×
Ad

ಮತವಂಚನೆ | ಪುಣೆ ಮತ್ತು ಬಿಹಾರದಲ್ಲೂ ಮತ ಹಾಕಿದ ಮಹಿಳೆ?

Update: 2025-11-07 20:20 IST

ಸಾಂದರ್ಭಿಕ ಚಿತ್ರ

ಹೊಸದಿಲ್ಲಿ, ನ. 7: ಕಳೆದ ವರ್ಷ ನಡೆದ ಹರ್ಯಾಣ ವಿಧಾನಸಭಾ ಚುನಾವಣೆಯ ಮತದಾರರ ಪಟ್ಟಿಯಲ್ಲಿ 22 ಮತದಾರರ ಹೆಸರುಗಳಿಗೆ ಬ್ರೆಝಿಲ್ ರೂಪದರ್ಶಿಯೊಬ್ಬರ ಚಿತ್ರ ಹಾಕಿರುವುದು ದೊಡ್ಡ ಸುದ್ದಿಯಾದ ಬಳಿಕ, ಈಗ ಭಾರತೀಯ ಮಹಿಳೆಯೊಬ್ಬರು ಇನ್ನೊಂದು ವಿವಾದಲ್ಲಿ ಸಿಲುಕಿಕೊಂಡಿದ್ದಾರೆ.

ಉರ್ಮಿ ಎಂಬ ಹೆಸರಿನಲ್ಲಿ ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಖಾತೆಯನ್ನು ಹೊಂದಿರುವ ಈ ಮಹಿಳೆಯು 2024ರ ಲೋಕಸಭಾ ಚುನಾವಣೆಯಲ್ಲಿ ಪುಣೆಯಲ್ಲಿ ಮತ ಹಾಕಿದ್ದರೆನ್ನಲಾಗಿದೆ. ಈಗ ಬಿಹಾರ ವಿಧಾನಸಭಾ ಚುನಾವಣೆಯಲ್ಲೂ ಅವರು ಮತ ಚಲಾಯಿಸಿದ್ದಾರೆ ಎಂದು ಹೇಳಲಾಗಿದೆ.

ತನ್ನ ‘ಎಕ್ಸ್’ ಖಾತೆಯಲ್ಲಿ ಅವರು ಹಾಕಿರುವ ಎರಡು ಸಂದೇಶಗಳಲ್ಲಿ, ಮತ ಹಾಕಿದ ಬಳಿಕ ಶಾಯಿ ಹಾಕಿದ ಬೆರಳುಗಳನ್ನು ತೋರಿಸುವ ಚಿತ್ರಗಳಿವೆ. ಆದರೆ, ಈ ಚಿತ್ರಗಳು ಎರಡು ಭಿನ್ನ ಚುನಾವಣೆಗಳು ಮತ್ತು ಎರಡು ಭಿನ್ನ ರಾಜ್ಯಗಳದ್ದಾಗಿವೆ.

‘‘ಹೋಗಿ ಮತ ಹಾಕು, ಪುಣೆ! ಅಭಿವೃದ್ಧಿ, ಶುದ್ಧ ಆಡಳಿತ, ಮೋದಿಯಿಂದಾಗಿ ಬದಲಾದ ಭಾರತಕ್ಕಾಗಿ ಮತ ಹಾಕಿದೆ!’’ ಎಂಬುದಾಗಿ ಆ ಮಹಿಳೆ 2024 ಮೇ 13ರಂದು ಹಾಕಿದ ಸಂದೇಶದಲ್ಲಿ ಬರೆದಿದ್ದಾರೆ. ಆದರೆ, 2025 ನವೆಂಬರ್ 6ರ ಇನ್ನೊಂದು ಸಂದೇಶದಲ್ಲಿ, ‘‘ಮೋದಿಯಿಂದಾಗಿ ಬದಲಾದ ಭಾರತಕ್ಕಾಗಿ ಮತ ಹಾಕಿದೆ! ಜಾಯಿ ಕೆ ವೋಟ್ ಡಾಲಿ, ಬಿಹಾರ್!’’ ಎಂದು ಬರೆದಿದ್ದಾರೆ.

ಇದು ಮತವಂಚನೆ ನಡೆಯುತ್ತಿರುವುದಕ್ಕೆ ಪುರಾವೆಯಾಗಿದೆ ಎಂಬುದಾಗಿ ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ.

ಈ ಸಂದೇಶ ವೈರಲ್ ಆದ ಬಳಿಕ, ಆ ಮಹಿಳೆ ಇನ್ನೊಂದು ಸಂದೇಶ ಹಾಕಿ, ‘‘ಅದು ಪ್ರೇರಣಾ ಸಂದೇಶವಾಗಿತ್ತು. ಇಂದು ನಾನು ಮತ ಹಾಕಿದ್ದೇನೆ ಎಂದು ನಾನು ಯಾವತ್ತೂ ಹೇಳಿಲ್ಲ. ನಾನು ಮತ ಹಾಕಿದೆ ಎಂದು ಹೇಳಿದೆ. ಆದರೆ, ಅದು ಮಹಾರಾಷ್ಟ್ರದಲ್ಲಿ ಎಂದು ಎಲ್ಲರಿಗೂ ಗೊತ್ತು!’’ ಎಂದು ಹೇಳಿಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News