×
Ad

ರಾಜಸ್ಥಾನ | ಗರ್ಭಧಾರಣೆಯಾಗದ ಕಾರಣಕ್ಕೆ ಮಹಿಳೆಯನ್ನು ಜೀವಂತವಾಗಿ ಸುಟ್ಟು ಹತ್ಯೆ!

ಪೊಲೀಸರ ಮೇಲೂ ದಾಳಿ

Update: 2025-09-19 11:48 IST

Photo credit: NDTV

ಜೈಪುರ: ದೀಗ್ ಜಿಲ್ಲೆಯ ಕಾಂಕ್ಡಾ ಗ್ರಾಮದಲ್ಲಿ ನಡೆದ ಹೃದಯವಿದ್ರಾವಕ ಘಟನೆ ಸಾಮಾಜಿಕ ವಲಯದಲ್ಲಿ ಆಕ್ರೋಶ ಮೂಡಿಸಿದೆ. ಗರ್ಭಧಾರಣೆ ಆಗದ ಕಾರಣಕ್ಕೆ ಅತ್ತೆ-ಮಾವಂದಿರು ಸೇರಿ 40ರ ವಯಸ್ಸಿನ ಮಹಿಳೆ ಸರಳಾ ದೇವಿ ಅವರನ್ನು ಸಗಣಿ ಕೇಕ್‌ ಗಳ ರಾಶಿಯಲ್ಲಿ ಜೀವಂತವಾಗಿ ಸುಟ್ಟು ಹತ್ಯೆ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.

2005ರಲ್ಲಿ ಅಶೋಕ್ ಅವರನ್ನು ವಿವಾಹವಾಗಿದ್ದ ಸರಳಾ ದೇವಿಗೆ ಮಕ್ಕಳಾಗದ ಕಾರಣದಿಂದ ಅತ್ತೆ ಸುಖಬೀರ್ ಸಿಂಗ್, ಮಾವಿ ರಾಜವತಿ, ಸೋದರ ಮಾವ ರಾಜು ಹಾಗೂ ಸೊಸೆಗಳು ಪೂಜಾ ಮತ್ತು ಪೂನಂ ವರ್ಷಗಳಿಂದ ಆಕೆಗೆ ಕಿರುಕುಳ ನೀಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಮಂಗಳವಾರ ಬೆಳಗ್ಗೆ ಕುಟುಂಬದ ಸದಸ್ಯರೆಲ್ಲಾ ಆಕೆಯನ್ನು ಥಳಿಸಿ, ಬಳಿಕ ಬೆಂಕಿ ಹಚ್ಚಿ ಕೊಲೆ ಮಾಡಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಈ ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪೊಲೀಸ್ ತಂಡವು ಶವವನ್ನು ದಹನ ಮಾಡಲು ಯತ್ನಿಸುತ್ತಿದ್ದ ಗ್ರಾಮಸ್ಥರನ್ನು ತಡೆಯಲು ಮುಂದಾದಾಗ, ಆರೋಪಿಗಳು ಹಾಗೂ ಸ್ಥಳೀಯರು ಸೇರಿ ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ್ದಾರೆ. ಪೊಲೀಸರ ಸಮವಸ್ತ್ರ ಹರಿದುಹೋಗಿದ್ದು, ಅಧಿಕಾರಿಗಳು ಹಿಂದೆ ಸರಿಯಬೇಕಾಯಿತು ಎಂದು ವರದಿಯಾಗಿದೆ.

ನಂತರ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಹೆಚ್ಚುವರಿ ಪಡೆ ಗ್ರಾಮಕ್ಕೆ ಭೇಟಿ ನೀಡಿ, ಚಿತೆಯಿಂದ ಶವವನ್ನು ಹೊರತೆಗೆದು ಜಿಲ್ಲಾ ಆಸ್ಪತ್ರೆಗೆ ಕಳುಹಿಸಿತು. ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಯಿತು.

ದೀಗ್ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎ.ಕೆ. ಶರ್ಮಾ ಅವರು, ಆರೋಪಿಗಳು ಸಾಕ್ಷ್ಯಗಳನ್ನು ಅಳಿಸಿಹಾಕುವ ಉದ್ದೇಶದಿಂದಲೇ ಮೃತದೇಹವನ್ನು ತುರ್ತಾಗಿ ದಹನ ಮಾಡಲು ಯತ್ನಿಸಿದ್ದಾರೆ ಎಂದು ತಿಳಿಸಿದ್ದಾರೆ. ಜಿಲ್ಲಾ ಎಸ್‌ಪಿ ಓಂ ಪ್ರಕಾಶ್ ಮೀನಾ ಅವರು, ಈ ಪ್ರಕರಣದಲ್ಲಿ ಕೊಲೆ, ಸಾಕ್ಷ್ಯ ನಾಶ ಮತ್ತು ಸರ್ಕಾರಿ ಅಧಿಕಾರಿಗಳ ಮೇಲಿನ ಹಲ್ಲೆ ಸೇರಿದಂತೆ ಹಲವು ಆರೋಪಗಳಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News