆಂದು ಪ್ರತಿವಾದಿಗಳ ಪರ ಹಿರಿಯ ವಕೀಲರು ಅಭಿಪ್ರಾಯಪಟ್ಟರು.
ಗರ್ಭಿಣಿಯ ಸ್ಥಿತಿಯನ್ನು ಪರಿಗಣಿಸಿ, ಪಶ್ಚಿಮ ಬಂಗಾಳ ಸರ್ಕಾರವು ಉಚಿತ ವೈದ್ಯಕೀಯ ಚಿಕಿತ್ಸೆ ಒದಗಿಸಬೇಕೆಂದು ಹಾಗೂ ಮಗನ ಆರೈಕೆಗೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಪೀಠವು ಸೂಚಿಸಿದೆ.
ಈ ಪ್ರಕರಣ ಕಲ್ಕತ್ತಾ ಹೈಕೋರ್ಟ್ ನೀಡಿದ್ದ ತೀರ್ಪಿನ ವಿರುದ್ಧ ಕೇಂದ್ರ ಸಲ್ಲಿಸಿದ ವಿಶೇಷ ರಜೆ ಅರ್ಜಿಗೆ ಸಂಬಂಧಿಸಿದೆ.
ರಾಜ್ಯದ ಪರ ಹಿರಿಯ ವಕೀಲ ಕಪಿಲ್ ಸಿಬಲ್, ಗಡೀಪಾರು ಆದ ಇತರೆ ನಾಲ್ವರ ಕುರಿತೂ ಕೇಂದ್ರವು ಸೂಚನೆ ಪಡೆದು ಕ್ರಮ ಕೈಗೊಳ್ಳಬೇಕೆಂದು ವಿನಂತಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಎಸ್‌ಜಿ ಮೆಹ್ತಾ, “ಅವರು ಬಾಂಗ್ಲಾದೇಶಿಗಳು. ಈ ವಿಷಯ ಗಂಭೀರವಾದದ್ದು,” ಎಂದು ತಿಳಿಸಿದರು.
ವಿಚಾರಣೆಯಲ್ಲಿ ನ್ಯಾಯಮೂರ್ತಿ ಬಾಗ್ಚಿ, ಸುನಾಲಿ ಮತ್ತು ಭೋದು ಶೇಖ್ ನಡುವಿನ ಜೈವಿಕ ಸಂಬಂಧ ದೃಢವಾದರೆ ಮಹಿಳೆಯ ಭಾರತೀಯ ಪೌರತ್ವ ಪ್ರಶ್ನೆಯೂ ಸ್ಪಷ್ಟವಾಗಬಹುದು ಎಂದು ಅಭಿಪ್ರಾಯ ಪಟ್ಟರು.
ಈ ಪ್ರಕರಣದ ಮುಂದಿನ ವಿಚಾರಣೆ ಡಿಸೆಂಬರ್ 12ರಂದು ನಿಗದಿಯಾಗಿದೆ.