ಮುಂಬೈನ ಬಹುಮಹಡಿ ಕಟ್ಟಡದಲ್ಲಿ ಅಗ್ನಿ ಅವಘಡ: ಮಹಿಳೆ ಮೃತ್ಯು; 18 ಮಂದಿಗೆ ಗಾಯ
ಮುಂಬೈ: ಬಹುಮಹಡಿ ಕಟ್ಟಡವೊಂದರಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಓರ್ವ ಮಹಿಳೆ ಮೃತಪಟ್ಟು, 18 ಮಂದಿ ಗಾಯಗೊಂಡಿರುವ ಘಟನೆ ರವಿವಾರ ಉತ್ತರ ಮುಂಬೈನ ದಹಿಸಾರ್ ನಲ್ಲಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೂರ್ವ ದಹಿಸಾರ್ ನ ಶಾಂತಿನಗರದಲ್ಲಿರುವ 24 ಅಂತಸ್ತಿನ ನ್ಯೂ ಜನಕಲ್ಯಾಣ್ ಸೊಸೈಟಿ ಕಟ್ಟಡದಲ್ಲಿ ಮಧ್ಯಾಹ 3 ಗಂಟೆಗೆ ಬೆಂಕಿಯ ಜ್ವಾಲೆಗಳು ಕಾಣಿಸಿಕೊಂಡವು ಎಂದು ಓರ್ವ ಅಧಿಕಾರಿ ಹೇಳಿದ್ದಾರೆ.
“ಈ ಘಟನೆಯಲ್ಲಿ 36 ನಿವಾಸಿಗಳನ್ನು ರಕ್ಷಿಸಲಾಗಿದ್ದು, 19 ಮಂದಿಯನ್ನು ವಿವಿಧ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಪೈಕಿ ಏಳು ಮಂದಿಯನ್ನು ರೋಹಿತ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಓರ್ವ ಮಹಿಳೆ ಮೃತಪಟ್ಟಿದ್ದಾರೆ. ಈ ಪೈಕಿ ಓರ್ವ ಪುರುಷನ ಪರಿಸ್ಥಿತಿ ಗಂಭೀರವಾಗಿದೆ. ಗಾಯಾಳುಗಳ ಪೈಕಿ 10 ಮಂದಿಯನ್ನು ನಾರ್ದರ್ನ್ ಕೇರ್ ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು, ತಲಾ ಒಬ್ಬರನ್ನು ಪ್ರಗತಿ ಆಸ್ಪತ್ರೆ ಹಾಗೂ ಸಾರ್ವಜನಿಕ ಶತಾಬ್ದಿ ಆಸ್ಪತ್ರೆಗೆ ಸಾಗಿಸಲಾಗಿದೆ” ಎಂದು ಅವರು ತಿಳಿಸಿದ್ದಾರೆ.
“ಸಂಜೆ ಸುಮಾರು 4.30ರ ವೇಳೆಗೆ ಬೆಂಕಿಯ ಜ್ವಾಲೆಗಳು ಕಟ್ಟಡದ ಎಲ್ಲ ಬದಿಯನ್ನೂ ಆವರಿಸಿತ್ತು. ಈ ಬೆಂಕಿಯ ಜ್ವಾಲೆಗಳನ್ನು ಸಂಜೆ 6.10ರ ವೇಳೆಗೆ ನಂದಿಸಲಾಯಿತು. ಬೆಂಕಿಯ ತಾಪವನ್ನು ತಂಪಾಗಿಸುವ ಕಾರ್ಯಾಚರಣೆ ಪ್ರಗತಿಯಲ್ಲಿದ್ದು, ಬೆಂಕಿಯ ಜ್ವಾಲೆಯನ್ನು ನೆಲ ಅಂತಸ್ತಿನಿಂದ ನಾಲ್ಕನೆ ಅಂತಸ್ತಿಗೆ ತಲುಪುವ ವಿದ್ಯುತ್ ಕೊಳವೆಯಲ್ಲಿನ ತಂತಿಗಳು ಹಾಗೂ ಕೇಬಲ್ ಗಳಿಗೆ ಸೀಮಿತಗೊಳಿಸಲಾಗಿದೆ. ಇದರೊಂದಿಗೆ, ತಳ ಅಂತಸ್ತಿನಲ್ಲಿರುವ ಎರಡು ಸಾಮಾನ್ಯ ವಿದ್ಯುತ್ ಮೀಟರ್ ಕೊಠಡಿಗಳಿಗೂ ಸೀಮಿತಗೊಳಿಸಲಾಗಿದೆ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಕಿಯ ಜ್ವಾಲೆಗೆ ಕಾರಣವೇನು ಎಂಬ ಕುರಿತು ತನಿಖೆ ಪ್ರಗತಿಯಲ್ಲಿದೆ.
ಕಟ್ಟಡದ ಏಳನೆ ಅಂತಸ್ತಿನಲ್ಲಿ ಬೆಂಕಿ ಕಾಣಿಸಿಕೊಂಡಿತು ಎಂದು ಮೊದಲಿಗೆ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ತಿಳಿಸಿದ್ದರು.